'ಜನ ನಾಯಗನ್'ಗೂ ಮುನ್ನ ದಳಪತಿ ವಿಜಯ್ ನಟಿಸಿದ್ದ 15 ರೀಮೆಕ್ ಚಿತ್ರಗಳು ಯಾವುವು?
ತಮಿಳು ನಟ ವಿಜಯ್ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದ್ದಾರೆ. 'ಜನ ನಾಯಗನ್' ದಳಪತಿ ನಟನೆಯ ಕೊನೆಯ ಸಿನಿಮಾ ಎನ್ನುವಂತಾಗಿದೆ. ಈ ವಾರವೇ ಸಿನಿಮಾ ತೆರೆಗೆ ಬರ್ತಿದೆ. ಆದರೆ ಕೊನೆ ಚಿತ್ರ ರೀಮೆಕ್ ಎನ್ನುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.
ತೆಲುಗಿನ 'ಭಗವಂತ್ ಕೇಸರಿ' ಚಿತ್ರವನ್ನು ವಿಜಯ್ ರೀಮೆಕ್ ಮಾಡುತ್ತಿದ್ದಾರೆ. ಟ್ರೈಲರ್ ನೋಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ತೆಲುಗಿನಲ್ಲಿ ಬಾಲಕೃಷ್ಣ ಹಾಗೂ ಶ್ರೀಲೀಲಾ ತಂದೆ ಮಗಳಾಗಿ ಈ ನಟಿಸಿದ್ದರು. 'ಜನ ನಾಯಗನ್' ಚಿತ್ರದಲ್ಲಿ ವಿಜಯ್ ಹಾಗೂ ಮಮಿತಾ ಬೈಜು ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಜಯ್ ಜೋಡಿಯಾಗಿ ಕೀರ್ತಿ ಸುರೇಶ್ ಬಣ್ಣ ಹಚ್ಚಿದ್ದಾರೆ. ಅನಿರುದ್ಧ್ ಸಂಗೀತದಲ್ಲಿ ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿದೆ.

ಜಬರ್ದಸ್ತ್ ಆಕ್ಷನ್ ಜೊತೆಗೆ ಫ್ಯಾಮಿಲಿ ಎಮೋಷನ್ಸ್, ದೇಶಭಕ್ತಿ ವಿಚಾರಗಳನ್ನು ಸೇರಿಸಿ 'ಜನ ನಾಯಗನ್' ಚಿತ್ರ ಕಟ್ಟಿಕೊಡಲಾಗಿದೆ. ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಟಿಕೆಟ್ ದರ 1000 ರೂ. ದಾಟಿದೆ. ಮೊದಲಿನಿಂದಲೂ ಇದು ಭಗವಂತ್ ಕೇಸರಿ ರೀಮೆಕ್ ಎನ್ನುವ ಊಹಾಪೋಹ ಶುರುವಾಗಿತ್ತು. ಅದು ಈಗ ಖಚಿತವಾಗಿದೆ. ಸಣ್ಣಪುಟ್ಟ ಬದಲಾವಣೆ ಜೊತೆಗೆ ಅದೇ ಕಥೆಯನ್ನು ವಿನೋದ್ ಕಟ್ಟಿಕೊಟ್ಟಿದ್ದಾರೆ.
ಅಂದಹಾಗೆ ವಿಜಯ್ ರೀಮೆಕ್ ಸಿನಿಮಾ ಮಾಡುತ್ತಿರುವುದು ಹೊಸದೇನು ಅಲ್ಲ. ಆದರೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಸಿನಿಮಾ ಟ್ರೆಂಡ್ ಕಮ್ಮಿ ಆಗಿದೆ. ಇಂತಹ ಸಮಯದಲ್ಲಿ ಅದೂ ಕೂಡ ತಮ್ಮ ಕೊನೆಯ ಚಿತ್ರಕ್ಕೆ ರೀಮೆಕ್ ಯಾಕೆ ಎಂದು ಕೆಲವರು ಕೇಳುತ್ತಿದ್ದಾರೆ. ಅದಕ್ಕೆಲ್ಲಾ ಇದೇ ಶುಕ್ರವಾರ ಉತ್ತರ ಸಿಗಲಿದೆ. ಆದರೆ ಇದಕ್ಕೂ ಮುನ್ನ ವಿಜಯ್ ಮಾಡಿದ್ದ ರೀಮೆಕ್ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.

