'ವೆಟ್ಟೆಯಾನ್' ಚಿತ್ರಕ್ಕೆ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಪಡೆದ ಸಂಭಾವನೆ ಎಷ್ಟು?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಜುಗಲ್‌ಬಂದಿಯ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಚಿತ್ರದ ಟ್ರೈಲರ್ ಇತ್ತೀಚೆಗೆ ಬಂದಿತ್ತು. ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ತಲೈವಾ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಫಸ್ಟ್ ಡೇ ಸಿನಿಮಾ ನೋಡಲು ಕಾಯುತ್ತಿದ್ದಾರೆ.
ಬಿಗ್ ಬಿ ಅಮಿತಾಬ್ ಬಚ್ಚನ್ 'ವೆಟ್ಟೆಯಾನ್' ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಶೇಷ ನ್ಯಾಯಾಧೀಶ ಸತ್ಯದೇವ್ ಆಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಹಾಗೂ ಅಮಿತಾಬ್ ಪಾತ್ರಗಳ ನಡುವಿನ ಶೀತಲ ಸಮರವೇ ಚಿತ್ರದ ಹೈಲೆಟ್. ಇನ್ನುಳಿದಂತೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ಅಭಿರಾಮಿ, ಕಿಶೋರ್ ಸೇರಿದಂತೆ ಘಟಾನುಘಟಿ ಕಲಾವಿದರು 'ವೆಟ್ಟೆಯಾನ್' ಬಳಗದಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದೆ.

ಮೂರು ವರ್ಷಗಳ ಹಿಂದೆ ನಿರ್ದೇಶಕ ಜ್ಞಾನವೇಲ್ 'ಜೈಭೀಮ್' ಸಿನಿಮಾ ಕಟ್ಟಿಕೊಟ್ಟಿದ್ದರು. ಆರೋಪಿಗಳ ಮೇಲೆ ಪೊಲೀಸರ ದೌರ್ಜನ್ಯ, ಎನ್‌ಕೌಂಟರ್ ಹೆಸರಿನಲ್ಲಿ ಅಬ್ಬರಿಸುವುದದ ಬಗ್ಗೆ ಆ ಚಿತ್ರದಲ್ಲಿ ಚರ್ಚಿಸಿದ್ದರು. ಆದರೆ 'ವೆಟ್ಟೆಯಾನ್' ಚಿತ್ರದಲ್ಲಿ ಅದಕ್ಕೆ ಕೊಂಚ ಭಿನ್ನವಾಗಿ ಎನ್‌ಕೌಂಟರ್ ಯಾಕೆ ಅಗತ್ಯ ಎನ್ನುವ ದಾಟಿಯಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಇದನ್ನು ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ಎನ್ನುವುದು ಕಷ್ಟ.
ಗಂಭೀರ ಸಂಗತಿಗಳನ್ನು ಇಟ್ಟುಕೊಂಡು ಜ್ಞಾನವೇಲ್ 'ವೆಟ್ಟೆಯಾನ್' ಸಿನಿಮಾ ಕಟ್ಟಿಕೊಟ್ಟಿರುವುದು ಸ್ಯಾಂಪಲ್‌ಗಳಲ್ಲಿ ಗೊತ್ತಾಗುತ್ತಿದೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಹುಬ್ಬಳ್ಳಿ ಕನ್ನಡಿಗ ವಿಶ್ವನಾಥ್ ಸಜ್ಜನರ್ ಈ ಚಿತ್ರದ ನಾಯಕನ ಪಾತ್ರಕ್ಕೆ ಪ್ರೇರಣೆ ಎನ್ನುವ ಚರ್ಚೆ ಕೂಡ ನಡೀತಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇತ್ತೀಚೆಗೆ ರೀ ರೆಕಾರ್ಡಿಂಗ್ ಮುಗಿಸಿರುವ ಅನಿರುದ್ಧ್ ಚಿತ್ರಕ್ಕೆ ಒಳ್ಳೆ ಅಂಕ ನೀಡಿದ್ದಾರೆ. ಸಿನಿಮಾ ಗೆಲ್ಲುತ್ತದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
'ವೆಟ್ಟೆಯಾನ್' ಚಿತ್ರದ ಬಜೆಟ್ 150 ಕೋಟಿ ರೂ. ದಾಟಿದೆ. ನಿರ್ದೇಶಕರು ಕೇಳಿದ್ದನ್ನೆಲ್ಲಾ ಕೊಟ್ಟು ಲೈಕಾ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಇನ್ನು ಒಟ್ಟಾರೆ ಬಜೆಟ್‌ನಲ್ಲಿ ಮುಕ್ಕಾಲು ಭಾಗ ತಲೈವಾಗೆ ಸಂಭಾವನೆ ರೂಪದಲ್ಲಿ ನೀಡಿದ್ದಾರೆ ಎನ್ನಲಾಗ್ತಿದೆ. ರಜನಿಕಾಂತ್ ಹೆಸರಿನ ಮೇಲೆಗೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಉಳಿದದ್ದೆಲ್ಲಾ ನಂತರದ ಮಾತು. ಹಾಗಾಗಿ ಭಾರೀ ಮೊತ್ತ ಸಂಭಾವನೆ ರೂಪದಲ್ಲಿ ಅವರ ಜೇಬು ಸೇರಿದೆ.

