ನನ್ನ ಮಗುವಿನ ಸಾವಿಗೆ ವಿಜಯ್ ಅಣ್ಣಾನೇ ನೇರ ಕಾರಣ ; ಬಿಕ್ಕಿ ಬಿಕ್ಕಿ ಅತ್ತ ಬಿಗ್ ಬಾಸ್ ಚೆಲುವೆ
ವಿಜಯ್ ಹೊಡೆದ ವಿಶಲ್‌ಗೆ ದ್ರಾವಿಡ ಕೋಟೆ ಬೆಚ್ಚಿ ಬಿದ್ದಿದೆ. ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸದೊಂದು ಕ್ರಾಂತಿಯ ಅಲೆ ಎದ್ದಿದೆ. ಹಿಂದೆ ಕೇವಲ ಬಾಕ್ಸಾಫೀಸ್ ಕಿಂಗ್ ಆಗಿದ್ದ ದಳಪತಿ ಈಗ ಅಖಂಡ ತಮಿಳುನಾಡಿನ ಅಧಿಪತಿಯಾಗಿ ಹೊರ ಹೊಮ್ಮಿದ್ದಾರೆ.ಮುಖ್ಯಮಂತ್ರಿ ಗದ್ದುಗೆ ಏರಿ ಆಡಳಿತ ನಡೆಸುತ್ತಿದ್ದಾರೆ.
ಆದರೆ ವಿಜಯ್ ಅವರ ಈ ಗೆಲುವು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಜಯ್‌ಗೆ ದಕ್ಕಿದ್ದು ಕೇವಲ ಆಕಸ್ಮಿಕ ಗೆಲುವು ಮಾತ್ರ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನ ಮತ ಹಾಕಿದ್ದು ವಿಜಯ್ ಅವರ ಮುಖ ನೋಡಿ ಅಲ್ಲ ಬದಲಿಗೆ ಅವರು ಘೋಷಿಸಿದ ಉಚಿತ ಸ್ಕೀಮ್‌ಗಳನ್ನು ನೋಡಿ ಎನ್ನುತ್ತಿದ್ದಾರೆ. ಮುಂಬರುವ ಐದು ವರ್ಷದಲ್ಲಿ ತಮಿಳುನಾಡನ್ನು ವಿಜಯ್ ಸಾಲದ ಸುಳಿಯಲ್ಲಿ ಸಿಲುಕಿಸಲಿದ್ದಾರೆ ಎಂದು ಕೂಡ ವ್ಯಂಗ್ಯವಾಡುತ್ತಿದ್ದಾರೆ. ಆ ಪೈಕಿ ಒಬ್ಬರು ಜೂಲಿ.

ಹೌದು.. ಮರಿಯಾ ಜೂಲಿಯಾನಾ.. ''ಬಿಗ್ ಬಾಸ್''' ಜೂಲಿ ಎಂದೇ ಪಕ್ಕದ ಚೆನ್ನೈನಲ್ಲಿ ಖ್ಯಾತರಾದವರು ಇವರು. 2017ರಲ್ಲಿ ತಮಿಳರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೂಳಿ ಪಳಗಿಸುವ ''ಜಲ್ಲಿಕಟ್ಟು'' ಎಂಬ ದೇಸಿ ಕ್ರೀಡೆಯ ವಿರುದ್ಧ ದೇಶವ್ಯಾಪಿ ಆಕ್ರೋಶದ ಅಲೆ ಎದ್ದಿತ್ತಲ್ಲ..? ಆ ಕಾಲದಲ್ಲಿ ಬೆಳಕಿಗೆ ಬಂದ ಪ್ರತಿಭೆ ಇವರು.
3500 ವರ್ಷಗಳ ಇತಿಹಾಸ ಇದೆ ಎನ್ನಲಾಗುವ ಜಲ್ಲಿಕಟ್ಟುವನ್ನು ಸುಪ್ರೀಂಕೋರ್ಟ್ ನಿಷೇಧಿಸಿದಾಗ ವಿರೋಧ ಮಾಡಿದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಇದೇ ಮರಿಯಾ ಜೂಲಿಯಾನ.
ಹೀಗೆ ಸಿಕ್ಕ ಈ ಖ್ಯಾತಿಯ ಪ್ರಭೆಯಲ್ಲಿಯೇ ತಮಿಳು ''ಬಿಗ್ ಬಾಸ್''ನ ಮನೆಯನ್ನು ಪ್ರವೇಶ ಮಾಡಿ ಆ ನಂತರ ''ಬಿಗ್ ಬಾಸ್'' ಜೂಲಿ ಎಂದೇ ಜನಜನಿತರಾದ ಈ ಚೆಲುವೆ ಆ ನಂತರ್ ''ಬಿಗ್ ಬಾಸ್ ಜೋಡಿಗಳ್'' ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡರು. ನೋಡ .. ನೋಡುತ್ತಾ .. ತಮಿಳು ಕಿರುತೆರೆಯಲ್ಲಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದರು. ಇಷ್ಟೇ ಯಾಕೆ ಎರಡು ಮೂರು ಸಿನಿಮಾಗಳನ್ನು ಕೂಡ ಮಾಡಿದರು.
