Beast: 'ಬೀಸ್ಟ್' ಟ್ರೇಲರ್ ಬಿಡುಗಡೆ: 'ಕೆಜಿಎಫ್ 2'ಗೆ ತಕ್ಕುದಾದ ಎದುರಾಳಿಯೇ
ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ 'ಬೀಸ್ಟ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಭರಪೂರ ಆಕ್ಷನ್ ನಿಂದ ತುಂಬಿದ ಟ್ರೇಲರ್ ಇದಾಗಿದೆ.
ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿರುವ ಸೈನಿಕ, ಹೈಜಾಕ್ ಆದ ಮಾಲ್ ಒಂದರಲ್ಲಿ ಅಕಸ್ಮಾತ್ ಆಗಿ ಸೇರಿಕೊಂಡಿರುತ್ತಾನೆ. ಹೈಜಾಕ್ ಮಾಡಿರುವ ಶಸ್ತ್ರಸಜ್ಜಿತ ತಂಡವನ್ನು ಹೇಗೆ ಆತ ಎಲಿಮಿನೇಟ್ ಮಾಡುತ್ತಾನೆ ಎಂಬ ಕತೆಯನ್ನು 'ಬೀಸ್ಟ್' ಹೊಂದಿದೆ ಎಂಬುದು ಟ್ರೇಲರ್ ನಿಂದ ಗೊತ್ತಾಗುತ್ತಿದೆ.
ಮಾಲ್ ಹೈಜಾಕ್ ಕತೆಯ ಜೊತೆಗೆ ವಿಜಯ್ ಸೈನಿಕನಾಗಿದ್ದ ಮಾಡಿದ್ದ ಆಪರೇಷನ್ ಒಂದರ ದೃಶ್ಯಗಳು ಜೊತೆ-ಜೊತೆಯಾಗಿ ಸಾಗುತ್ತವೆ ಎಂಬುದು ಸಹ ಟ್ರೇಲರ್‌ನಿಂದ ಗೊತ್ತಾಗುತ್ತಿದೆ. ಮಿಲಿಟರಿ ಆಪರೇಷನ್‌ನ ದೃಶ್ಯದ ತುಣುಕುಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದ್ದು, ದೃಶ್ಯಗಳು ಮೈನವಿರೇಳಿಸುವಂತಿದೆ.
ಸಿನಿಮಾದಲ್ಲಿ ವಿಜಯ್ ಹೆಸರು ವೀರ ರಾಘವನ್ ಎಂದಾಗಿದ್ದು ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಅದ್ಭುತ ಆಕ್ಷನ್ ದೃಶ್ಯಗಳು, ಗನ್ ಫೈಟ್‌ಗಳು ಸಿನಿಮಾದ ಉದ್ದಕ್ಕೂ ಇದೆ. ಜೊತೆಗೆ ತುಸು ಹಾಸ್ಯವೂ ಇರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. ಟ್ರೇಲರ್‌ನಲ್ಲಿ ಕಂಡು ಬರುವ ಯುದ್ಧ ವಿಮಾನಗಳ ಫೈಟ್ ದೃಶ್ಯದ ತುಣುಕು ಅದ್ಭುತವಾಗಿದೆ.

'ಬೀಸ್ಟ್' ಸಿನಿಮಾವು ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಿಡುಗಡೆಗೆ ಒಂದು ದಿನ ಮುಂಚೆ ಅಂದರೆ ಏಪ್ರಿಲ್ 13 ರಂದು ಬಿಡುಗಡೆ ಆಗುತ್ತಿದ್ದು, ಟ್ರೇಲರ್ ನೋಡಿದರೆ 'ಕೆಜಿಎಫ್ 2' ಎದುರು ಪ್ರಬಲ ಸ್ಪರ್ಧೆಯನ್ನೇ ಒಡ್ಡಲಿದೆ ಎಂದು ಅಂದಾಜು ಮಾಡಬಹುದಾಗಿದೆ.