ಚಿತ್ರದಲ್ಲಿ ಎಸ್‌ಪಿ ಅಜಿತ್ ಐಪಿಎಸ್ ಆಗಿ ರಜನಿಕಾಂತ್ ನಟಿಸಿದ್ದಾರೆ. ವಯಸ್ಸು 70 ದಾಟಿದರೂ ಸಖತ್ ಎನರ್ಜಿಟಿಕ್ ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ತಲೈವಾ 125 ಕೋಟಿ ರೂ. ಸಂಭಾವನೆ ಪಡೆದಿರುವುದಾಗಿ ಹೇಳಲಾಗ್ತಿದೆ. ಎರಡು ವರ್ಷಗಳ ಹಿಂದೆ ರಜನಿಕಾಂತ್ ಜೊತೆ ಲೈಕಾ ಸಂಸ್ಥೆ ಎರಡು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 250 ಕೋಟಿ ಸಂಭಾವನೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಚಿತ್ರವನ್ನು ಇದೇ ಲೈಕಾ ಸಂಸ್ಥೆ ನಿರ್ಮಿಸಿತ್ತು. ಐಸ್ವರ್ಯ ರಜನಿಕಾಂತ್ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಹೀನಾಯವಾಗಿ ಸೋತಿತ್ತು. ಇದೀಗ 'ವೆಟ್ಟೆಯಾನ್' ಸರದಿ. 'ಲಾಲ್ ಸಲಾಂ' ಹಾಗೂ 'ವೆಟ್ಟೆಯಾನ್' ಎರಡು ಚಿತ್ರಗಳಿಗೆ ಸೇರಿ 250 ಕೋಟಿ ರೂ. ಡೀಲ್ ನಡೆದಿತ್ತು ಎಂದು ಹೇಳಲಾಗುತ್ತಿದೆ. ಹಾಗಾಗಿ ಭಾರೀ ಸಂಭಾವನೆಯೇ ಈ ಚಿತ್ರಕ್ಕೂ ಸಿಕ್ಕಿದೆ.
ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ರಜನಿಕಾಂತ್ ಜೊತೆ ಬಿಗ್‌ಬಿ ನಟಿಸಿದ್ದಾರೆ. ದೇಶವಿದೇಶಗಳಲ್ಲಿ ಬಾಲಿವುಡ್ ಶೆಹನ್ ಶಾ ಕ್ರೇಜ್ ಹೇಗಿದೆ ಎನ್ನುವುದು ಗೊತ್ತೇಯಿದೆ. ಸತ್ಯದೇವ್ ಪಾತ್ರಕ್ಕಾಗಿ ಬಿಗ್‌ಬಿ 7 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಅಂದಾಜಿದೆ. ಇನ್ನುಳಿದಂತೆ ಫಹಾನ್ ಫಾಸಿಲ್ 2ರಿಂದ 3 ಕೋಟಿ ರೂ., ರಾಣಾ ದಗ್ಗುಬಾಟಿ 3ರಿಂದ 4ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