ಇಂಥಾ ಜೂಲಿ ತಮ್ಮ ಗರ್ಭಪಾತಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಕಾರಣ ಎಂದು ಹೇಳಿದ್ದಾರೆ. ಹೌದು, ಅಸಲಿಗೆ ವಿಜಯ್ ಚುನಾವಣೆಯ ಕಣಕ್ಕೆ ಧುಮುಕಿದ ಕ್ಷಣದಿಂದ ಡಿಎಂಕೆ ಪಕ್ಷದ ಬೆಂಬಲಿಗರಾಗಿರುವ ಜೂಲಿ, ವಿಜಯ್ ವಿರುದ್ಧ ಸಮರ ಸಾರಿದ್ದರು. ಬಾರೋ ವಿಜಯ್ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದ್ದರು.

ಜೂಲಿ ಅವರಾಡಿದ ಪ್ರತಿಯೊಂದು ಮಾತು ವಿಜಯ್ ಅವರ ಅಸಂಖ್ಯಾತ ಅಭಿಮಾನಿಗಳನ್ನು ಕೆರಳಿಸಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಜೂಲಿ ವಿರುದ್ಧ ಸಮರ ಸಾರಿದ್ದ ಟಿವಿಕೆ ಮಹಿಳಾ ಪದಾಧಿಕಾರಿಗಳು ಜೂಲಿಯನ್ನು ನಾಯಿ.. ಕಿಡ್ನಿ ಕಳ್ಳಿ.. ಎಂದು ಕರೆದಿದ್ದರು. ಸದ್ಯ ಇದೇ ವಿಚಾರವನ್ನು ಈಗ ಮತ್ತೊಮ್ಮೆ ಪ್ರಸ್ತಾಪ ಮಾಡಿರುವ ಜೂಲಿ ವಿಜಯ್ ಅಣ್ಣನಿಂದಲೇ ನನ್ನ ಗರ್ಭಪಾತವಾಯ್ತು ಎಂದಿದ್ದಾರೆ.
ಈ ಕುರಿತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ಜೂಲಿ, ತಮಗೆ ಆನ್‌ಲೈನ್ ಮೂಲಕ ಕಿರುಕುಳ ನೀಡಲಾಗುತ್ತಿದೆ, ತಮ್ಮ ಮೇಲೆ ಸೈಬರ್ ದಾಲಿ ನಡೆಯುತ್ತಿದೆ ಎಂದು ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಪೊಲೀಸರನ್ನು ಸಂಪರ್ಕಿಸಿ ಎಂಟು ಜನರ ವಿರುದ್ಧ ದೂರು ದಾಖಲಿಸಿದ್ದೆ ಎಂದು ಹೇಳಿದ್ಧಾರೆ.
ಆದರೆ, ಆ ಸಮಯದಲ್ಲಿ ಈ ಪ್ರಕರಣವು ಕ್ರಿಮಿನಲ್ ಮಾನನಷ್ಟ ವ್ಯಾಪ್ತಿಗೆ ಬರುವುದಿಲ್ಲ, ಬದಲಿಗೆ ಸಿವಿಲ್ ವ್ಯಾಪ್ತಿಗೆ ಬರುತ್ತದೆ ಎಂದು ತಮಗೆ ನಂತರ ನೋಟಿಸ್ ನೀಡಲಾಯಿತು ಎಂದು ಹೇಳಿರುವ ಜೂಲಿ, ಡಿಎಂಕೆ ಸರ್ಕಾರ ಬದಲಾಗಿ ಟಿವಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ನೋಟಿಸ್ ನೀಡಲಾಗಿದ್ದು, ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.
ಆ ನಂತರ, ತಮ್ಮ ವಿರುದ್ಧ 15 ಲಕ್ಷ ರೂಪಾಯಿಗಳ ಕಿಡ್ನಿ ಹಗರಣದ ಸುಳ್ಳು ಆರೋಪಗಳನ್ನು ಸೃಷ್ಟಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೂಲಿ, ನನ್ನ ಮದುವೆ ನಡೆದಿದ್ದು ತೀರಾ ಇತ್ತೀಚೆಗೆ, ಆದರೆ ಆನ್‌ಲೈನ್‌ನಲ್ಲಿ ನಡೆದ ಅತಿಯಾದ ಮಾನಸಿಕ ಕಿರುಕುಳ ಹಾಗೂ ಒತ್ತಡದಿಂದಾಗಿ ತಮ್ಮ ಮೊದಲ ಮಗು ಗರ್ಭದಲ್ಲೇ ಸಾವನ್ನಪ್ಪಿದೆ ಎಂದು ಕಣ್ಣೀರಿಟ್ಟಿದ್ದಾರೆ.
