ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಲೀಕ್ ಆಯ್ತು ವಿಜಯ್ ನಟನೆಯ ವಾರಿಸು ಎಚ್‌ಡಿ ಚಿತ್ರ!

ಈ ಹಿಂದೆ ಪೈರಸಿ ದೈತ್ಯ ತಮಿಳು ರಾಕರ್ಸ್ ಹೊಡೆತಕ್ಕೆ ಸಿಲುಕಿ ನಷ್ಟ ಅನುಭವಿಸಿದ ಚಿತ್ರ ಒಂದೆರೆಡಲ್ಲ. ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಚಿತ್ರಗಳನ್ನು ವೀಕ್ಷಿಸಿ ಹೊರಬಂದ ಸಿನಿ ಪ್ರೇಕ್ಷಕ ಮನೆ ತಲುಪುವುದರೊಳಗೆ ಆ ಚಿತ್ರದ ಸ್ಪಷ್ಟವಾದ ಥಿಯೇಟರ್ ಪ್ರಿಂಟ್ ತಮಿಳ್ ರಾಕರ್ಸ್ ವೆಬ್ ತಾಣದಲ್ಲಿ ಅಪ್ಲೋಡ್ ಆಗಿರ್ತಾ ಇತ್ತು.
ಈ ವೆಬ್ ತಾಣ ಮುನ್ನಡೆಸುತ್ತಿದ್ದ ಅಡ್ಮಿನ್ಸ್ ಸಿಕ್ಕಿಹಾಕಿಕೊಂಡು ತಮಿಳ್ ರಾಕರ್ಸ್ ವೆಬ್ ತಾಣ ಸಹ ಮುಚ್ಚಲ್ಪಟ್ಟಿತಾದರೂ ಸಿನಿಮಾಗಳು ಮೊದಲ ರೀತಿಯೇ ಲೀಕ್ ಆಗುವುದು ನಿಲ್ಲಲಿಲ್ಲ. ಏಕೆಂದರೆ ತಮಿಳ್ ರಾಕರ್ಸ್ ನಿಂತ ಬೆನ್ನಲ್ಲೇ ತಮಿಳ್ ಎಂವಿ ಚಾಲನೆಗೆ ಬಂತು. ಇದೂ ಸಹ ತಮಿಳ್ ರಾಕರ್ಸ್ ಮಾದರಿಯಲ್ಲೇ ಸಿನಿಮಾಗಳನ್ನು ಲೀಕ್ ಮಾಡಲಾರಂಭಿಸಿತು.
ಇನ್ನು ಕೆಲ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವಾಗಲೇ ತಮಿಳ್ ಎಂವಿ ವೆಬ್ ತಾಣ ಲೀಕ್ ಮಾಡಿತ್ತು. ಈ ಸಾಲಿಗೆ ಈಗ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ವಾರಿಸು ಸಹ ಸೇರಿಕೊಂಡಿದೆ. ಹೌದು, ಕಳೆದ ತಿಂಗಳು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡು ಇನ್ನೇನೂ ಮುನ್ನೂರು ಕೋಟಿ ಕ್ಲಬ್ ಸೇರಬೇಕು ಎನ್ನುವಷ್ಟರಲ್ಲಿ ಚಿತ್ರವನ್ನು ಲೀಕ್ ಮಾಡಲಾಗಿದೆ. ಅದರಲ್ಲಿಯೂ ಚಿತ್ರ ಎಚ್ ಡಿ ಪ್ರಿಂಟ್ ಆಗಿರುವುದರಿಂದ ಇನ್ನು ಚಿತ್ರವನ್ನು ಚಿತ್ರಮಂದಿರಕ್ಕೆ ಸಿನಿ ರಸಿಕರು ಹೋಗುವುದು ತೀರಾ ಕಡಿಮೆ ಇರಲಿದ್ದು, ಓಟಿಟಿ ಬಿಡುಗಡೆಯೂ ಸಹ ಬೇಗನೇ ಆಗಲಿದೆ.


Click it and Unblock the Notifications











