ರಜನಿಕಾಂತ್ ಎದುರು ಶಿವಣ್ಣನ ಜೊತೆ ವಿಜಯ್ ಸೇತುಪತಿ ಆರ್ಭಟ; ಗುಡ್‌ನ್ಯೂಸ್ ಕೊಟ್ಟ ನಟ
ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಸ್ಟಾರ್ ನಟರೆಲ್ಲಾ ಒಂದೇ ಚಿತ್ರದಲ್ಲಿ ದರ್ಶನ ಕೊಟ್ಟು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಮಿಳು, ತೆಲುಗಿನಲ್ಲಿ ಈ ಪ್ರಯತ್ನ ಜೋರಾಗಿ ನಡೀತಿದೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
ತಲೈವಾ ಜೊತೆ ಶಿವಣ್ಣ, ಮೋಹನ್ ಲಾಲ್ ಮಿಂಚಿದ್ದರು. ಬಳಿಕ 'ಕೂಲಿ' ಚಿತ್ರದಲ್ಲಿ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಅಬ್ಬರಿಸಿದ್ದರು. ಇದೀಗ ಮತ್ತೆ 'ಜೈಲರ್'-2 ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಶಿವಣ್ಣ, ಮೋಹನ್ ಲಾಲ್ ಜೊತೆ ವಿಜಯ್ ಸೇತುಪತಿ ಕೂಡ ಬಣ್ಣ ಹಚ್ಚಿದ್ದಾರೆ. ಸ್ವತಃ ಸೇತುಪತಿ ಈ ಬಗ್ಗೆ ಮಾತನಾಡಿದ್ದಾರೆ.

ರಜನಿಕಾಂತ್ ಜೊತೆ ನಟಿಸೋ ಅವಕಾಶ ಸಿಕ್ಕರೆ ಯಾರೂ ಬೇಡ ಅನ್ನಲ್ಲ. ತಮ್ಮ ಅದ್ಭುತ ನಟನೆಯಿಂದ ವಿಜಯ್ ಸೇತುಪತಿ ಗಮನ ಸೆಳೆಯುತ್ತಿದ್ದಾರೆ. ಇದೀಗ 'ಜೈಲರ್- 2' ಚಿತ್ರದಲ್ಲಿ ತಲೈವಾ ಎದುರು ನಟಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ನಟಿಸಿದ 'ಏಸ್' ಸಿನಿಮಾ ಗೆಲ್ಲಲಿಲ್ಲ. ಆದರೆ ಫ್ಯಾಮಿಲಿ ಎಂಟರ್‌ಟ್ರೈನರ್ 'ತಲೈವನ್ ತಲೈವಿ' ಸಿನಿಮಾ ಹಿಟ್ ಆಗಿತ್ತು. 'ಗಾಂಧಿ ಟಾಕ್ಸ್', 'ಟ್ರೈನ್', 'ಅರಸನ್' ಹೀಗೆ ಸೇತುಪತಿ ನಟನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಿದೆ. The Hollywood Reporter India ಯೂಟ್ಯೂಬ್ ಸಂದರ್ಶನದಲ್ಲಿ ವಿಜಯ್ ಮಾತನಾಡಿದ್ದಾರೆ. ಈ ವೇಳೆ 'ಜೈಲರ್- 2' ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ನಾನು 'ಜೈಲರ್- 2' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದೇನೆ. ಕಾರಣ ನಾನು ರಜನಿ ಸರ್‌ನ ಬಹಳ ಪ್ರೀತಿಸ್ತೀನಿ. ಅವರ ಜೊತೆಗಿದ್ದರೆ ಸಾಕಷ್ಟು ಕಲಿಯಬಹುದು. ಹಲವು ದಶಕಗಳಿಂದ ಸೂಪರ್ ಸ್ಟಾರ್ಸ್ ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಅವರಿಂದ ಕಲಿಯುವುದು ಸಾಕಷ್ಟಿದೆ" ಎಂದು ವಿಜಯ್ ಸೇತುಪತಿ ತಿಳಿಸಿದ್ದಾರೆ.
ನೆಲ್ಸನ್ ನಿರ್ದೇಶನದ 'ಜೈಲರ್- 2' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ನರಸಿಂಹ ಆಗಿ ಮತ್ತೊಮ್ಮೆ ಶಿವಣ್ಣ ಅಬ್ಬರಿಸಲಿದ್ದಾರೆ. ಈ ಬಾರಿ ಅವರ ಪಾತ್ರಕ್ಕೆ ಮತ್ತಷ್ಟು ಹೆಚ್ಚು ಅವಕಾಶ ಸಿಕ್ಕಿದೆ. ಈ ವರ್ಷವೇ ಸಿನಿಮಾ ಬಿಡುಗಡೆ ಆಗಲಿದೆ. ಕಳೆದ ವರ್ಷ ಸಂಕ್ರಾಂತಿಗೆ ಸಿನಿಮಾ ಘೋಷಣೆ ಆಗಿತ್ತು. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕೆ ಇರಲಿದೆ.
ಎರಡೂವರೆ ವರ್ಷದ ಹಿಂದೆ ತೆರೆಗೆ ಬಂದಿದ್ದ 'ಜೈಲರ್' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ನರಸಿಂಹ ಆಗಿ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಆರ್ಭಟಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗಿತ್ತು.
ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ಮಾಪಕರು ಲಾಭದಲ್ಲಿ ಒಂದು ಪಾಲನ್ನು ನಟ ರಜನಿಕಾಂತ್, ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ದ್‌ಗೆ ನೀಡಿದ್ದರು. ಮೂವರಿಗೂ ಒಂದೊಂದು ಕಾರ್ ಉಡುಗೊರೆ ಆಗಿ ಕೊಟ್ಟಿದ್ದರು. ಅದೇ ಸಮಯದಲ್ಲಿ ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿವಣ್ಣ ಕೂಡ ನರಸಿಂಹ ಆಗಿ ಚಿತ್ರದಲ್ಲಿ ಬಣ್ಣ ಹಚ್ಚಿ ಮತ್ತೆ ನಟಿಸಿದ್ದಾರೆ.
ಜೂನ್ 12ಕ್ಕೆ 'ಜೈಲರ್' ಸಿನಿಮಾ ಬಿಡುಗಡೆ ಆಗಲಿದೆ. ಸೀಕ್ವೆಲ್‌ನಲ್ಲಿ ತೆಲುಗು ನಟ ಬಾಲಕೃಷ್ಣ ಕೂಡ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈವರೆಗೆ ಆ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಎಸ್. ಜೆ ಸೂರ್ಯ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನುಳಿದಂತೆ ರಮ್ಯಾಕೃಷ್ಣ, ಯೋಗಿ ಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











