ವಾರಿಸು ನಿರ್ದೇಶಕನ ಜತೆ ಮತ್ತೆ ಸಿನಿಮಾ; ವಿಜಯ್ ಮುಂದಿನ 4 ಚಿತ್ರಗಳ ಡೈರೆಕ್ಟರ್ಸ್ ರಿಪೀಟ್, ರಿಪೀಟ್!
ತಮಿಳುನಾಡು ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿರುವ ನಟ ದಳಪತಿ ವಿಜಯ್ ಈ ವರ್ಷ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ವಾರಿಸು ಚಿತ್ರದ ಮೂಲಕ ದೊಡ್ಡಮಟ್ಟದಲ್ಲಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 300 ಕೋಟಿ ಗಳಿಸುವ ಮೂಲಕ ಅಬ್ಬರಿಸಿದೆ.
ಇನ್ನು ಈ ಚಿತ್ರಕ್ಕೆ ತೆಲುಗಿನ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳಿದ್ದರು. ವಿಜಯ್ ಅಭಿಮಾನಿಗಳು ಹಾಗೂ ತಮಿಳಿನ ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡರೆ ಉಳಿದ ಸಿನಿ ರಸಿಕರು ಚಿತ್ರ ಪಕ್ಕಾ ಧಾರಾವಾಹಿ ಎಂದು ಟ್ರೋಲ್ ಮಾಡಿದ್ದರು. ವಿಜಯ್ ಮತ್ತೆ ಇಂತಹ ನಿರ್ದೇಶಕರಿಗೆ ಕಾಲ್‌ಶೀಟ್ ಕೊಡುವುದನ್ನು ಬಿಟ್ಟು ವಿಭಿನ್ನ ಕಥೆಗಳನ್ನು ಹೆಣೆಯುವ ನಿರ್ದೇಶಕರ ಜತೆ ಚಿತ್ರ ಮಾಡಬೇಕು ಎಂಬ ಅಭಿಪ್ರಾಯ ದೊಡ್ಡ ಮಟ್ಟದಲ್ಲಿಯೇ ಕೇಳಿಬಂದಿತ್ತು.

ಆದರೆ ಇದೀಗ ವಿಜಯ್ ಮತ್ತೆ ವಾರಿಸು ತಂಡದ ಜತೆ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ವಾರಿಸು ಕಿರಿಕಿರಿ ಎಂದಿದ್ದವರ ಬೇಸರ ಮತ್ತೆ ಹೆಚ್ಚಾಗಿದೆ. ಮತ್ತೊಂದು ಧಾರಾವಾಹಿನಾ ಎಂದು ಟ್ರೋಲ್ ಮಾಡಿದ್ದಾರೆ. ಸದ್ಯ ತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೊ ಚಿತ್ರಕ್ಕೆ ಸಹಿ ಹಾಕಿರುವ ದಳಪತಿ ವಿಜಯ್ ನಂತರದ ದಿನಗಳಲ್ಲಿ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಇದರಲ್ಲಿ ವಂಶಿ ಪೈಡಿಪಲ್ಲಿ ಹೆಸರಿರುವುದು ಕೆಲ ಅಭಿಮಾನಿಗಳಲ್ಲಿಯೂ ಬೇಸರ ತಂದಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಬಳಿಕ ವಿಜಯ್ 68ನೇ ಸಿನಿಮಾಗೆ ಅಟ್ಲಿ ನಿರ್ದೇಶನವಿರಲಿದ್ದು, 69ನೇ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಹಾಗೂ 70ನೇ ಚಿತ್ರಕ್ಕೆ ಮತ್ತೆ ಲೋಕೇಶ್ ಕನಕರಾಜ್ ನಿರ್ದೇಶನವಿರಲಿದೆ. ಈ ಮೂಲಕ ವಿಜಯ್ ಮುಂದಿನ ನಾಲ್ಕು ಚಿತ್ರಗಳಲ್ಲಿ ಈಗಾಗಲೇ ಕೆಲಸ ಮಾಡಿರುವ ನಿರ್ದೇಶಕರ ಜತೆಯೇ ಕೈಜೋಡಿಸಲಿದ್ದು, ಹೊಸ ನಿರ್ದೇಶಕರ ಚಿತ್ರಗಳಲ್ಲಿ ಮುಂದಿನ ಐದಾರು ವರ್ಷ ಕೈಜೋಡಿಸುವುದು ದೂರದ ಮಾತು ಎಂದೇ ಹೇಳಬಹುದು..


Click it and Unblock the Notifications











