ಬೆಂಗಳೂರು ಏರ್‌ಪೋರ್ಟ್ ಹಲ್ಲೆ ಪ್ರಕರಣ: ವಿಜಯ್ ಸೇತುಪತಿಗೆ ಸುಪ್ರೀಂ ಕೋರ್ಟ್ ತರಾಟೆ
2021 ನವೆಂಬರ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ ಬೆಂಗಳೂರಿಗೆ ಆಗಮಿಸಿದ್ದರು. ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಲು ಅವರು ಬಂದಿದ್ದರು. ಈ ವೇಳೆ ವಿಜಯ್ ಸೇತುಪತಿ ಹಾಗೂ ಮಹಾಗಾಂಧಿ ಎಂಬ ಪ್ರಯಾಣಿಕನ ನಡುವೆ ಕಿರಿಕ್ ನಡೆದಿತ್ತು. ಈ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿಜಯ್ ಸೇತುಪತಿಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
"ನೀವು ಸ್ಟಾರ್ ಹೀರೊ ಆಗಿರುವುದರಿಂದ ನಿಮಗೆ ಸಾಕಷ್ಟು ಜನ ಅಭಿಮಾನಿಗಳು ಇರುತ್ತಾರೆ ಎನ್ನುವ ವಾಸ್ತವ ನಿಮಗೆ ಗೊತ್ತಿರಲಿ. ಈ ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಂಡು ಜನರ ಮಧ್ಯೆ ಗೌರವ, ಶ್ರದ್ಧೆಯಿಂದ ನಡೆದುಕೊಳ್ಳಬೇಕು. ನಿಮ್ಮ ಅಭಿಮಾನಿಗಳನ್ನು ನಿಮ್ಮನ್ನು ನೋಡುತ್ತಿರುತ್ತಾರೆ. ನಿಮಗೆ ಇಷ್ಟ ಬಂದಂತೆ ಅವಾಚ್ಯ ಶಬ್ಧಗಳನ್ನಾಡುತ್ತಾ ಸುತ್ತಾಡೋದು ಸರಿಯಲ್ಲ" ಎಂದು ಸುಪ್ರೀಂ ಕೋರ್ಟ್ ವಿಜಯ್ ಸೇತುಪತಿಗೆ ಬುದ್ದಿ ಹೇಳಿದೆ.

ಅಂದು ವಿಮಾನ ನಿಲ್ದಾಣದಲ್ಲಿ ವಿಜಯ್ ಅವಹೇಳನಕಾರಿ ಹಾಗೂ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು ಎಂದು ಮಹಾ ಗಾಂಧಿ ಚೆನ್ನೈ ಕೋರ್ಟ್ ಮೆಟ್ಟಿಲೇರಿದ್ದರು. ವಿಜಯ್ ಸೇತುಪತಿ ಹಾಗೂ ಜಾನ್ಸನ್ ವಿರುದ್ದ ಕ್ರಿಮಿನಲ್ ಮೊಹದ್ದಮೆ ದಾಖಲಿಸಿದ್ದರು. ಮಾನನಷ್ಟ ಮೊಕದ್ದಮೆ ಕೂಡ ಹೂಡಿದ್ದರು. ನಟ ವಿಜಯ್ ಸೇತುಪತಿ ಜೊತೆಗೆ ಆತನ ಮ್ಯಾನೇಜರ್ ಜಾನ್ಸನ್ ವಿರುದ್ಧವೂ ದೂರು ದಾಖಲಿಸಿದ್ದರು. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಸದ್ಯ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಆಗ ತಾನೇ ವಿಜಯ್ ಸೇತುಪತಿ ಸೂಪರ್ ಡೀಲಕ್ಸ್ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ನಾನು ವಿಮಾನ ನಿಲ್ದಾಣದಲ್ಲಿ ಅವರನ್ನು ನೋಡಿ ಶುಭ ಕೋರಿದೆ. ಆದರೆ ಸಾರ್ವಜನಿಕ ಎದುರು ಅವರು ಅವಹೇಳಕಾರಿ ಹೇಳಿಕೆ ನೀಡಿ ವ್ಯಂಗ್ಯ ಮಾಡಿದ್ದರು. ನಂತರ ವಿಮಾನ ನಿಲ್ದಾಣದಿಂದ ಹೊರಬರುವಾಗ ವಿಜಯ್ ಸೂಚನೆಯಂತೆ ಆತನ ಸಹಾಯಕ ಜಾನ್ಸನ್ ಎಂಬುವವರು ನನ್ನ ಮೇಲೆ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಕೊಲೆ ಬೆದರಿಕೆ ಸಹ ಹಾಕಿದ್ದರು ಎಂದು ಮಾಹಗಾಂಧಿ ದೂರಿನಲ್ಲಿ ತಿಳಿಸಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್ ಸೇತುಪತಿ ಆ ವ್ಯಕ್ತಿ ಕುಡಿದು ನನ್ನ ಮೇಲೆ ಆ ದಿನ ದಾಳಿ ಮಾಡಿದ್ದ ಎಂದು ಹೇಳಿದ್ದರು. ಸಂದರ್ಶನದಲ್ಲಿ ಸೇತುಪತಿ ಹೇಳಿಕೆ, ಆರೋಪಗಳು ಮಹಾಗಾಂಧಿ ಅವರನ್ನು ಹೆಚ್ಚು ಕೆರಳಿಸಿತ್ತು. ಹಾಗಾಗಿ ಮಹಾಗಾಂಧಿ ಕೋರ್ಟ್ ಮೆಟ್ಟಿಲೇರಿದ್ದರು.


Click it and Unblock the Notifications