1997ರಲ್ಲಿ ವಿಜಯ್ ನಟಿಸಿದ್ದ 'ಕಾದಲುಕ್ಕು ಮರಿಯದೈ' ಸಿನಿಮಾ ಗೆದ್ದಿತ್ತು. ಮಲಯಾಳಂನಲ್ಲಿ ಬಂದಿದ್ದ 'ಅನಿಯತಿಪ್ರವು' ಚಿತ್ರದ ರೀಮೆಕ್ ಅದಾಗಿತ್ತು. ಮರು ವರ್ಷವೇ ತೆಲುಗಿನ 'ಪೆಳ್ಳಿ ಸಂದಡಿ' ಚಿತ್ರವನ್ನು 'ನಿನೈತೆನ್ ವಂಧೈ' ಹೆಸರಿನಲ್ಲಿ ತಮಿಳು ಪ್ರೇಕ್ಷಕರ ಮುಂದಿಟ್ಟಿದ್ದರು ವಿಜಯ್. ಅದೇ ರೀತಿ ತೆಲುಗಿನ 'ಪವಿತ್ರ ಬಂಧಂ' ಚಿತ್ರದ ತಮಿಳು ರೀಮೆಕ್ 'ಪ್ರಿಯಮಾನವಳೇ' ಚಿತ್ರದಲ್ಲಿ ವಿಜಯ್ ಮಿಂಚಿದ್ದರು.
ವಿಜಯ್ ಹಾಗೂ ಸೂರ್ಯ ನಟಿಸಿದ್ದ 'ಫ್ರೆಂಡ್ಸ್' ಸಿನಿಮಾ 24 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಅದೇ ಹೆಸರಿನಲ್ಲಿ ಬಂದಿದ್ದ ಮಲಯಾಳಂ ಸಿನಿಮಾ ರೀಮೆಕ್ ಅದಾಗಿತ್ತು. ತೆಲುಗಿನ 'ತಮ್ಮುಡು' ಸಿನಿಮಾ ಕನ್ನಡದಲ್ಲಿ ಶಿವರಾಜ್‌ಕುಮಾರ್ ರೀಮೆಕ್ ಮಾಡಿ ಗೆದ್ದಿದ್ದರು. ತಮಿಳಿನಲ್ಲಿ 'ಬದ್ರಿ' ಹೆಸರಿನಲ್ಲಿ ವಿಜಯ್ ನಟಿಸಿದ್ದರು. ತೆಲುಗಿನ
'ಚಿರು ನವ್ವುತೊ' ತಮಿಳು ರೀಮೆಕ್ 'ಯೂತ್' ಚಿತ್ರದಲ್ಲಿ ವಿಜಯ್ ಹೀರೋ ಆಗಿದ್ದರು. 'ನುವ್ವು ನಾಕು ನಚ್ಚಾವು' ಸಿನಿಮಾ 'ವಸೀಗರ' ಹೆಸರಿನಲ್ಲಿ ತಮಿಳಿಗೆ ರೀಮೆಕ್ ಆಗಿತ್ತು.
ವಿಜಯ್ ವೃತ್ತಿ ಜೀವನದಲ್ಲಿ ಮೈಲಿಗಲ್ಲಾದ ಸಿನಿಮಾ 'ಗಿಲ್ಲಿ'. ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿದ್ದ 'ಒಕ್ಕಡು' ಸಿನಿಮಾ ರೀಮೆಕ್ ಇದಾಗಿತ್ತು. ಮುಂದೆ ತೆಲುಗಿನ 'ನೀತೊ' ಚಿತ್ರದ ತಮಿಳು ವರ್ಷನ್‌ನಲ್ಲಿ ದಳಪತಿ ನಟಿಸಿದ್ದರು. 'ಪೊಕಿರಿ' ವಿಜಯ್ ನಟಿಸಿದ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ. ಅದೇ ಹೆಸರಿನ ಚಿತ್ರದಲ್ಲಿ ಮಹೇಶ್ ಬಾಬು ನಟಿಸಿದ್ದು ಗೊತ್ತೇಯಿದೆ. ಕನ್ನಡದಲ್ಲಿ ದರ್ಶನ್ ಈ ಚಿತ್ರ ರೀಮೆಕ್ ಮಾಡಿದ್ದರು.
ಮಲಯಾಳಂ 'ಬಾಡಿಗಾರ್ಡ್' ಸಿನಿಮಾ 'ಕಾವಲನ್' ಆಗಿ ತಮಿಳು ಪ್ರೇಕ್ಷಕರ ಮುಂದೆ ಬಂದಾಗ ಹೀರೊ ಆಗಿ ನಟಿಸಿದ್ದು ಇದೇ ವಿಜಯ್. ಬಾಲಿವುಡ್ ಸೂಪರ್ ಹಿಟ್ 'ತ್ರೀ ಈಡಿಯಟ್ಸ್' ಚಿತ್ರವನ್ನು ತಮಿಳಿಗೆ ರೀಮೆಕ್ ಮಾಡಿ ಎಡವಟ್ಟು ಮಾಡಿದ್ದರು. ಖ್ಯಾತ ನಿರ್ದೇಶಕ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆಮೀರ್ ಖಾನ್ ಮಾಡಿದ್ದ ಪಾತ್ರಕ್ಕೆ ತಮಿಳಿನಲ್ಲಿ ವಿಜಯ್ ಬಣ್ಣ ಹಚ್ಚಿದ್ದರು.


Click it and Unblock the Notifications











