ವಿಜಯ್ 'ಮಾಸ್ಟರ್' ಸಿನಿಮಾದ ಹಿಂದಿ ವರ್ಷನ್ ಗೆ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ದಳಪತಿ ವಿಜಯ್ ಸಿನಿಮಾಗೆ ಹಿಂದಿಯಲ್ಲೂ ಭಾರಿ ಬೇಡಿಕೆ ಇದೆ. ಇದೀಗ ಅಭಿಮಾನಿಗಳು ಮಾಸ್ಟರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ವಿಶೇಷ ಎಂದರೆ ಮಾಸ್ಟರ್ ಏಕಕಾಲಕ್ಕೆ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ವಿಜಯ್ ಸಿನಿಮಾವೊಂದು ಮೊದಲ ಬಾರಿಗೆ ಏಕಕಾಲಕ್ಕೆ ಅನೇಕ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದನ್ನು ಕೇಳಿ ದಳಪತಿ ಅಭಿಮಾನಿಗಳು ಭಾರಿ ನಿರಾಸೆ ಪಟ್ಟಿದ್ದರು. ಆದರೆ ನಿರ್ಮಾಪಕರು ಈ ಬಗ್ಗೆ ಸ್ಪಷ್ಟನೆ ನೀಡಿ, ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲೇ ರಿಲೀಸ್ ಆಗಲಿದೆ ಎಂದು ಹೇಳುವ ಮೂಲಕ ಅಭಿಮಾನಿಗಳ ಸಂತಸ ಹೆಚ್ಚಿಸಿದ್ದರು.
ಇದೀಗ ಮಾಸ್ಟರ್ ಸಿನಿಮಾದ ಬಗ್ಗೆ ಹರಿದಾಡುತ್ತಿರುವ ಸುದ್ದಿ ಎಂದರೆ ಚಿತ್ರದ ಹಿಂದಿ ಡಬ್ಬಿಂಗ್ ಗೆ ಬೇಡಿಕೆ ಹೆಚ್ಚಾಗಿದೆಯಂತೆ. ಉತ್ತರ ಭಾರತದಲ್ಲಿ ಮಾಸ್ಟರ ಹಿಂದಿ ವರ್ಷನ್ ಕೊಂಡುಕೊಳ್ಳಲು ಅನೇಕರು ಮುಂದೆ ಬಂದಿದ್ದಾರಂತೆ. ಮಾಸ್ಟರ್ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಉತ್ತರ ಭಾರತದ ಇನ್ನು ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆಯಂತೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಮಾಡಲು ಮುಂದಾಗಿದ್ದಾರೆ ಮಾಸ್ಟರ್ ತಯಾರಕರು.

ಅಂದಹಾಗೆ ಮಾಸ್ಟರ್ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಮಾಸ್ಟರ್ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ರಿಲೀಸ್ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಮಾಸ್ಟರ್ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ದಳಪತಿ ವಿಜಯ್ ಗೆ ನಾಯಕಿಯಾಗಿ ಮಾಳವಿಕಾ ಮೋಹನ್ ಕಾಣಿಸಿಕೊಂಡಿದ್ದಾರೆ.
ವಿಶೇಷ ಎಂದರೆ ವಿಜಯ್ ಸೇತುಪತಿ ದಳಪತಿ ವಿರುದ್ಧ ಖಳನಟನಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ಇಬ್ಬರು ಮುಖಾಮುಖಿ ಆಗುತ್ತಿರುವುದನ್ನು ನೋಡಲು ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.


Click it and Unblock the Notifications











