Vettaiyan Karnataka Boxoffice: 'ವೆಟ್ಟೆಯಾನ್' ಕರ್ನಾಟಕದಲ್ಲಿ 10 ದಿನಕ್ಕೆ ಗಳಿಸಿದ್ದೆಷ್ಟು?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫಸ್ಟ್ ವೀಕೆಂಡ್ ಬಳಿಕ ಸಿನಿಮಾ ಸದ್ದು ಕೊಂಚ ಕಮ್ಮಿ ಆಗಿತ್ತು. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಚಿತ್ರಕ್ಕೆ ಹಿನ್ನೆಡೆ ಆಗಿತ್ತು ಎನ್ನುವುದು ಕೆಲವರ ಲೆಕ್ಕಾಚಾರ. ಸದ್ಯ ಸಿನಿಮಾ ಮತ್ತೆ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಳ್ತಿದೆ.
ಸದ್ಯ 'ವೆಟ್ಟೆಯಾನ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಜ್ಞಾನವೇಲ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಮನಗೆದ್ದಿದೆ. ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಫಹಾದ್ ಫಾಸಿಲ್ ರೀತಿಯ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಎನ್‌ಕೌಂಟರ್ ಸುತ್ತಾ ಇಡೀ ಕಥೆಯನ್ನು ಹೇಳಿ ಜ್ಞಾನವೇಲ್ ಗೆದ್ದಿದ್ದಾರೆ.

ಕಳೆದ ವರ್ಷ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಕನ್ನಡ ನಟ ಶಿವರಾಜ್‌ಕುಮಾರ್, ಮಲಯಾಳಂ ನಟ ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಆ ಚಿತ್ರಕ್ಕೆ ಪ್ಲಸ್ ಆಗಿತ್ತು. ಕರ್ನಾಟಕದಲ್ಲಿ ಕೂಡ 'ಜೈಲರ್' ಸಿನಿಮಾ ಸಖತ್ ಸದ್ದು ಮಾಡಿತ್ತು. ಅದೇ ಹಾದಿಯಲ್ಲಿ ಇದೀಗ 'ವೆಟ್ಟೆಯಾನ್' ಆರ್ಭಟ ಮುಂದುವರೆದಿದೆ.
ಈ ವಾರ ಹೊಸದಾಗಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿಲ್ಲ. ಅದು 'ವೆಟ್ಟೆಯಾನ್' ಓಟಕ್ಕೆ ಪ್ಲಸ್ ಆಗಿದೆ. ದೀಪಾವಳಿವರೆಗೂ ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಕೂಡ ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ರಜನಿಕಾಂತ್ 'ವೆಟ್ಟೆಯಾನ್' ಚಿತ್ರಕ್ಕೆ ಕೆಲವರು ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಸಿನಿಮಾ ಮಾತ್ರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ.

'ವೆಟ್ಟೆಯಾನ್' ಸಿನಿಮಾ ತೆರೆಕಂಡ ಮರುದಿನ ಕನ್ನಡದ 'ಮಾರ್ಟಿನ್' ಸಿನಿಮಾ ತೆರೆಗಪ್ಪಳಿಸಿತ್ತು. ಧ್ರುವ ಸರ್ಜಾ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಟಫ್ ಕಾಂಪಿಟೇಷನ್ ಕೊಟ್ಟಿತ್ತು. ಆದರೆ 'ಮಾರ್ಟಿನ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅದ್ಭುತ ಸಿನಿಮಾ ಎಂದು ಕೊಂಡಾಡಿದರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಕರ್ನಾಟಕದಲ್ಲಿ 'ವೆಟ್ಟೆಯಾನ್' ಬಾಕ್ಸಾಫೀಸ್ 10 ದಿನಕ್ಕೆ 22. 85 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಈ ವಾರ ಸಿನಿಮಾ 25 ಕೋಟಿ ರೂ. ಗಡಿ ದಾಟುವ ಅಂದಾಜಿದೆ. ಈ ಹಿಂದೆ ಕೂಡ ರಜನಿಕಾಂತ್ ನಟನೆಯ 'ಜೈಲರ್' ಹಾಗೂ '2.O' ಚಿತ್ರಗಳು ಹೆಚ್ಚು ಗಳಿಕೆ ಕಂಡಿದ್ದವು.
ವಿಶ್ವದಾದ್ಯಂತ ಫಸ್ಟ್ ವೀಕೆಂಡ್ 'ವೆಟ್ಟೆಯಾನ್' 240 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. 'ಜೈಭೀಮ್' ರೀತಿಯ ಕ್ಲಾಸ್ ಸಿನಿಮಾ ಕಟ್ಟಿಕೊಟ್ಟಿದ್ದ ಜ್ಞಾನವೇಲ್ ಈ ಬಾರಿ ಕ್ಲಾಸ್ ಹಾಗೂ ಮಾಸ್ ಎರಡನ್ನು ಸೇರಿಸಿ 'ವೆಟ್ಟೆಯಾನ್' ಸಿನಿಮಾ ಮಾಡಿ ಗೆದ್ದಿದ್ದಾರೆ. ರಜನಿಕಾಂತ್ ಅಭಿಮಾನಿಗಳು ಬಯಸುವ ಭರ್ಜರಿ ಮನರಂಜನೆ ಕೂಡ ಚಿತ್ರದಲ್ಲಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಅನಿರುದ್ಧ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಸದ್ಯ 'ವೆಟ್ಟೆಯಾನ್' ಚಿತ್ರದ ಪ್ರೀಕ್ವೆಲ್ ಮಾಡುವ ಬಗ್ಗೆ ಕಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಚಿತ್ರದಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಥಿಯಾನ್ IPS ಪಾತ್ರದಲ್ಲಿ ರಜನಿಕಾಂತ್ ಅಬ್ಬರಿಸಿದ್ದಾರೆ. ಅಥಿಯಾನ್ ಯಾರು? ಆತನ ಹಿನ್ನೆಲೆ ಏನು? ಎನ್ನುವ ಕೋನದಲ್ಲಿ ಒಂದು ಸಿನಿಮಾ ಮಾಡಬಹುದು ಎಂದು ಜ್ಞಾನವೇಲ್ ಹೇಳಿದ್ದಾರೆ. ಆದರೆ ಇದು ಬರೀ ನಮ್ಮ ಲೆಕ್ಕಾಚಾರ ಅಷ್ಟೆ. ಮುಂದಿನ ದಿನಗಳಲ್ಲಿ ಏನಾಗೂತ್ತೋ ನೋಡೋಣ ಎಂದಿದ್ದಾರೆ.


Click it and Unblock the Notifications











