ಚಿತ್ರೀಕರಣದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ವಿಜಯ್ ಆಂಟೊನಿ ಈಗ ಹೇಗಿದ್ದಾರೆ?
ಹೆಚ್ಚಾಗಿ ಬಿಲ್ಡಪ್ ಇರುವ ಚಿತ್ರಗಳಿಗೆ ಕೈಹಾಕದೇ ಕೇವಲ ಕಂಟೆಂಟ್ ಉಳ್ಳ ಚಿತ್ರಗಳಲ್ಲಿ ನಟಿಸುವುದನ್ನು ರೂಢಿಸಿಕೊಂಡು ಬಂದಿರುವ ನಟರುಗಳ ಪೈಕಿ ತಮಿಳು ನಟ ವಿಜಯ್ ಆಂಟೊನಿ ಕೂಡ ಒಬ್ಬರು. ನಟನೆ ಜತೆಗೆ ನಿರ್ದೇಶನವನ್ನೂ ಸಹ ಮಾಡಿ ಗೆದ್ದಿರುವ ವಿಜಯ್ ಆಂಟೊನಿ ಅವರಿಗೆ ತಮ್ಮದೇ ನಿರ್ದೇಶನದ ಚಿತ್ರ ಪಿಚ್ಚೈಕಾರನ್ ಮೂಲಕ ದೊಡ್ಡ ಮಟ್ಟದ ಯಶಸ್ಸು ಹಾಗೂ ಪ್ರಶಂಸೆಯನ್ನು ಪಡೆದುಕೊಂಡಿದ್ದರು.
2016ರಲ್ಲಿ ಬಿಡುಗಡೆಗೊಂಡಿದ್ದ ಪಿಚ್ಚೈಕಾರನ್ ತೆಲುಗಿಗೆ ಬಿಚ್ಚಗಾಡು ಎಂಬ ಶೀರ್ಷಿಕೆ ಅಡಿಯಲ್ಲಿ ಡಬ್ ಆಗಿತ್ತು ಹಾಗೂ ಕನ್ನಡದಲ್ಲಿ ಅಮ್ಮ ಐ ಲವ್ ಯೂ ಆಗಿ ರಿಮೇಕ್ ಆಗಿತ್ತು. ಹೀಗೆ ಈ ಚಿತ್ರ ಬೃಹತ್ ಯಶಸ್ಸು ಸಾಧಿಸಿದ ಕಾರಣ ವಿಜಯ್ ಆಂಟೊನಿ ಈ ಚಿತ್ರದ ಸೀಕ್ವೆಲ್ ಅನ್ನು ಬರೋಬ್ಬರಿ 8 ವರ್ಷಗಳ ಬಳಿಕ ತೆರೆ ಮೇಲೆ ತರಲು ಮುಂದಾಗಿದ್ದಾರೆ.
ಈ ಚಿತ್ರಕ್ಕೆ ಪಿಚ್ಚೈಕಾರನ್ 2 ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಚಿತ್ರದ ಚಿತ್ರೀಕರಣ ಸಹ ಆರಂಭಗೊಂಡು ಭರದಿಂದ ಸಾಗಿತ್ತು. ಇನ್ನು ಮಲೇಷಿಯಾದಲ್ಲಿ ಬೋಟ್ ಚೇಸಿಂಗ್ ದೃಶ್ಯದ ಚಿತ್ರೀಕರಣ ಜರುಗುತ್ತಿರುವಾಗ ವಿಜಯ್ ಆಂಟೊನಿ ಇದ್ದ ಬೋಟ್‌ಗೆ ಎದುರಿನಿಂದ ಬಂದ ಬೋಟ್ ಒಂದು ಡಿಕ್ಕಿ ಹೊಡೆದಿತ್ತು. ಪರಿಣಾಮ ವಿಜಯ್ ಆಂಟೊನಿ ತೀವ್ರವಾಗಿ ಗಾಯೊಗೊಂಡಿದ್ದರು.

ವಿಜಯ್ ಆಂಟೊನಿ ಗಂಭೀರ ಹಂತ ತಲುಪಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದೂ ಸಹ ಹೇಳಲಾಗಿತ್ತು. ಇನ್ನು ವಿಜಯ್ ಆಂಟೊನಿ ಇಂದ ಘಟನೆ ಬಗ್ಗೆ ಯಾವುದೇ ಹೇಳಿಕೆಯೂ ಹೊರಬೀಳದ ಕಾರಣ ನಟನಿಗೆ ತೀವ್ರ ಪ್ರಮಾಣದಲ್ಲಿಯೇ ಪೆಟ್ಟು ಬಿದ್ದಿದೆ ಎಂಬುದು ಖಚಿತವಾಗಿತ್ತು ಹಾಗೂ ಹಲವಾರು ಸಿನಿಮಾ ಪ್ರೇಮಿಗಳು ವಿಜಯ್ ಆಂಟನಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸಿದ್ದರು. ಅದರಂತೆ ಇದೀಗ ವಿಜಯ್ ಆಂಟೊನಿ ಚೇತರಿಕೆ ಕಂಡಿದ್ದು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮ ಆರೋಗ್ಯದ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.
"ಪ್ರೀತಿಯ ಸ್ನೇಹಿತರೇ, ನಾನು ಪಿಚ್ಚೈಕಾರನ್ ಚಿತ್ರೀಕರಣದ ವೇಳೆ ಆಗಿದ್ದ ತೀವ್ರ ಮೂಗು ಹಾಗೂ ಗಲ್ಲದ ಗಾಯಗಳಿಂದ ಚೇತರಿಸಿಕೊಂಡಿದ್ದೇನೆ. ಈಗ ತಾನೇ ದೊಡ್ಡ ಶಸ್ತ್ರ ಚಿಕಿತ್ಸೆ ಮುಗಿದಿದ್ದು, ನಿಮ್ಮ ಜತೆ ಆದಷ್ಟು ಬೇಗ ಮಾತನಾಡಲಿದ್ದೇನೆ. ನನ್ನ ಆರೋಗ್ಯದ ಕುರಿತು ನೀವು ತೋರಿದ ಕಾಳಜಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು" ಎಂದು ತಾವು ಥಂಬ್ ಅಪ್ ಮಾಡಿರುವ ಫೋಟೊವನ್ನು ಹಂಚಿಕೊಂಡು ಬರೆದುಕೊಂಡಿದ್ದಾರೆ.


Click it and Unblock the Notifications











