'ಮ್ಯಾಕ್ಸ್' ಚಿತ್ರದಲ್ಲಿ ಕಿಚ್ಚನ ಆರ್ಭಟ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಏನಂದ್ರು?
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಕಳೆದ ವರ್ಷ ಕೊನೆಗೆ ಬಂದು ಗೆದ್ದಿತ್ತು. ಬಾಕ್ಸಾಫೀಸ್ ಶೇಕ್ ಮಾಡಿ 50 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಸಹ ಸಿನಿಮಾ ವೀಕ್ಷಿಸಿದ್ದರು ಎನ್ನುವ ವಿಚಾರ ಈ ಗೊತ್ತಾಗಿದೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬಂದಿತ್ತು. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಮಾಸ್ ಪ್ರೇಕ್ಷಕರನ್ನು ರಂಜಿಸಿತ್ತು. ಕನ್ನಡದ ಬಳಿಕ ತೆಲುಗು, ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ತಮಿಳಿನ ಕಲೈಪುಲಿ ಎಸ್ ತನು ಜೊತೆ ಸೇರಿ ಸುದೀಪ್ ತಮ್ಮ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಫೆಬ್ರವರಿ 15ರಂದು 'ಮ್ಯಾಕ್ಸ್' ಸಿನಿಮಾ ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅದೇ ಸಮಯದಿಂದ ಜೀ-5 ಓಟಿಟಿ ಪ್ಲಾಟ್‌ಫಾರ್ಮ್‌ಗೆ ಕೂಡ ಸಿನಿಮಾ ಬಂದಿತ್ತು. ಅಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕೇವಲ 72 ಗಂಟೆಗಳಲ್ಲಿ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಸಾಧಿಸಿತ್ತು. ಬೇರೆ ಭಾಷೆಗಳಿಗೂ ಕೂಡ ಸಿನಿಮಾ ಡಬ್ ಆಗಿ ಓಟಿಟಿಯಲ್ಲಿ ಲಭ್ಯವಿದೆ. ಕಳೆದ ವರ್ಷ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಮ್ಯಾಕ್ಸ್' ಪಾತ್ರವಾಗಿತ್ತು.
ಒಳ್ಳೆ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುವುದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸದಾ ಮುಂದೆ ಇರುತ್ತಾರೆ. ಕನ್ನಡದ 'KGF', 'ಕಾಂತಾರ' ಚಿತ್ರಗಳನ್ನು ಕೂಡ ಅವರು ನೋಡಿ ಮೆಚ್ಚಿದ್ದರು. ರಿಷಬ್ ಶೆಟ್ಟಿ ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದರು. ಕನ್ನಡ ಸಿನಿಮಾಗಳನ್ನು ನೋಡುವ ಅಭ್ಯಾಸವನ್ನು ಚಿಕ್ಕಂದಿನಿಂದಲೂ ರಜನಿಕಾಂತ್ ಬೆಳೆಸಿಕೊಂಡಿದ್ದರು. ಅಣ್ಣಾವ್ರ ಅಭಿಮಾನಿಯಾಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ತಾವು ಸ್ಟಾರ್ ನಟನಾದ ಬಳಿಕ ಕೂಡ ಮಾರುವೇಷದಲ್ಲಿ ಬೆಂಗಳೂರಿಗೆ ಬಂದು ಸಿನಿಮಾ ನೋಡಲು ಹವ್ಯಾಸ ಇಟ್ಟುಕೊಂಡಿದ್ದಾರೆ.

ರಜನಿಕಾಂತ್ 'ಮ್ಯಾಕ್ಸ್' ಸಿನಿಮಾ ನೋಡಿ ಫೋನ್ ಮಾಡಿ ಮೆಚ್ಚುಗ ವ್ಯಕ್ತಪಡಿಸಿದ ಬಗ್ಗೆ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಹೇಳಿದ್ದಾರೆ. ತಮಿಳು ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕರು "ಸೂಪರ್ ಸ್ಟಾರ್ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡರು. ನನಗೆ ನಿರ್ಮಾಪಕರಾದ ಕಲೈಪುಲಿ ಎಸ್ ತನು ಡಿಸೆಂಬರ್ 31ರಂದು ಫೋನ್ ಮಾಡಿದರು. ರಜನಿಕಾಂತ್ ನಿಮಗೆ ಫೋನ್ ಮಾಡುತ್ತಾರೆ ಮಾತನಾಡಿ ಎಂದು ಮೊದಲೇ ಹೇಳಿದ್ದರು. ಅದರಂತೆ ತಲೈವಾ ಫೋನ್ ಮಾಡಿ ಏಳೆಂಟು ನಿಮಿಷ ಮಾತನಾಡಿದರು. ಅವರು ಮೊದಲ ದಿನವೇ ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದರು" ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ 'ಮ್ಯಾಕ್ಸ್' ಚಿತ್ರದ ಪ್ರೀಕ್ವೆಲ್ ಮಾಡುವ ಬಗ್ಗೆಯೂ ನಿರ್ದೇಶಕರು ಮಾತನಾಡಿದ್ದಾರೆ. ಸಿನಿಮಾ ಸಕ್ಸಸ್ ಬಳಿಕ ಮತ್ತೆ ತಮ್ಮೊಟ್ಟಿಗೆ ಸಿನಿಮಾ ಮಾಡಲೇಬೇಕು ಎಂದು ಸುದೀಪ್ ಅವರು ಹೇಳಿದ್ದಾರೆ. ಆದರೆ ಅದು ಯಾವ ಸಿನಿಮಾ ಎನ್ನುವುದು ಗೊತ್ತಿಲ್ಲ. 'ಮ್ಯಾಕ್ಸ್' ಪ್ರೀಕ್ವೆಲ್ ಆಗಿರಬಹುದು, ಅಥವಾ ಬೇರೆ ಸಿನಿಮಾ ಕೂಡ ಆಗಿರಬಹುದು. ಅದನ್ನು ಸುದೀಪ್ ಸರ್ ಹಾಗೂ ಕಲೈಪುಲಿ ಎಸ್ ತನು ಸರ್ ನಿರ್ಧರಿಸುತ್ತಾರೆ ಎಂದಿದ್ದಾರೆ.
ಮೊದಲ ಪ್ರಯತ್ನದಲ್ಲೇ ವಿಜಯ್ ಗೆದ್ದಿದ್ದಾರೆ. ಒಂದು ಪೈಸಾ ವಸೂಲ್ ಸಿನಿಮಾ ಕಟ್ಟಿಕೊಟ್ಟಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸರಿಯಾಗಿ ಪ್ರಚಾರ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಬಿಡುಗಡೆ ಮಾಡಿದ್ದರೆ 'ಮ್ಯಾಕ್ಸ್' ಇನ್ನು ಸದ್ದು ಮಾಡುತ್ತಿತ್ತು ಎನ್ನುವುದು ಅಭಿಮಾನಿಗಳು ಅಭಿಪ್ರಾಯ. 'ಮ್ಯಾಕ್ಸ್' ಸಕ್ಸಸ್ ಸಂಭ್ರಮದಲ್ಲೇ ಸುದೀಪ್ 'ಬಿಲ್ಲ ರಂಗ ಬಾಷ' ಸಿನಿಮಾ ಆರಂಭಿಸುತ್ತಿದ್ದಾರೆ. ಮುಂದೆ ವಿಜಯ್ ಕಾರ್ತಿಕೇಯನ್ ಜೊತೆ ಯಾವಾಗ ಸಿನಿಮಾ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











