Vidaamuyarchi Box office Day 5 ; ವಿವೇಗಂ, ವಿಶ್ವಾಸಂ, ವಲಿಮೈ, ಅಜಿತ್‌ಗೆ ಈ ಬಾರಿ ಕೈ ಹಿಡಿಯಲಿಲ್ಲ 'ವಿ' ಅಕ್ಷರ..!
ಈ ಕಡೆ ತಮ್ಮದೇ ಚಿತ್ರ ಬಿಡುಗಡೆಯಾಗಿದ್ದರೆ ಆ ಕಡೆ ಫೋರ್ಚುಗಲ್‌ನಲ್ಲಿ ಕಾರ್ ರೇಸ್‌ನಲ್ಲಿ ಅಜಿತ್ ತಲ್ಲೀನರಾಗಿದ್ದಾರೆ. ತಮ್ಮ ಚಿತ್ರದ ಕಥೆ ಏನಾಯ್ತು ಎಂಬ ಜಿಜ್ಞಾಸೆ ಕೂಡ ಅಜಿತ್ ಅವರಲ್ಲಿ ಇಲ್ಲ. ನಿರ್ಮಾಪಕ- ವಿತರಕರಿಗೆ ಕರೆ ಮಾಡಿ ಲಾಭ ನಷ್ಟದ ಲೆಕ್ಕ ಕೇಳುವಷ್ಟು ಪುರಸೊತ್ತು ಕೂಡ ಅಜಿತ್‌ಗೆ ಇಲ್ಲ. ಅಜಿತ್ ಇರುವುದೇ ಹಾಗೇ. ಚಿತ್ರರಂಗದವರಿಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ತಮ್ಮ ನೋವನ್ನು ಮನದಲ್ಲಿಯೇ 'ವಿಡಾಮುಯಾರ್ಚಿ' ನಿರ್ಮಾಪಕರು ಅನುಭವಿಸುತ್ತಿದ್ದಾರೆ.
ಹೌದು, ಅಸಲಿಗೆ ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಅಜಿತ್ ಅಬ್ಬರಕ್ಕೆ ಕೇವಲ ಮೂರೇ ದಿನದಲ್ಲಿ ನಿರ್ಮಾಪಕರ ಜೇಬಿಗೆ 100 ಕೋಟಿ ಹಣ ಬಂದು ಬೀಳುತ್ತಿತ್ತು. ವೀವೇಗಂ, ವಿಶ್ವಾಸಂ, ವಲಿಮೈ, ತುಣಿವು, ಇವೆಲ್ಲ ನೂರು ಕೋಟಿ ಹಣವನ್ನು ಗಳಿಸಿದ್ದು ಕೇವಲ ಮೂರು ದಿನದಲ್ಲಿ ಮಾತ್ರ. ಆದರೆ, 'ವಿಡಾಮುಯಾರ್ಚಿ' ಬಾಕ್ಸಾಫೀಸ್‌ನಲ್ಲಿ ವಿಲ ವಿಲ ಒದ್ದಾಡುತ್ತಿದೆ. ತೆರೆಗೆ ಬಂದು ನಾಲ್ಕು ದಿನವಾದರೂ ಚಿತ್ರದ ಗಳಿಕೆ ತೆವಳುತ್ತಾ ಸಾಗಿದೆ.

ಹೌದು, ಕಳೆದ ಗುರುವಾರ ತೆರೆಗೆ ಬಂದ ವಿಡಾಮುಯಾರ್ಚಿ ಮೊದಲ ದಿನ ಭರ್ಜರಿ ಗಳಿಕೆಯನ್ನು ಮಾಡಿತ್ತು. ಭಾರತದಲ್ಲಿ 26 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಆದರೆ. ಮರು ದಿನ ವಿಡಮುಯಾರ್ಚಿ ಲಯ ತಪ್ಪಿತ್ತು. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಎರಡನೇ ದಿನ ವಿಡಾಮುಯಾರ್ಚಿ ಕೇವಲ ₹ ₹8.75 ಕೋಟಿಯನ್ನು ಮಾತ್ರ ಗಳಿಸಿತ್ತು. ಈ ಮೂಲಕ ಚಿತ್ರದ ಗಳಿಕೆಯಲ್ಲಿ ಶೇಕಡಾ -66.35% ಕುಸಿತವಾಗಿತ್ತು.