ನಾನು ಈ ಪರಿಸ್ಥಿತಿಯನ್ನು ಬಳಸಿ ಸಹಾನುಭೂತಿ ಗಳಿಸಬಹುದಿತ್ತು. ಆದರೆ ನನ್ನ ಮತ್ತು ನನ್ನ ಪತಿಯ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ಮಾನಹಾನಿಕರ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ಬಿಕ್ಕಿರುವ ಜೂಲಿ, ಯಾರಾದರೂ ಮಹಿಳೆಯರು ಟಿವಿಕೆ ಪಕ್ಷದ ವಿರುದ್ಧ ಮಾತನಾಡಿದರೆ, ಅವರ ಹೆಸರನ್ನು ಯಾವುದೇ ವಿವೇಚನೆ ಇಲ್ಲದೆ ಹಾಳುಗೆಡವಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಮುಂದುವರೆದು ತಾವು ದೂರು ನೀಡಿದ ಎಂಟು ಜನರು ಟಿವಿಕೆ ಪಕ್ಷದ ಬೆಂಬಲಿಗರಾಗಿರುವ ಕಾರಣಕ್ಕಾಗಿಯೇ ಪೊಲೀಸರು ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕೂಡ ಆರೋಪ ಮಾಡಿರುವ ಜೂಲಿ, ನನ್ನ ಮಗುವನ್ನು ನಾನು ಕಳೆದುಕೊಳ್ಳಲು ವಿಜಯ್ ಅಣ್ಣನೇ ಕಾರಣ ಎಂದು ಹೇಳಿದ್ದಾರೆ.
ವಿಜಯ್ ಅಣ್ಣ ಇದನ್ನು ನೇರವಾಗಿ ಮಾಡದೇ ಇರಬಹುದು. ಆದರೆ, ಅವರು ತಮ್ಮ ಬೆಂಬಲಿಗರಿಗೆ ಹಿಂದೆ ಸರಿಯಿರಿ ಎಂದು ಕೇವಲ ಒಂದು ಮಾತು ಹೇಳಿದ್ದರೂ, ಇಂದು ನಾನು ನನ್ನ ಮಗುವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಕಣ್ಣೀರು ಹಾಕಿರುವ ಜೂಲಿ, ಟ್ರೋಲ್ ಮಾಡುವವರು ಅತ್ಯಂತ ವ್ಯವಸ್ಥಿತವಾಗಿ ಚಿತ್ರಕಥೆ, ನಿರ್ದೇಶನ ಮತ್ತು ಸಂಭಾಷಣೆಯೊಂದಿಗೆ ತಮ್ಮ ವಿರುದ್ಧ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾರೆ ಮತ್ತು ಇದರ ಹಿಂದೆ ಟಿವಿಕೆ ಬೆಂಬಲಿಗ ಹಾಗೂ ವಕೀಲರೊಬ್ಬರ ಕೈವಾಡವಿದೆ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಜೂಲಿ, ಜನರ ವಿಜಯ್ ಅವರು ಇನ್‌ಸ್ಟಾಗ್ರಾಮ್ ಮೂಲಕ ಮುಖ್ಯಮಂತ್ರಿಯಾದರು ಎಂದು ಹೇಳುತ್ತಿದ್ದಾರೆ ಎಂದಿರುವ ಜೂಲಿ, ತಮ್ಮ ಬೆಂಬಲಿಗರ ವಿರುದ್ಧ ಮಾತನಾಡುವವರ ಮೇಲೆ ದಾಳಿ ನಡೆಸುವ ಬದಲು, ಅವರು ಸಾರ್ವಜನಿಕರಿಗಾಗಿ ಏನಾದರೂ ಕೆಲಸ ಮಾಡುವುದರತ್ತ ಗಮನ ಹರಿಸಬಾರದೇ ಎಂದು ಪ್ರಶ್ನೆ ಮಾಡಿದ್ಧಾರೆ. ಸದ್ಯ ಜೂಲಿ ಅವರಾಡಿದ ಈ ಮಾತು ಮತ್ತು ಮಾಡಿದ ಆರೋಪಗಳು ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿವೆ.


Click it and Unblock the Notifications