ದಳಪತಿ ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ
ತಮಿಳು ನಟ ವಿಜಯ್ ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ದಳಪತಿ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಟಿವಿಕೆ ಪಕ್ಷ ಚಮತ್ಕಾರ ಮಾಡುತ್ತದೆ ಎನ್ನುವ ವಿಶ್ಲೇಷಣೆ ನಡೀತಿದೆ.
ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುವವರು ವೋಟ್ ಹಾಕಿ ಗೆಲ್ಲಿಸಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. ಪ್ರತಿಭೆ ಬೇರೆ, ರಾಜಕೀಯ ಬೇರೆ ಎಂದು ಕೌಂಟರ್ ಕೊಟ್ಟಿದ್ದಾರೆ. ಇಷ್ಟು ದಿನ ಸುಮ್ಮನಿದ್ದು ಈಗ ರಾಜಕೀಯಕ್ಕೆ ಬಂದುಬಿಟ್ರೆ ಜನ ಒಪ್ಪಿಬಿಡಬೇಕಾ ಎಂದು ಪ್ರಶ್ನಿಸಿದ್ದಾರೆ. ವಿಜಯ್ ನಟನೆಯ ಸಿನಿಮಾಗಳಲ್ಲಿ ವಿಲನ್ ಆಗಿ ಪ್ರಕಾಶ್ ರಾಜ್ ನಟಿಸಿದ್ದಾರೆ. 'ಜನನಾಯಗನ್' ಚಿತ್ರದಲ್ಲಿ ಕೂಡ ಅವರು ಅಬ್ಬರಿಸಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ಈ ಬಾರಿ ದ್ರಾವಿಡ ಮಾಡೆಲ್, ಗುಲಾಮಗಿರಿ ಹಾಗೂ ಸಿನಿಮಾ ಮಾಡೆಲ್ ಆಧರಿಸಿ ಈ ಚುನಾವಣೆ ನಡೀತಿದೆ ಎಂದು ಹೇಳಿದ್ದಾರೆ. "ಒಂದು ಸಿನಿಮಾದಲ್ಲಿ ನೀವು ಡಾಕ್ಟರ್ ಆಗಬಹುದು, ಇಂಜಿನಿಯರ್ ಆಗಬಹುದು, ಸಿಎಂ ಕೂಡ ಆಗಬಹುದು. ರಾಜಕೀಯರಂಗದಲ್ಲಿ ಅದೇ ರೀತಿ ಸಿಎಂ ಆಗಿಬಿಡ್ತೀಯಾ? ಯಾರು ರಾಜಕೀಯ ಮಾತನಾಡಬೇಕು. ನನ್ನ ಮಟ್ಟಕ್ಕೆ ನೀನು ರಾಜಕೀಯ ಮಾತನಾಡಿದ್ದೀಯಾ?" ಎಂದು ಪರೋಕ್ಷವಾಗಿ ವಿಜಯ್ ಹೆಸರು ಹೇಳದೇ ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ಒಬ್ಬ ನಟನ ನಟನೆ ಇಷ್ಟವಾದರೆ ಬಾಯಲ್ಲಿ ಬೆರಳಿಟ್ಟು ಶಿಳ್ಳೆ ಹೊಡೆಯಬಹುದು. ರಾಜ್ಯದ ಅಧಿಕಾರ ಕೊಡಲು ಸಾಧ್ಯವಿಲ್ಲ ಎಂದು ವಿಜಯ್ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ. "ಇಷ್ಟು ವರ್ಷಗಳಲ್ಲಿ ತಮಿಳುನಾಡಿಗೆ, ಇಲ್ಲಿನ ಜನರಿಗೆ, ಭಾಷೆಗೆ, ಆತ್ಮಾಭಿಮಾನಕ್ಕೆ ಸಮಸ್ಯೆ ಆಗಿದ್ದಾಗ ನೀನು ಬಂದು ನಿಂತಿದ್ದೀಯಾ? ನಿಮ್ಮ ಮೇಲೆ ಜನ ಇಟ್ಟು ಪ್ರೀತಿ, ನಂಬಿಕೆ ತೆರೆಮೇಲೆ ಮಾತ್ರ, ರಾಜಕೀಯಕ್ಕೆ ಅಲ್ಲ. ಬಿಸಿಲಲ್ಲಿ ನಿಂತು, ಕಟೌಟ್ ಹಾಕಿ, ಸಿನಿಮಾ ನೋಡಿದ ಪ್ರೀತಿಯನ್ನು ರಾಜಕೀಯಕ್ಕೆ ಬಳಸಿಕೊಳ್ತೀರಾ? ಸಿನಿಮಾ ಬೇರೆ, ರಾಜಕೀಯ ಬೇರೆ. ಆ ಪ್ರೀತಿ ಬೇರೆ, ಈ ಪ್ರೀತಿ ಬೇರೆ. ಅದಕ್ಕೆ ಅಖಾಡಕ್ಕಿಳಿಯಬೇಕು, ಮಾತನಾಡಬೇಕು. ಸೀಮಾನ್ ಅವರು ಕೂಡ 10 ವರ್ಷಗಳಿಂದ ಜನರ ಬಗ್ಗೆ ಮಾತನಾಡುತ್ತಿದ್ದಾರೆ. ದೊಡ್ಡ ನಟರಿಂದ ಅದೆಲ್ಲಾ ಸಾಧ್ಯವಿಲ್ಲ. ದ್ರಾವಿಡ ಮಾಡೆಲ್, ಸಿನಿಮಾ ಮಾಡೆಲ್, ಗುಲಾಮಗಿರಿ ಮಾಡೆಲ್, ಯಾವ್ದು ಬೇಕು ನೀವೆ ನಿರ್ಧರಿಸಿ" ಎಂದು ಹೇಳಿದ್ದಾರೆ.
ಇದು ಎಐಎಡಿಎಂಕೆ, ಡಿಎಂಕೆ ನಡುವಿನ ಚುನಾವಣೆ ಅಲ್ಲ, ವಿಜಯ್ ಹೇಳುವಂತೆ ಟಿವಿಕೆ, ಡಿಎಂಕೆ ನಡುವಿನ ಚುನಾವಣೆ ಕೂಡ ಅಲ್ಲ. ತಮಿಳುನಾಡು ಯಾವಾಗಲೂ ಭಾರತಕ್ಕೆ ಒಂದು ಮಾಡೆಲ್ ಆಗಿ ನಿಂತಿದೆ. ಹಿಂದಿ ಹೇರಿಕೆ, ನೀಟ್ ಪರೀಕ್ಷೆ ಎಲ್ಲದ್ದಕ್ಕೂ ವಿರೋಧಿಸಿದ್ದೇವೆ. ಎದುರು ನಿಲ್ಲಬೇಕು, ಇನ್ನು ಗಟ್ಟಿಯಾಗಿ ನಿಲ್ಲಬೇಕು ಅಂದ್ರೆ ಯಾರಿಗೆ ಮತ ಹಾಕಬೇಕು ನೀವೇ ನಿರ್ಧರಿಸಿ ಎಂದು ಪ್ರಕಾಶ್ ರಾಜ್ ಹೇಳಿರುವುದು ವೈರಲ್ ಆಗ್ತಿದೆ.
ತಮಿಳುನಾಡಿನ 234 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷದ ಅಭ್ಯರ್ಥಿಗಳನ್ನು ವಿಜಯ್ ಕಣಕ್ಕಿಳಿಸಿದ್ದಾರೆ. ಖುದ್ದು ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಶತಾಯ ಗತಾಯ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಭಾರೀ ಪ್ರಚಾರ ಮಾಡುತ್ತಿದ್ದಾರೆ. 'ಜನ ನಾಯಗನ್' ನಟನೆಯ ಕೊನೆ ಸಿನಿಮಾ ಎನ್ನಲಾಗಿತ್ತು. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಬಿಡುಗಡೆ ಆಗಲೇ ಇಲ್ಲ. ಆದರೆ ಅದಕ್ಕೂ ಮುನ್ನ ಲೀಕ್ ಆಗಿ ವಿವಾದ ಸೃಷ್ಟಿಯಾಗಿದೆ.


Click it and Unblock the Notifications