'ವಾರಿಸು' ಕಲೆಕ್ಷನ್ ನಕಲಿ, ಎಲ್ಲ ಸುಳ್ಳು ಹೇಳುತ್ತಿದ್ದಾರೆ: ವಿತರಕ ಆರೋಪ
ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ 'ವಾರಿಸು' ಸಿನಿಮಾ ಕಳೆದ ತಿಂಗಳಷ್ಟೆ ಬಿಡುಗಡೆ ಆಗಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಹ ಸಿನಿಮಾ ಮಾತ್ರ ಸೂಪರ್ ಹಿಟ್ ಎನಿಸಿಕೊಂಡಿದೆ.
ಸಿನಿಮಾದ ಮೇಕರ್ಸ್‌ಗಳು ಕೆಲ ದಿನಗಳ ಹಿಂದಷ್ಟೆ ತಮ್ಮ ಸಿನಿಮಾ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಿಕೊಂಡಿದ್ದರು. ಆದರೆ ಈಗ 'ವಾರಿಸು' ಸಿನಿಮಾದ ಕಲೆಕ್ಷನ್ ಬಗ್ಗೆ ಅನುಮಾನ ಮೂಡಿದೆ. ಸ್ವತಃ ಜನಪ್ರಿಯ ವಿತರಕ ಹಾಗೂ ಪ್ರದರ್ಶಕರೊಬ್ಬರು ಸಿನಿಮಾದ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಚಿತ್ರತಂಡ ಹೇಳುತ್ತಿರುವ ಕಲೆಕ್ಷನ್ ಕೇಳಿದರೆ ನಗು ಬರುತ್ತದೆ ಎಂದಿದ್ದಾರೆ.
ತಮಿಳು ಸಿನಿಮಾ ರಂಗದ ಹಿರಿಯ ಸಿನಿಮಾ ವಿತರಕ ಹಾಗೂ ಪ್ರದರ್ಶಕ ಆಗಿರುವ ತಿರುಚಿ ಶ್ರೀಧರ್, ಯೂಟ್ಯೂಬ್ ಸಂದರ್ಶನವೊಂದರಲ್ಲಿ 'ವಾರಿಸು' ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು, 'ವಾರಿಸು' ಸಿನಿಮಾದ ಕಲೆಕ್ಷನ್ ಸುಳ್ಳು ಎಂದಿದ್ದಾರೆ.

'ವಾರಿಸು' ಕಲೆಕ್ಷನ್ ಸುಳ್ಳು?
'ವಾರಿಸು' ಸಿನಿಮಾ ವಿಶ್ವದಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ಶುದ್ಧ ಸುಳ್ಳು. ಅವರ ಲೆಕ್ಕ ಕೇಳಿದರೆ ನನಗೆ ನಗು ಬರುತ್ತದೆ. 300 ಕೋಟಿ ವರ್ಲ್ ವೈಡ್ ಕಲೆಕ್ಷನ್ ಎಂಬುದು ಕೇವಲ ಜೋಕ್ ಎಂದಿದ್ದಾರೆ ತಿರುಚಿ ಶ್ರೀಧರ್. ಅಲ್ಲದೆ, ಸಿನಿಮಾ ನಿಜವಾಗಿಯೂ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದು ನನಗೆ ಗೊತ್ತಿದೆ ಆದರೆ ಆ ಸಂಖ್ಯೆಯನ್ನು ಹೇಳಲು ನನಗೆ ಇಷ್ಟವಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಒಟ್ಟಿಗೆ ಬಿಡುಗಡೆ ಆಗಿದ್ದ ಸಿನಿಮಾಗಳು
ಅಜಿತ್ ನಟನೆಯ 'ತುನಿವು' ಸಿನಿಮಾ ಸಹ 'ವಾರಿಸು' ಬಿಡುಗಡೆ ಆದ ಸಮಯದಲ್ಲಿಯೇ ಬಿಡುಗಡೆ ಆಗಿದ್ದು, ಆ ಸಿನಿಮಾ ಸಹ ಸೂಪರ್ ಹಿಟ್ ಆಗಿದೆ. ಇದೀಗ ವಿತರಕ ತಿರುಚಿ ಶ್ರೀಧರ್, 'ತುನಿವು'ಗಿಂತಲೂ 'ವಾರಿಸು' ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿರುವುದು ನಿಜವಾದರೂ ಎರಡೂ ಸಿನಿಮಾಗಳ ನಡುವೆ ದೊಡ್ಡ ಅಂತರವೇನೂ ಇಲ್ಲ. 'ತುನಿವು'ಗಿಂತಲೂ 'ವಾರಿಸು' 6%-7% ಅಷ್ಟೆ ಹೆಚ್ಚು ಕಲೆಕ್ಷನ್ ಮಾಡಿರಬಹುದು ಎಂದಿದ್ದಾರೆ. ಅಲ್ಲದೆ, 'ತುನಿವು' ಸಿನಿಮಾದ ಪ್ರದರ್ಶನಗಳ ಸಂಖ್ಯೆ ಕಡಿಮೆ ಮಾಡಿದ್ದಕ್ಕೆ ಈ ರೀತಿ ಆಗಿದೆ ಎಂದು ಅವರು ಹೇಳಿದ್ದಾರೆ.

ಅಮೆಜಾನ್‌ಗೆ ಬರಲಿದೆ 'ವಾರಿಸು'
'ವಾರಿಸು' ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಿದ್ದು, ವಂಶಿ ಪೈಡಪಲ್ಲಿ ನಿರ್ದೇಶನ ಮಾಡಿದ್ದಾರೆ. ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಜನವರಿ 12 ರಂದು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆದ ಈ ಸಿನಿಮಾ ಈವರೆಗೆ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಕರ್ನಾಟಕದಲ್ಲಿಯೂ ಉತ್ತಮ ಮೊತ್ತವನ್ನು ಈ ಸಿನಿಮಾ ಗಳಿಕೆ ಮಾಡಿದೆ. ಶೀಘ್ರದಲ್ಲಿಯೇ ಈ ಸಿನಿಮಾ ಅಮೆಜಾನ್ ಪ್ರೈಂಗೆ ಬರಲಿದೆ.


Click it and Unblock the Notifications











