ಒಪ್ಪಂದ ಆಗಿ ಇಬ್ರು ಸಹಿ ಹಾಕಿ ಮುಗಿದುಹೋದ ಕಥೆ; ವಿಜಯ್ ಡಿವೋರ್ಸ್ ಬಗ್ಗೆ ತಂದೆ ಮಾತು
ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತ ಸೊರ್ನಲಿಂಗಂ ಡಿವೋರ್ಸ್ ಪ್ರಕರಣ ಸದ್ಯ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ವಿಜಯ್ ಹೊಸ ಪಕ್ಷ ಕಟ್ಟಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಂತೆ ಡಿವೋರ್ಸ್ ವಿಚಾರ ಬೆಳಕಿಗೆ ಬಂದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ದಾಂಪತ್ಯದಲ್ಲಿ ಬಿರುಕು ಮೂಡಲು ನಟಿಯೊಬ್ಬಳು ಕಾರಣ ಎನ್ನುವ ವಿಚಾರ ವಿವಾದಕ್ಕೆ ಎಡೆಮಾಡಿ ಕೊಟ್ಟಿತ್ತು.
ತಮ್ಮನ್ನು ರಾಜಕೀಯರಂಗದಲ್ಲಿ ಹಣಿಯಲು ಈ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ನಟ ವಿಜಯ್ ಆರೋಪಿಸಿದ್ದರು. ನಾನು ಜನರ ಸೇವೆ ಮಾಡಲು ಬಂದಿದ್ದೇನೆ, ನನಗೆ ಇಷ್ಟು ಹೆಸರು, ಹಣ ಎಲ್ಲವನ್ನು ಕೊಟ್ಟ ತಮಿಳುನಾಡು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ರಾಜಕೀಯರಂಗಕ್ಕೆ ಬಂದಿದ್ದೀನಿ ಎಂದು ವಿಜಯ್ ಹೇಳುತ್ತಿದ್ದಾರೆ. ಇದೀಗ ವಿಜಯ್ ಡಿವೋರ್ಸ್ ವಿಚಾರದ ಬಗ್ಗೆ ತಂದೆ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

ವಿಜಯ್ ತಂದೆ ಚಂದ್ರಶೇಖರ್ ಒಂದ್ಕಾಲದಲ್ಲಿ ಸಿನಿಮಾ ನಿರ್ದೇಶಕ, ನಿರ್ಮಾಪಕರಾಗಿ ಗುರ್ತಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಗನಿಂದ ದೂರಾಗಿ ಪತ್ನಿ ಜೊತೆ ಜೀವನ ನಡೆಸುತ್ತಿದ್ದಾರೆ. ಮಗನ ಜೊತೆ ಪೋಷಕರಿಗೆ ಕೆಲ ಭಿನ್ನಾಭಿಪ್ರಾಯಗಳು ಇವೆ. ಆದರೂ ಅದನ್ನೆಲ್ಲಾ ಮೀರಿ ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಬೆಂಬಲ ಸೂಚಿಸಿದ್ದಾರೆ. ಸದ್ಯ ಚರ್ಚೆ ಹುಟ್ಟುಹಾಕಿರುವ ಮಗನ ಡಿವೋರ್ಸ್ ಪ್ರಕರಣದ ಬಗ್ಗೆ ಚಂದ್ರಶೇಖರ್ Behindwoods TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವಿಜಯ್ ರಾಜಕೀಯರಂಗದಲ್ಲಿ ಬ್ಯುಸಿಯಾಗುತ್ತಿದ್ದಂತೆ ವೈಯಕ್ತಿಕ ವಿಚಾರ ಚರ್ಚೆ ಆಗ್ತಿದೆ ಅಲ್ವಾ? ಎನ್ನುವ ಪ್ರಶ್ನೆಗೆ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ. "ಇಂಗ್ಲೀಷ್‌ನಲ್ಲಿ Character Assassination ಅಂತಾರೆ. ಕತ್ತಿ ಹಿಡಿದು ಯುದ್ಧ ಮಾಡಲ್ಲ, ವ್ಯಕ್ತಿತ್ವವನ್ನು ಕೊಲ್ಲುವ ಪ್ರಯತ್ನ ಮಾಡ್ತಾರೆ. ವಿಜಯ್ ಇಂತವರು, ಮಹಿಳೆಯರಿಗೆ ವಿರುದ್ಧ, ಕುಟುಂಬಕ್ಕೆ ವಿರುದ್ಧ ಎಂದು ಹೇಳಿ ವ್ಯಕ್ತಿತ್ವವನ್ನು ಕೆಳಗಿಳಿಸುವ ಪ್ರಯತ್ನ ಮಾಡ್ತಾರೆ. ಅದು ಅವರಿಗೆ(ಎದುರಾಳಿ ಪಕ್ಷದವರಿಗೆ) ಸಿದ್ಧಿಸಿದ ಕಲೆ" ಎಂದಿದ್ದಾರೆ.
