ಆಟೋ ಡ್ರೈವರ್ ಹಾಗೂ ತನ್ನ ಕಾರ್ ಡ್ರೈವರ್ ಮಗನಿಗೆ MLA ಟಿಕೆಟ್ ಕೊಟ್ಟಿದ್ದ ವಿಜಯ್, ಫಲಿತಾಂಶ ಏನಾಯ್ತು?
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೊಸ ಇತಿಹಾಸ ನಿರ್ಮಿಸಿದೆ. ಮೊದಲ ಪ್ರಯತ್ನದಲ್ಲೇ 234 ಕ್ಷೇತ್ರಗಳ ಪೈಕಿ 108 ಕ್ಷೇತ್ರಗಳಲ್ಲಿ ಟಿವಿಕೆ ಗೆದ್ದಿದೆ. ಶೀಘ್ರದಲ್ಲೇ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎನ್ನುವ ಚರ್ಚೆ ನಡೆದಿದೆ. ಸಾಮಾನ್ಯರಲ್ಲಿ ಸಾಮಾನ್ಯರಿಗೆ ಎಂಎಲ್‌ಎ ಟಿಕೆಟ್ ಕೊಟ್ಟು ವಿಜಯ್ ಗೆಲ್ಲಿಸಿದ್ದಾರೆ.
ಎಲ್ಲಾ 234 ಕ್ಷೇತ್ರಗಳಲ್ಲಿ ನಿಮ್ಮ ವಿಜಯ್ ಚುನಾವಣೆಗೆ ನಿಲ್ತಾನೆ. ಅವನಿಗೆ ವೋಟ್ ಹಾಕಿ ಗೆಲ್ಲಿಸಿ ಎಂದು ವಿಜಯ್ ತಮ್ಮ ಭಾಷಣಗಳಲ್ಲಿ ಮಾತನಾಡಿದ್ದರು. ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿ ಯಾರೇ ಆಗಿರಲಿ ನೀವು ನನಗೆ ವೋಟ್ ಹಾಕ್ತಿದ್ದೀವಿ ಎಂದು ಭಾವಿಸಿ ವೋಟ್ ಹಾಕಿ ಎಂದು ಮನವಿ ಮಾಡಿದ್ದರು. ಅದು ನಿಜವೇ ಆಗಿದೆ. ಮತದಾರರು ಅಭ್ಯರ್ಥಿಗಳು ಯಾರು ಎಂದು ನೋಡದೇ ವಿಜಯ್ ಮುಖ ನೋಡಿ ವೋಟ್ ಹಾಕಿ ಗೆಲ್ಲಿಸಿದ್ದಾರೆ. ವಿಜಯ್ ಒಬ್ಬ ಆಟೋ ಡ್ರೈವರ್ ಹಾಗೂ ತಮ್ಮ ಕಾರ್ ಡ್ರೈವರ್ ಮಗನಿಗೆ ಎಂಎಲ್ಎ ಟಿಕೆಟ್ ಕೊಟ್ಟಿದ್ದರು. ಇಬ್ಬರೂ ಗೆದ್ದಿದ್ದಾರೆ.

