ಆನ್ ಲೈನ್ ನಲ್ಲಿ 'ಮಾಸ್ಟರ್' ಸಿನಿಮಾ ಲೀಕ್ ಮಾಡಿದ ತಮಿಳು ರಾಕರ್ಸ್: ಸಖತ್ ವೈರಲ್
ದಳಪತಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿದೆ. ವರ್ಷದ ಪ್ರಾರಂಭದಲ್ಲಿ ರಿಲೀಸ್ ಆದ ಸಿನಿಮಾ ಎನ್ನುವ ಖುಷಿಯಾದರೆ, ಕೊರೊನಾ ಲಾಕ್ ಡೌನ್ ಬಳಿಕ ಸುಮಾರು 9 ತಿಂಗಳ ನಂತರ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಅವಕಾಶ ಸಿಕ್ಕಿದ ಸಂತಸ ಮತ್ತೊಂದೆಡೆ.
ಇಂದು ಬೆಳ್ಳಂಬೆಳಗ್ಗೆ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಆದರೆ ಆಗಲೇ ಮಾಸ್ಟರ್ ಸಂಪೂರ್ಣ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿ ವೈರಲ್ ಆಗಿದೆ. ತಮಿಳು ರಾಕರ್ಸ್ ಮತ್ತು ಬೇರೆ ಬೇರೆ ಸೈಟ್ ಗಳಲ್ಲಿ ಸಿನಿಮಾ ಲೀಕ್ ಆಗಿದ್ದು, ಫ್ರಿಯಾಗಿ ಡೌನ್ ಲೋಡ್ ಮಾಡಿಕೊಂಡು ವೀಕ್ಷಿಸುತ್ತಿದ್ದಾರೆ.
ಸಿನಿಮಾ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಸಿನಿಮಾತಂಡ ಪ್ರತಿಕ್ರಿಯೆ ನೀಡಿ, ವಿಡಿಯೋವನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಇದೀಗ ಸಂಪೂರ್ಣ ಸಿನಿಮಾನೇ ಲೀಕ್ ಆಗಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಸೋರಿಕೆ ಆಗಿರುವುದು ಚಿತ್ರತಂಡಕ್ಕೆ ಬೇಸರ ತಂದಿದೆ. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿ ಆನ್ ಲೈನ್ ನಲ್ಲಿ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಅನೇಕ ಸಿನಿಮಾಗಳಿಗೂ ಇದೇ ಗತಿ ಎದುರಾಗಿದೆ.
ಮಾಸ್ಟರ್ ಸಿನಿಮಾ ತಮಿಳು ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗಿದೆ. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಬಂದ ಸಿನಿಮಾದಲ್ಲಿ ದಳಪತಿ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಮಾಳವಿಕಾ ಮೋಹನ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