ಯಾವಾಗಲೋ ಭಿನ್ನಾಭಿಪ್ರಾಯ(ವಿಜಯ್- ಸಂಗೀತಾ ನಡುವೆ) ಮೂಡಿ, ಮಾತುಕತೆ ಎಲ್ಲಾ ನಡೆದು ಒಪ್ಪಂದಕ್ಕೆ ಸಹಿ ಹಾಕಿ, ಎಲ್ಲಾ ಮುಗಿದು ಹೋಗಿರುವುದನ್ನು ಬಹಳ ಚೆನ್ನಾಗಿ ಈಗ ಬಳಸಿಕೊಳ್ಳುತ್ತಿದ್ದಾರೆ ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೂ ವಿಜಯ್ ವೈಯಕ್ತಿಕ ಜೀವನ ವಿಚಾರ ಹೊರಗಡೆ ಬರುವುದಕ್ಕೂ ಹೇಗೆ ಸಂಬಂಧ ಕಲ್ಪಿಸೋಕೆ ಸಾಧ್ಯ? ಎನ್ನುವ ಪ್ರಶ್ನೆಗೆ "ಮುಗಿದು ಹೋಗಿರುವ ವಿಚಾರವನ್ನು ಈಗ ಬೇಕಂತಲೇ ಕೆದಕಿದ್ದಾರೆ. ಅದನ್ನು ಇಂತಹ ಸಮಯದಲ್ಲಿ ಬಳಸಿಕೊಂಡಿದ್ದಾರೆ. ಕುಟುಂಬದವರೇ ಇದಕ್ಕೆಲ್ಲಾ ಆಸ್ಪದ ಮಾಡಿಕೊಡುತ್ತಿದ್ದಾರಾ ಎನ್ನುವ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದಿದ್ದಾರೆ.
ವಿಜಯ್ ಇತ್ತೀಚೆಗೆ ಚರ್ಚ್, ಮಸೀದಿ ಹಾಗೂ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಮತಯಾಚನೆ ನಡೆಸಿದ್ದರು. ಇದೆಲ್ಲಾ ಪ್ರಚಾರ ಗಿಮಿಕ್ಕಾ ಎನ್ನುವ ಪ್ರಶ್ನೆಗೆ ತಂದೆ ಚಂದ್ರಶೇಖರ್ ಉತ್ತರಿಸಿದ್ದಾರೆ. "ವಿಜಯ್ ಚಿಕ್ಕವನಿದ್ದಾಗ ನಾನು ವರ್ಷಕ್ಕೆ 2 ಬಾರಿ ವೇಲಾಂಕಣಿ ದೇವಸ್ಥಾನಕ್ಕೆ ಹೋಗ್ತಿದ್ದೆ. ನನ್ನ ಜೊತೆ ವಿಜಯ್ ಕೂಡ ಬರುತ್ತಿದ್ದ. ಇವತ್ತಿಗೂ ಪ್ರತಿ ಸಿನಿಮಾ ಬಿಡುಗಡೆಗೂ ಮುನ್ನ ವಿಜಯ್ ವೇಲಾಂಕಣಿ ದೇವಸ್ಥಾನ ತೆರೆಳಿ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಇದನ್ನೆಲ್ಲಾ ತಪ್ಪಾಗಿ ನೋಡುವುದು ಸರಿಯಲ್ಲ" ಎಂದು ವಿವರಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನೊಂದು ದಿನ ಬಾಕಿಯಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ವಿಜಯ್ ತಮಿಳುನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಟಿವಿಕೆ ಪಕ್ಷ ಬಹುಮತ ಗಳಿಸದೇ ಇದ್ದರೂ ದೊಡ್ಡಮಟ್ಟದಲ್ಲಿ ಕ್ರಾಂತಿ ಮಾಡಬಹುದು ಎನ್ನುವ ಲೆಕ್ಕಾಚಾರ ನಡೀತಿದೆ. ಎನ್‌ಟಿಆರ್, ಎಂಜಿಆರ್ ಬಳಿಕ ಸಿನಿಮಾ ತಾರೆಯರು ಸ್ವಂತ ಪಕ್ಷ ಕಟ್ಟಿ ದೊಡ್ಡದಾಗಿ ಗೆದ್ದ ಉದಾಹರಣೆ ಇಲ್ಲ. ವಿಜಯ್ ಇತಿಹಾಸ ನಿರ್ಮಿಸುತ್ತಾರಾ ಕಾದು ನೋಡಬೇಕಿದೆ.


Click it and Unblock the Notifications