ವಿಜಯ್ 'ಲಿಯೊ' ಚಿತ್ರೀಕರಣ ಮುಕ್ತಾಯ; ವಿಶೇಷ ಪೋಸ್ಟ್ ಹಂಚಿಕೊಂಡ ಚಿತ್ರತಂಡ
ಬ್ಲಾಕ್‌ಬಸ್ಟರ್ ಚಿತ್ರ ಮಾಸ್ಟರ್ ಬಳಿಕ ತಮಿಳು ನಟ ದಳಪತಿ ವಿಜಯ್ ಹಾಗೂ ಮಾಸ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಕಾಂಬಿನೇಶನ್ ಮತ್ತೊಮ್ಮೆ ಒಂದಾಗಿದ್ದು ಇದೀಗ ಲಿಯೊ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಕಳೆದ ವರ್ಷವೇ ಸೆಟ್ಟೇರಿದ್ದು, ಕಾಶ್ಮಿರ, ಚೆನ್ನೈ ಭಾಗಗಳಲ್ಲಿ ಚಿತ್ರದ ಹೆಚ್ಚಿನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ಇನ್ನು ನಿನ್ನೆ ( ಜುಲೈ 10 ) ದಳಪತಿ ವಿಜಯ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ವಿಷಯವನ್ನು ನಿರ್ದೇಶಕ ಲೋಕೇಶ್ ಕನಕರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವುದರ ಮೂಲಕ ತಿಳಿಸಿದ್ದಾರೆ.

ಮಾಸ್ಟರ್ ಚಿತ್ರದ ದೃಶ್ಯವೊಂದರ ರೀತಿ ಪೋಸ್ ಕೊಟ್ಟಿರುವ ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಫೋಟೊವನ್ನು ಹಂಚಿಕೊಂಡಿರುವ ಲೋಕೇಶ್ "ವಿಜಯ್ ಅಣ್ಣನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಎರಡನೇ ಬಾರಿ ವಿಶೇಷವಾದ ಚಿತ್ರವೊಂದಕ್ಕೆ ಕೆಲಸ ಮಾಡಿದ್ದಕ್ಕೆ ಧನ್ಯವಾದಗಳು ಅಣ್ಣ" ಎಂದು ಬರೆದುಕೊಂಡಿದ್ದಾರೆ.
ಕೇವಲ ಲೋಕೇಶ್ ಕನಕರಾಜ್ ಮಾತ್ರವಲ್ಲದೇ ಲಿಯೋ ಸೆಟ್‌ನಲ್ಲಿ ಕೆಸಲ ಮಾಡುತ್ತಿದ್ದ ವಿವಿಧ ವಿಭಾಗಗಳ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು ವಿಜಯ್ ಚಿತ್ರೀಕರಣ ಮುಗಿದಿರುವುದರ ಕುರಿತು ಬರೆದುಕೊಂಡಿದ್ದು ವಿಜಯ್ ಅವರನ್ನು ಇನ್ನು ಮುಂದೆ ಸೆಟ್‌ನಲ್ಲಿ ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.
ಇನ್ನು ಲಿಯೊ ಚಿತ್ರ ಬಿಡುಗಡೆಗೊಳ್ಳವ ಮೂಲಕವೇ ಸದ್ದು ಮಾಡುತ್ತಿದೆ ಹಾಗೂ ವಿವಾದವನ್ನೂ ಸಹ ಮಾಡಿಕೊಂಡಿದೆ. ಹೌದು, ವಿಜಯ್ ಹುಟ್ಟುಹಬ್ಬದ ಪ್ರುಯುಕ್ತ 'ಲಿಯೊ' ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿತ್ತು. ವಿಷ್ಣು ಎಡವನ್ ಎಂಬುವವರು ಬರೆದಿದ್ದ ಸಾಹಿತ್ಯಕ್ಕೆ ನಟ ದಳಪತಿ ವಿಜಯ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ದನಿ ನೀಡಿದ್ದರು.