ಇಂದು ಬಿಡುಗಡೆ ಆಗಿರುವ 'ಬೀಸ್ಟ್' ಟ್ರೇಲರ್‌ನಲ್ಲಿ ಪೂರ್ಣ ವಿಜಯ್‌ರದ್ದೇ ಶೋ ಇದ್ದು, ನಾಯಕಿಗೆ ಇತರ ಪಾತ್ರಕ್ಕೆ ಯಾವ ಪ್ರಾಶಸ್ತ್ಯವೂ ಇಲ್ಲ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಅವರು ಟ್ರೇಲರ್‌ನ ಒಂದೆರಡು ದೃಶ್ಯದಲ್ಲಿಯಷ್ಟೆ ಕಾಣಿಸಿಕೊಳ್ಳುತ್ತಾರೆ. ನಟ ಯೋಗಿ ಬಾಬು ಸಹ ಇದ್ದು, ಅವರೂ ಸಹ ಒಂದು ದೃಶ್ಯದಲ್ಲಿ ಅಷ್ಟೆ ಕಾಣಿಸಿಕೊಳ್ಳುತ್ತಾರೆ. ಆದರೆ ಅನಿರುದ್ ನೀಡಿರುವ ಸಂಗೀತ ಅದ್ಭುತವಾಗಿದೆ.
'ಬೀಸ್ಟ್' ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ, ಸಿನಿಮಾ ನಿರ್ಮಾಣ ಮಾಡಿರುವುದು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್, ಸಿನಿಮಾಕ್ಕೆ ಸಂಗೀತ ನೀಡಿರುವುದು ಅನಿರುದ್ ರವಿಚಂದ್ರನ್, ಫೈಟ್ ಕೊರಿಯಾಗ್ರಫಿ ಮಾಡಿರುವುದು ಅನ್ಬರಿವ್. ಸಿನಿಮಾವು ಏಪ್ರಿಲ್ 13 ರಂದು 'ಕೆಜಿಎಫ್ 2' ಗೆ ಎದುರಾಳಿಯಾಗಿ ಬಿಡಗುಡೆ ಆಗುತ್ತಿದೆ. 'ಕೆಜಿಎಫ್ 2' ಹಾಗೂ 'ಬೀಸ್ಟ್' ನಡುವೆ ಗೆಲ್ಲುವುದು ಯಾರು ಕಾದು ನೋಡಬೇಕಿದೆ.
ಆದರೆ 'ಬೀಸ್ಟ್' ಆಗಲಿ 'ಕೆಜಿಎಫ್ 2' ತಂಡವಾಗಲಿ ಪರಸ್ಪರರ ಸಿನಿಮಾಗಳು ಎದುರು ಬದುರಾಗಿರುವ ಬಗ್ಗೆ ಯಾವುದೇ ಆತಂಕ ವ್ಯಕ್ತಪಡಿಸಿಲ್ಲ. ಬದಲಿಗೆ 'ಬೀಸ್ಟ್' ಸಿನಿಮಾದ ನಿರ್ದೇಶಕ ನೆಲ್ಸನ್ 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಅನ್ನು ಹೊಗಳಿದ್ದರು. ಅದಕ್ಕೆ 'ಕೆಜಿಎಫ್ 2' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ 'ಬೀಸ್ಟ್'ಗೆ ಶುಭಾಶಯಗಳನ್ನು ಕೋರಿದ್ದರು.
'ಬೀಸ್ಟ್' ಸಿನಿಮಾದ ಜೊತೆಗೆ ಸ್ಪರ್ಧೆಯ ಬಗ್ಗೆ ಯಶ್ ಸಹ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಪರಸ್ಪರರ ಮೇಲೆ ಸ್ಪರ್ಧೆ ಮಾಡಲು ಇದು ಚುನಾವಣೆ ಅಲ್ಲ ಚಿತ್ರರಂಗ, ಬಿಡುಗಡೆ ಆದ ಎಲ್ಲ ಸಿನಿಮಾಗಳು ಗೆಲ್ಲಬೇಕು. ವಿಜಯ್ ಅವರು ಬಹಳ ಹಿರಿಯರು ಅವರ ಬಗ್ಗೆ ಗೌರವ ಇದೆ ಎಂದು ಹೇಳಿದ್ದರು.


Click it and Unblock the Notifications











