ದಳಪತಿ ವಿಜಯ್ 69ನೇ ಚಿತ್ರಕ್ಕೆ ಮುಹೂರ್ತ ಭಾಗ್ಯ, ಕೊನೆಯ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟಿರಬಹುದು..?
ಚಿತ್ರರಂಗಕ್ಕೆ ಗುಡ್ ಬೈ ಹೇಳಿ ರಾಜಕೀಯದ ರಣರಂಗಕ್ಕೆ ಧುಮುಕಲು ತುದಿಗಾಲಿನಲ್ಲಿ ನಿಂತವರು ವಿಜಯ್. ಇಂಥಾ ವಿಜಯ್ ಸದ್ಯ ತಮ್ಮ ಕೊನೆಯ ಚಿತ್ರಕ್ಕೆ ಇಂದು ಚಾಲನೆ ನೀಡಿದ್ದಾರೆ. ಸರಳವಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ಧಾರೆ.
ಹೌದು, ವಿಜಯ್ ಅಭಿನಯದ 69ನೇ ಮತ್ತು ಕೊನೆಯ ಚಿತ್ರಕ್ಕೆ ಇಂದು ಮುಹೂರ್ತ ಮಾಡುವ ಮೂಲಕ ಮುನ್ನುಡಿಯನ್ನು ಬರೆಯಲಾಗಿದೆ. ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣದಡಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ವಿಜಯ್ ಎದುರು ಬಾಲಿವುಡ್‌ನ ಸ್ಟಾರ್ ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ಧಗಧಗಿಸಲಿದ್ದಾರೆ. ಈ ಮೂಲಕ ಎರಡನೇ ಬಾರಿ ತಮಿಳು ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಕುರಿತು ಇಂದು ಮುಹೂರ್ತ ಸಮಾರಂಭದಲ್ಲಿ ಮಾತನಾಡಿರುವ ಬಾಬಿ ಡಿಯೋಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ತಾವು ಅತ್ಯಂತ ಉತ್ಸಾಹದಿಂದ ಕಾಯುತ್ತಿರುವುದಾಗಿ ಹೇಳಿದ್ಧಾರೆ.

ಪೂಜಾ ಹೆಗ್ಡೆ ಈ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೂ .. ಪೂಜಾ ಪಾಲಿಗೆ ಕಳೆದ ಕೆಲ ವರ್ಷ ತುಂಬಾನೇ ಕಷ್ಟಕರವಾಗಿತ್ತು. ಮಾಡಿದ ಯಾವ ಚಿತ್ರವೂ ಗೆದ್ದಿಲ್ಲ. ರಾಧೆ ಶ್ಯಾಮ್.. ಬೀಸ್ಟ್ ಮತ್ತು ಆಚಾರ್ಯ.. ಪೂಜಾ ಅವರ ಖಾತೆಗೆ ಗೆಲುವು ಜಮಾ ಮಾಡಲಿಲ್ಲ. ಖ್ಯಾತಿಯನ್ನೂ ಹೆಚ್ಚಿಸಲಿಲ್ಲ. ಇದೆಲ್ಲದರಿಂದ ಪೂಜಾ ಹೆಗ್ಡೆ ಅವರನ್ನು ಒಂದು ಕಾಲದಲ್ಲಿ ಗೋಲ್ಡನ್ ಗರ್ಲ್ ಎನ್ನುತ್ತಿದ್ದವರೆಲ್ಲ ಈಗ ಐರನ್ ಲೆಗ್ ಅನ್ನುತ್ತಿದ್ದಾರೆ. ಈ ಅರ್ಥದಲ್ಲಿ ವಿಜಯ್ ಕೊನೆಯ ಚಿತ್ರ ಪೂಜಾ ಪಾಲಿಗೆ ತುಂಬಾನೇ ಮಹತ್ವದ್ದು.
ಇನ್ನೂ ವಿಜಯ್ ಅಭಿನಯದ ಈ ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಪ್ರೇಮಲು ಚಿತ್ರದ ಮೂಲಕ ಗಮನ ಸೆಳೆದ ಮಮತಾ ಬೈಜು ಇದ್ದಾರೆ. ಇವರ ಜೊತೆ ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನರೇನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೇ ಪ್ರಿಯಾಮಣಿ ಕೂಡ ಈ ಚಿತ್ರದ ಪ್ರಮುಖ ಭಾಗವಾಗಿರುವುದು ವಿಶೇಷ.
ಹೆಚ್. ವಿನೋದ್ ದಳಪತಿ 69 ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರೋ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ.ಉಳಿದಂತೆ ವಿಜಯ್ ಒಂದು ಚಿತ್ರಕ್ಕೆ ಇನ್ನೂರು ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತು ಇದೆ. GOAT ಚಿತ್ರಕ್ಕೆ 200 ಕೋಟಿಯನ್ನೂ ಪಡೆದಿದ್ದಾರೆ ಎಂದು ಖುದ್ದು ಆ ಚಿತ್ರದ ನಿರ್ಮಾಪಕಿಯೇ ಬಹಿರಂಗವಾಗಿಯೇ ಈ ಹಿಂದೆ ಹೇಳಿದ್ದು ಇದೆ. ಹೀಗಾಗಿ ಕನ್ನಡದ ನಿರ್ಮಾಣ ಸಂಸ್ಥೆಯಾದ ಕೆವಿಎನ್‌ದಿಂದ ಈ ಚಿತ್ರಕ್ಕೆ ವಿಜಯ್ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಕುತೂಹಲ ಈಗ ಅನೇಕರಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆಯುತ್ತಿದೆ. ಈ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಎಷ್ಟು ಹಣವನ್ನು ಮೀಸಲಿಟ್ಟಿರಬಹುದು ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಬಜೆಟ್ 500 ಕೋಟಿಗೂ ಅಧಿಕ.
ಅಂದ್ಹಾಗೇ 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ನಟ ವಿಜಯ್ ಪಕ್ಷದ ಟೈಟಲ್, ಧ್ವಜ ಹಾಗೂ ಚಿಹ್ನೆಗೆ ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕಿದೆ. ಇನ್ನೂ ಇತ್ತೀಚೆಗಷ್ಟೇ ತಮ್ಮ ಪಕ್ಷ 'ತಮಿಳಗ ವೆಟ್ರಿ ಕಳಗಂ'ನ ಧ್ವಜವನ್ನೂ ಅನಾವರಣ ಮಾಡಿರುವ ವಿಜಯ್ ತಮ್ಮ ಈ 69ನೇ ಚಿತ್ರದ ಚಿತ್ರೀಕರಣ ಮುಕ್ತಾಯವಾದ ನಂತರ ಫುಲ್ ಟೈಮ್ ರಾಜಕಾರಣಿಯಾಗುವ ನಿರ್ಧಾರವನ್ನು ಮಾಡಿದ್ದಾರೆ. ತಮಿಳುನಾಡಿನಾದ್ಯಂತ ಪಾದಯಾತ್ರೆ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಇನ್ನೂ.. ಕರುಣಾನಿಧಿ ಮತ್ತು ಜಯಲಲಿತಾ ಅಗಲಿಕೆಯ ನಂತರ ತಮಿಳು ರಾಜಕಾರಣದಲ್ಲಿ ಮಾಸ್ ಲೀಡರ್ ಕೊರತೆ ಎದ್ದು ಕಾಣುತ್ತಿದೆ. ಆ ಕೊರತೆಯನ್ನು ವಿಜಯ್ ನೀಗಿಸುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











