ವಿಜಯ್ ಕ್ಯಾಬಿನೇಟ್‌ನಲ್ಲಿ ಕೀರ್ತನಾ ಕ್ರಾಂತಿ ; ಯಾರಿದು ಶಿವಕಾಶಿಯಲ್ಲಿ ಇತಿಹಾಸ ಬರೆದ ಪಂಚಭಾಷಾ ಪ್ರವೀಣೆ ?
ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಉದಾಹರಣೆಯೇ ಎಸ್.ಕೀರ್ತನಾ.
ಹೌದು. ಎಸ್.ಕೀರ್ತನಾ.. ಭಾರತದ ಪಠಾಕಿ ರಾಜಧಾನಿ ಶಿವಕಾಶಿಯ ಮೊದಲ ಮಹಿಳಾ ಶಾಸಕಿ. ದಳಪತಿ ವಿಜಯ್ ಅವರ ''ತಮಿಳು ವೆಟ್ರಿ ಖಳಗಂ''(TVK) ಪಕ್ಷದಿಂದ ಶಿವಕಾಶಿಯಲ್ಲಿ ಕಣಕ್ಕಿಳಿದಿದ್ದ 29 ವರ್ಷದ ಕೀರ್ತನಾ, ಶಿವಕಾಶಿ ಕ್ಷೇತ್ರದಲ್ಲಿನ 7 ದಶಕದ ಪುರುಷ ಪ್ರಾಬಲ್ಯವನ್ನು ಕೊನೆಯಾಗಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ವಿಜಯ್ ಅವರ ಮೊದಲ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ. ವಿಜಯ್ ಜೊತೆ ನಿನ್ನೆ (ಮೇ10) ಪ್ರಮಾಣ ವಚನವನ್ನು ಕೂಡ ಸ್ವೀಕರಿಸಿದ್ದಾರೆ. ಇಂಥಾ ಕೀರ್ತನಾ ಯಾರು..? ಈ ಕುತೂಹಲಕ್ಕೆ ಉತ್ತರ ತಿಳಿಯಲು ಮುಂದೆ ಓದಿ.

ಕೀರ್ತನಾ ಯಾರು ..?
ವಿರುಧನಗರದಲ್ಲಿ 1996ರಲ್ಲಿ ಜನಿಸಿದ ಕೀರ್ತನಾ, ಓದಿದ್ದು ತಮಿಳು ಸರ್ಕಾರಿ ಶಾಲೆಯಲ್ಲಿ. ಆ ನಂತ ಮಧುರೈ ಕಾಮರಾಜ್ ವಿಶ್ವವಿದ್ಯಾಲಕ್ಕೆ ಸೇರುವ ಕಾಲೇಜ್‌ನಲ್ಲಿ ಗಣಿತದಲ್ಲಿ ಬಿಎಸ್ಸಿ ಪದವಿಯನ್ನು ಪಡೆದ ಕೀರ್ತನಾ 2019 ರಲ್ಲಿ ಪುದುಚೇರಿ ವಿಶ್ವವಿದ್ಯಾಲಯದಿಂದ ಅಂಕಿ-ಅಂಶ ಶಾಸ್ತ್ರದಲ್ಲಿ(MSc Statistics) ಸ್ನಾತಕೋತ್ತರ ಪದವಿಯನ್ನು ಪಡೆದರು.
ರಾಜಕೀಯದ ಅಖಾಡಕ್ಕೆ ಸಕ್ರಿಯವಾಗಿ ಧುಮುಕುವ ಮುನ್ನ, ''ಶೋಟೈಮ್ ಕನ್ಸಲ್ಟಿಂಗ್'' ಮತ್ತು ''ಐ-ಪ್ಯಾಕ್'' (IPAC) ಸಂಸ್ಥೆಗಳಲ್ಲಿ ರಾಜಕೀಯ ಸಲಹೆಗಾರ್ತಿ ಮತ್ತು ಡಿಜಿಟಲ್ ಪ್ರಚಾರ ತಂತ್ರಜ್ಞರಾಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಅವರು ತೆಲುಗು ದೇಶಂ ಪಾರ್ಟಿ (TDP), ತೃಣಮೂಲ ಕಾಂಗ್ರೆಸ್ (TMC) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷಗಳ ಚುನಾವಣಾ ಪ್ರಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹೀಗೆ ರಾಜಕೀಯದ ಕಲೆ ಕರಗತ ಮಾಡಿಕೊಳ್ಳಲು ಶುರು ಮಾಡಿದ ಕೀರ್ತನಾ, ಆ ನಂತರ ಮಾಜಿ ಮುಖ್ಯಮಂತ್ರಿಗಳಾದ ಎಂ.ಕೆ. ಸ್ಟಾಲಿನ್, ಮಮತಾ ಬ್ಯಾನರ್ಜಿ ಮತ್ತು ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಕೂಡ ಕೆಲಸ ಮಾಡಿದರು.
ಪಂಚಭಾಷಾ ಪಾರಂಗತೆ ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಹಿಂದಿ ಕೇಳಿಸುವುದು ಅಪರೂಪ. ಅಲ್ಲಿ ಮೊದಲ ಆದ್ಯತೆ ತಮಿಳು.ಇಂತಹ ವಾತಾವರಣದಲ್ಲಿ ಹುಟ್ಟಿ ಬೆಳೆದ ಎಸ್.ಕೀರ್ತನಾ ಪಂಚಭಾಷಾ ಪಾರಂಗತೆ. ತಮಿಳಿನ ಜೊತೆ ಇಂಗ್ಲೀಷ್..ಹಿಂದಿ.. ಮತ್ತು ತೆಲುಗು ಹೀಗೆ 5 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಕೀರ್ತನಾ.