'ನಾ ರೆಡಿ' ಎಂಬ ಈ ಹಾಡು ಬಿಡುಗೆಡಯಾದ ನಿಮಿಷಗಳಲ್ಲೇ ಮಿಲಿಯನ್‌ಗಟ್ಟಲೇ ವ್ಯೂಸ್ ಪಡೆದುಕೊಂಡು ದಾಖಲೆ ಬರೆದಿತ್ತು ಹಾಗೂ ಅಷ್ಟೇ ವೇಗದಲ್ಲಿ ವಿವಾದವನ್ನೂ ಸಹ ಮೈಮೇಲೆ ಎಳೆದುಕೊಂಡಿತ್ತು. ಹೌದು, ಚೆನ್ನೈನ ಸಾಮಾಜಿಕ ಕಾರ್ಯಕರ್ತನೊಬ್ಬ ಈ ಹಾಡಿನ ವಿರುದ್ಧ ಡ್ರಗ್ಸ್ ವೈಭವೀಕರಣದ ದೂರನ್ನು ದಾಖಲಿಸಿದ್ದರು. ಸೆಲ್ವಂ ಎಂಬ ಸಾಮಾಜಿಕ ಕಾರ್ಯಕರ್ತ ನಾ ರೆಡಿ ಹಾಡಿನಲ್ಲಿ ಡ್ರಗ್ಸ್ ವೈಭವೀಕರಣ ಹಾಗೂ ರೌಡಿಸಂ ಅನ್ನು ಹೊಗಳಲಾಗಿದೆ, 'ಚಿತ್ರತಂಡದ ಮಾದಕ ದ್ರವ್ಯ ನಿಯಂತ್ರಣ ಕಾಯಿದೆ' ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರನ್ನು ದಾಖಲಿಸಿದ್ದರು.
ಮೊದಲಿಗೆ ಜೂನ್ 25ರಂದು ಆನ್‌ಲೈನ್ ಮೂಲಕ ದೂರನ್ನು ದಾಖಲಿಸಿದ್ದ ಸೆಲ್ವಮ್ ನಂತರ ಜೂನ್ 26ರ ಬೆಳಗ್ಗೆ 10 ಗಂಟೆಗೆ ಪಿಟಿಷನ್ ಸಲ್ಲಿಸಿದ್ದರು. ಹೀಗೆ ದೂರು ದಾಖಲಾಗುತ್ತಾ ಇದ್ದಂತೆ ಎಚ್ಚೆತ್ತ ಲಿಯೊ ಚಿತ್ರತಂಡ ಹಾಡಿನಲ್ಲಿ 'ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಾಲನ್ನು ಬಳಸಿದೆ. ಇದಕ್ಕೂ ಮುಂಚೆ ಹಾಡಿನಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ಸಾಲನ್ನಾಗಲಿ ಬಳಸದಿದ್ದ ಚಿತ್ರತಂಡ ಇದೀಗ ಬದಲಾವಣೆ ಮಾಡಿಕೊಂಡಿದೆ.
ಇನ್ನು ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದು, ಇಂತಹ ಮದ್ಯಪಾನ, ಧೂಮಪಾನದ ಹಾವಳಿ ಚಿತ್ರದಲ್ಲಿ ಜೋರಾಗಿಯೇ ಇರಲಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರದಲ್ಲಿಯೂ ಸಹ ಡ್ರಗ್ ಹಾಗೂ ಮದ್ಯಪಾನದ ಕುರಿತಾದ ದೃಶ್ಯಗಳು ಹೆಚ್ಚಿದ್ದವು. ಅಲ್ಲದೇ ಮಾಸ್ಟರ್ ಹಾಗೂ ಖೈದಿ ಚಿತ್ರದಲ್ಲಿಯೂ ಈ ಅಂಶಗಳಿದ್ದವು.
ಹೀಗೆ ದೂರು ದಾಖಲಾದ ಬಳಿಕ ಎಚ್ಚೆತ್ತ ಲಿಯೊ ಚಿತ್ರತಂಡ ಹಾಡಿನಲ್ಲಿ ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ತಿಳಿಸುವ ಲೈನ್ ಅನ್ನು ಬಳಸಿಕೊಂಡಿದೆ.


Click it and Unblock the Notifications