ಆದರೆ ಶನಿವಾರ ಈ ಗಳಿಕೆಯಲ್ಲಿ 31.71 % ಸುಧಾರಣೆ ಕಂಡು ಬಂತು. ಚಿತ್ರ ₹13.5 ಕೋಟಿಯನ್ನು ದೋಚಿತ್ತು. ಶನಿವಾರದ ಈ ಗಳಿಕೆಯಿಂದ ಸಹಜವಾಗಿ ಭಾನುವಾರದ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು. ಇನ್ನೂ ಹೆಚ್ಚಾಗಬೇಕಿದ್ದ ಗಳಿಕೆಯಲ್ಲಿ ಶೇಕಡಾ 11.70 % ಕುಸಿತವಾಯಿತು. ಚಿತ್ರ ಭಾನುವಾರ ಕೇವಲ ₹11.92 ಕೋಟಿಯನ್ನು ಮಾತ್ರ ಗಳಿಸಿತು.
ಹೀಗೆ ನಾಲ್ಕು ದಿನದಲ್ಲಿ 'ವಿಡಾಮುಯಾರ್ಚಿ' ಭಾರತದಲ್ಲಿ ಕೇವಲ ₹ 62.25 ಕೋಟಿಯನ್ನು ಮಾತ್ರ ಗಳಿಸಿದ ವಿಡಾಮುಯಾರ್ಚಿ ನಿನ್ನೆ ಬರೀ ₹ 3 ಕೋಟಿಯನ್ನು ಮಾತ್ರ ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆ ₹ 65 ಕೋಟಿಯ ಗಡಿಯನ್ನು ತಲುಪಿದೆ. ಇನ್ನು ನಿನ್ನೆ ಚಿತ್ರ ನೋಡುವ ಉತ್ಸಾಹ ತಮಿಳುನಾಡಿನಲ್ಲಿ ಶೇಕಡಾ 17.11% ಜನರಲ್ಲಿ ಮಾತ್ರ ಕಂಡು ಬಂದಿದೆ. ಇವತ್ತು ಕೂಡ ಚಿತ್ರ ನೋಡುವ ಹುಮ್ಮಸ್ಸು ಇದ್ದಂತೆ ಇಲ್ಲ. ಇನ್ನು ಸಪ್ತಸಾಗರದಾಚೆ ಕೂಡ ಈ ಬಾರಿ ಅಜಿತ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿಲ್ಲ. ₹35 ಕೋಟಿಯ ಮೇಲೆ ಚಿತ್ರದ ಗಳಿಕೆ ದಾಟಿಲ್ಲ.
ಒಟ್ನಲ್ಲಿ ಸದ್ಯ ವಿಡಾಮುಯಾರ್ಚಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಇತಿಹಾಸ ಬರೆಯುತ್ತೆ, ಅಜಿತ್ ವೃತ್ತಿ ಜೀವನದಲ್ಲಿಯೇ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತೆ ಎಂದು ಕಾಲಿವುಡ್‌ನ ಪಂಡಿತರು ಅಂದುಕೊಂಡಿದ್ದರು. ಅಜಿತ್ ಅವರ ಅಭಿಮಾನಿಗಳು ಕೂಡ ವಿಡಾಮುಯಾರ್ಚಿ ಚಿತ್ರ ಗೆಲ್ಲುತ್ತೆ ಎನ್ನುವ ಭರವಸೆಯಲ್ಲಿದ್ದರು. ಆದರೆ ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು ಎಂಬಂತೆ ವಿಡಾಮಯಾರ್ಚಿ ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗುತ್ತಿದೆ. 65 ಕೋಟಿಯನ್ನು ಮಾತ್ರ ಗಳಿಸಿದೆ. ಭಾರತದಲ್ಲಿ ಚಿತ್ರ ನೂರು ಕೋಟಿಯನ್ನು ಗಳಿಸುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ಸಿನಿಮಾದ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.


Click it and Unblock the Notifications