ಘಟಾನುಘಟಿ ನಾಯಕರೇ ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. 5 ವರ್ಷಗಳ ಕಾಲ ಸರ್ಕಾರ ಮುನ್ನಡೆಸಿದ ಡಿಎಂಕೆ ಪಕ್ಷದ ಸ್ಟಾಲಿನ್ ಕೂಡ ಸೋತು ನಿರಾಸೆ ಅನುಭವಿಸಿದ್ದಾರೆ. ಹಾಲಿ ಮುಖ್ಯಮಂತ್ರಿಗೆ ಈ ಬಾರಿ ಚುನಾವಣೆಯಲ್ಲಿ ಮುಖಭಂಗವಾಗಿದೆ. ಸ್ಟಾಲಿನ್ ಸ್ಪರ್ಧಿಸಿದ್ದ ಕೊಲತ್ತೂರ್ ಕ್ಷೇತ್ರದಲ್ಲಿ ಕೂಡ ಟಿವಿಕೆ ಪಕ್ಷದ ಅಭ್ಯರ್ಥಿ ಗೆದ್ದಿರುವುದು ವಿಶೇಷ. ಅದೇ ರೀತಿ ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಕೆ. ವಿಜಯ್ ಧಾಮು ಎಂಬುವವರಿಗೆ ಚೆನ್ನೈನ ರೊಯಪುರಂ ಕ್ಷೇತ್ರದಲ್ಲಿ ವಿಜಯ್ ಕಣಕ್ಕಿಳಿಸಿದ್ದರು.
ಮೊದಲ ಪ್ರಯತ್ನದಲ್ಲೇ ಧಾಮು ಇಬ್ಬರು ಪ್ರಭಾವಿ ನಾಯಕರನ್ನು ಸೋಲಿಸಿದ್ದಾರೆ. 14249 ಮತಗಳ ಅಂತರದಿಂದ ಅವರು ವಿತೇತರಾಗಿದ್ದಾರೆ. 8ನೇ ತರಗತಿ ಪಾಸ್ ಆಗಿರುವ ಧಾಮು ಇದೀಗ ಎಂಎಲ್‌ಎ ಆಗಿ ಆಯ್ಕೆ ಆಗಿದ್ದಾರೆ. ಇದೆಲ್ಲಾ ವಿಜಯ್ ಅವರಿಂದ ಎಂದು ಅವರು ಹೇಳಿದ್ದಾರೆ. ಅದೇ ರೀತಿ ತಮ್ಮ ಬಳಿ ಬಹಳ ವರ್ಷಗಳ ಕಾಲ ಡ್ರೈವರ್ ಆಗಿ ಕೆಲಸ ಮಾಡಿದ ರಾಜೇಂದ್ರನ್ ಎಂಬುವವರ ಮಗ ಆರ್. ಶಬರಿನಾಥನ್ ಅವರಿಗೆ ಎಂಎಲ್‌ಎ ಟಿಕೆಟ್ ಕೊಟ್ಟಿದ್ದರು. ವಿರುಗಂಬಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಬರಿನಾಥನ್ ಕೂಡ ವಿಜಯಮಾಲೆ ಧರಿಸಿದ್ದಾರೆ. 27086 ಮತಗಳಿಂದ ಡಿಎಂಕೆ ಪಕ್ಷದ ಅಭ್ಯರ್ಥಿ ವಿರುದ್ಧ ಗೆದ್ದಿದ್ದಾರೆ.

ವಿಜಯ್ ಕಂಡ ಕಂಡವರಿಗೆ ಎಂಎಲ್‌ಎ ಟಿಕೆಟ್ ಕೊಟ್ಟಿದ್ದಾರೆ. ಇದೇನು ಮಕ್ಕಳ ಆಟವೇ ಎಂದು ಕೆಲವರು ವ್ಯಂಗ್ಯವಾಡಿದ್ದರು. ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಈ ಬಗ್ಗೆ ಟೀಕಿಸಿದ್ದರು. ಅಂತಹವರಿಗೆ ಈ ಗೆಲುವಿನ ಮೂಲಕವೇ ಟಿವಿಕೆ ಪಕ್ಷದ ಅಭ್ಯರ್ಥಿಗಳು ಉತ್ತರ ನೀಡಿದ್ದಾರೆ. ಇದೇ ರೀತಿ ಸಾಕಷ್ಟು ಕಡೆಗಳಲ್ಲಿ ಮೊದಲ ಬಾರಿ ಚುನಾವಣೆ ಸ್ಪರ್ಧಿಸಿದ್ದ ಟಿವಿಕೆ ಪಕ್ಷದ ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ.
ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿದ್ದ ವಿಜಯ್ ರಾಜಕೀಯರಂಗ ಪ್ರವೇಶವನ್ನು ಕೆಲವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ವಿಜಯ್ ಡಿವೋರ್ಸ್ ಪ್ರಕರಣ, ತ್ರಿಷಾ ಜೊತೆಗಿನ ವಿವಾದ, ಕರೂರು ಕಾಲ್ತುಳಿತದಂತಹ ವಿಚಾರಗಳು ಟಿವಿಕೆ ಪಕ್ಷಕ್ಕೆ ಮುಳುವಾಗುತ್ತದೆ ಎಂದೇ ಭಾವಿಸಲಾಗಿತ್ತು. ವಿಜಯ್ ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುವವರೆಲ್ಲಾ ವೋಟ್ ಹಾಕಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೆ ಅದನ್ನೆಲ್ಲಾ ಮೀರಿ ವಿಜಯ್ ಮ್ಯಾಜಿಕ್ ನಡೆದಿದೆ.
ದಶಕಗಳ ಕಾಲ ದ್ರಾವಿಡ ಪಕ್ಷಗಳಾದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ತಮಿಳುನಾಡನ್ನು ಆಳುತ್ತಾ ಬಂದಿದ್ದವು. ಅದಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ಕಮಲ್ ಹಾಸನ್ ಹಾಗೂ ವಿಜಯ್ ಕಾಂತ್ ಮಾಡಲು ಸಾಧ್ಯವಾಗದೇ ಇರುವುದನ್ನು ದಳಪತಿ ಮಾಡಿ ತೋರಿಸಿದ್ದಾರೆ.


Click it and Unblock the Notifications