ತಮ್ಮ ಈ ಭಾಷಾ ಪಾಂಡಿತ್ಯದ ಕುರಿತು ಮಾತನಾಡಿರುವ ಕೀರ್ತನಾ, ವಿವಿಧ ಭಾಷೆಗಳ ಜ್ಞಾನವು ನನಗೆ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಲು ಮತ್ತು ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಕಷ್ಟು ಅವಕಾಶಗಳನ್ನು ನೀಡಿತು ಎಂದು ಹೇಳಿದ್ದಾರೆ.
ರಾಜಕೀಯದಲ್ಲಿರಬೇಕು ಎಂದುಕೊಂಡಿದ್ದೆ
ತಮ್ಮ ಈ ಪ್ರಯಾಣದ ಕುರಿತು''ಎನ್‌ಡಿಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೀರ್ತನಾ, ನಾನು ಯಾವಾಗಲೂ ರಾಜಕೀಯದಲ್ಲಿ ಇರಬೇಕೆಂದುಕೊಂಡಿದ್ದೆ. ಅದಕ್ಕಾಗಿಯೇ ನಾನು ರಾಜಕೀಯ ತಂತ್ರಜ್ಞಳಾಗಿ ವೃತ್ತಿಜೀವನವನ್ನು ಆರಿಸಿಕೊಂಡೆ ಎಂದು ಹೇಳಿದ್ದಾರೆ. ನಾನು ವಿಭಿನ್ನ ನಾಯಕರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿರುವ ಕೀರ್ತನಾ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತೆ, ಅಧಿಕಾರಶಾಹಿ ಹೇಗೆ ಕಾರ್ಯನಿರ್ವಹಿಸುತ್ತೆ ಎಂದು ಕೂಡ ನಾನು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾರೆ.
''ಶಿವಕಾಶಿ'' ಸಮಸ್ಯೆ ಬಗ್ಗೆ ಮಾತನಾಡಿದ್ದ ಕೀರ್ತನಾ
ಟಿವಿಕೆ ಪಕ್ಷದಿಂದ ಕಣಕ್ಕಿಳಿದ ನಂತರ ತಮ್ಮ ಪ್ರಚಾರದ ಸಂದರ್ಭದಲ್ಲಿ ಕೀರ್ತನಾ ಹಲವು ಸಮಸ್ಯೆಗಳಿಗೆ ಆದ್ಯತೆ ನೀಡಿದ್ದರು. ಕೈಗಾರಿಕಾ ಪ್ರದೇಶದಲ್ಲಿರುವ ತುರ್ತು ಸೇವೆಗಳ ಕೊರತೆಯನ್ನು ಎತ್ತಿ ತೋರಿಸಿದ್ದ ಕೀರ್ತನಾ, ವಲಯದ ಕಾರ್ಮಿಕರಿಗೆ ವಿಮಾ ಸೌಲಭ್ಯ, ನಿಯಮಿತ ಆರೋಗ್ಯ ತಪಾಸಣೆ, ಮಹಿಳಾ ಕಾರ್ಮಿಕರಿಗೆ ಸಮಾನ ವೇತನ, ಮತ್ತು ಅಪಾಯಕಾರಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳಂತಹ ಕಲ್ಯಾಣ ಕ್ರಮಗಳ ಭರವಸೆಗಳನ್ನು ನೀಡಿದ್ದರು. ಅಲ್ಲದೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಆರೋಗ್ಯ ಮೂಲಸೌಕರ್ಯದ ಕೊರತೆಯ ಬಗ್ಗೆಯೂ ದನಿ ಎತ್ತಿದರು ಕೀರ್ತನಾ.
ಶಿವಕಾಶಿಯಲ್ಲಿ ಪುರುಷ ಪ್ರಾಬಲ್ಯ ಕೊನೆ
ಈ ಬಾರಿಯ ಚುನಾವಣೆಯಲ್ಲಿ, ಶಿವಕಾಶಿ ವಿಧಾನಸಭೆಯಲ್ಲಿ ಕೀರ್ತನಾ 68,709 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಶೋಕನ್ ಜಿ ಅವರನ್ನು 11,670 ಮತಗಳ ಅಂತರದಿಂದ ಸೋಲಿಸಿದ್ದಾರೆ. 7 ದಶಕಗಳಲ್ಲಿ ಶಿವಕಾಶಿಯಿಂದ ಮಾಜಿ ಎಐಎಡಿಎಂಕೆ ಸಚಿವರನ್ನು ಸೋಲಿಸಿದ ಹೆಗ್ಗಳಿಕೆಯನ್ನು ಕೂಡ ಹೊಂದಿರುವ ಕೀರ್ತನಾ ಶಿವಕಾಶಿಯ ಮೊದಲ ಮಹಿಳಾ ಶಾಸಕಿಯಾಗಿ ಹೊರ ಹೊಮ್ಮಿದ್ದಾರೆ.


Click it and Unblock the Notifications