ಬರ್ತ್‌ಡೇ ಫೋಟೊ AI ಅಲ್ಲ; ಸರ್ಕಾರಿ ಬಸ್‌ನಲ್ಲಿ ವಿಜಯ್ ಫೋನ್ ನೋಡಿ ಗುರ್ತಿಸಿದ ಫ್ಯಾನ್ಸ್
ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ನಡುವಿನ ರಿಲೇಶನ್‌ಶಿಪ್ ಬಗ್ಗೆ ಪದೇ ಪದೆ ಸುದ್ದಿ ಆಗ್ತಿದೆ. ಇತ್ತೀಚೆಗೆ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಹಂಚಿಕೊಂಡಿದ್ದ ಫೋಟೊ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಅದು ಎಐ ಫೋಟೊ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದೆಲ್ಲಾ ಸುಳ್ಳು ಎಂದು ಫ್ಯಾನ್ಸ್ ಹೊಸ ಸಾಕ್ಷಿ ಹುಡುಕಿ ತಂದಿದ್ದಾರೆ.
ಇಂದು(ಜೂನ್ 25) ಸಿಎಂ ವಿಜಯ್ ಚೆನ್ನೈನಲ್ಲಿ ರಾಜ್ಯ ಸಾರಿಗೆ ನಿಗಮದಿಂದ ಕಾರ್ಯನಿರ್ವಹಿಸುವ 300 ಹೊಸ ಬಸ್‌ಗಳ ಸೇವೆಗಳನ್ನು ಉದ್ಘಾಟಿಸಿದರು. ಇದೇ ವೇಳೆ ಸಾಮಾನ್ಯ ಪ್ರಯಾಣಿಕನಂತೆ ಬಸ್ ಏರಿ ಸುತ್ತಾಡಿದರು. ಸರಿಯಾಗಿ ಚಿಲ್ಲರೆ ಕೊಟ್ಟು ನಿರ್ವಾಹಕನಿಂದ ಟಿಕೆಟ್ ಕೇಳಿ ಪಡೆದು. ಬಳಿಕ ತಮ್ಮದೇ ಫೋನ್ ತೆಗೆದು ವೀಡಿಯೋ ಮಾಡಿದರು. ವಿಜಯ್ ಕೈಯಲ್ಲಿದ್ದ ಫೋನ್ ನೋಡಿ ಮೊನ್ನೆ ತ್ರಿಶಾ ಹಂಚಿಕೊಂಡಿದ್ದ ಬರ್ತ್‌ಡೇ ಸೆಲೆಬ್ರೇಷನ್ ಫೋಟೊದಲ್ಲಿ ಇದ್ದಿದ್ದು ಇದೇ ಫೋಟೊ ಅಲ್ವೇ ಎಂದು ನೆನಪಿಸಿಕೊಂಡಿದ್ದಾರೆ.

ವಿಜಯ್ ಹುಟ್ಟುಹಬ್ಬವನ್ನು ತ್ರಿಶಾ ಸೆಲೆಬ್ರೇಟ್ ಮಾಡಿಲ್ಲ. ಬದಲಿಗೆ ಎಐ ಬಳಸಿ ಮಾಡಿದ ಫೋಟೊವನ್ನು ಹಂಚಿಕೊಂಡು ನಾಟಕ ಮಾಡಿದ್ದಾರೆ ಎಂದು ಕೆಲವರು ವ್ಯಂಗ್ಯವಾಡಿದ್ದರು. ವಿಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಲಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ. ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನುವ ಚರ್ಚೆ ಶುರುವಾಗುತ್ತಿದ್ದಂತೆ ತ್ರಿಶಾ ಈ ಫೋಟೊ ತೇಲಿಬಿಟ್ಟು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಅದರ ಬೆನ್ನಲ್ಲೇ ಫೋಟೊದ ಅಸಲಿಯತ್ತಿನ ಬಗ್ಗೆ ಕೆಲವರು ಕಾಮೆಂಟ್ ಮಾಡಿದ್ದರು.
ಇದು ಎಐ ಜಮಾನ. ಸತ್ಯದ ತಲೆಮೇಲೆ ಹೊಡೆದಂತೆ ನಕಲಿ ಫೋಟೊ, ವಿಡಿಯೋ ಸೃಷ್ಟಿಸಬಹುದು. ತ್ರಿಶಾ ಕೂಡ ಎಐ ಇಮೇಜ್ ಪೋಸ್ಟ್ ಮಾಡಿದ್ದಾರೆ. ಸಿಎಂ ವಿಜಯ್ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿರುವುದೆಲ್ಲಾ ಸುಳ್ಳು ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಗಾಯಕಿ ಸುಚಿತ್ರಾ ಕೂಡ ಇದೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಫೋಟೊದಲ್ಲಿ ಟೇಬಲ್ ಮೇಲೆ ವಿಜಯ್ ತಮ್ಮ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಂಡಿರುವುದು ಕಂಡುಬಂದಿತ್ತು. ಸದ್ಯ ಬಸ್ ಪ್ರಯಾಣದ ವೇಳೆ ಅದೇ ಮಾಡೆಲ್ ಫೋನ್ ಬಳಸಿ ವೀಡಿಯೋ ಮಾಡಿದ್ದಾರೆ. ಎರಡೂ ಫೋನ್ ಒಂದೇ. ಹಾಗಾಗಿ ಬರ್ತ್‌ಡೇ ಫೋಟೊ ಎಐ ಬಳಸಿ ಮಾಡಿರುವುದು ಎನ್ನುವವರು ಇನ್ನಾದರೂ ಸುಮ್ಮನಿರಿ ಎಂದು ತಿರುಗೇಟು ನೀಡುತ್ತಿದ್ದಾರೆ.
ವಿಜಯ್ ಹಾಗೂ ತ್ರಿಶಾ ಆತ್ಮೀಯ ಒಡನಾಟ ಗುಟ್ಟಾಗಿ ಏನು ಉಳಿದಿಲ್ಲ. ಈಗಾಗಲೇ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿಯೊಬ್ಬಳು ಕಾರಣ ಎಂದು ಹೇಳಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ವಿಜಯ್ - ತ್ರಿಶಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಇದನ್ನು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಂಗೀತಾ ಡಿವೋರ್ಸ್ ಕೇಳಿ ಅರ್ಜಿ ಸಲ್ಲಿಸುತ್ತಿದ್ದಂತೆ ಇಬ್ಬರ ರಿಲೇಶನ್‌ಶಿಪ್ ಬಗ್ಗೆ ಚರ್ಚೆ ಶುರುವಾಯಿತು. ನೇರವಾಗಿ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯಿಸಲೇ ಇಲ್ಲ.
'ಗಿಲ್ಲಿ' ಸಿನಿಮಾದಲ್ಲಿ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ನಟಿಸಿದ್ದಾರೆ. ಬಳಿಕ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿ ಹಿಟ್ ಜೋಡಿ ಎನಿಸಿಕೊಂಡಿತ್ತು. 'ಲಿಯೋ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ ಬಳಿಕ ಇಬ್ಬರ ನಡುವೆ ಒಡನಾಟ ಹೆಚ್ಚಾಗಿತ್ತು ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ವಿಜಯ್- ಸಂಗೀತಾ ಡಿವೋರ್ಸ್ ಇತ್ಯರ್ಥ ಆಗಿಲ್ಲ. ಅದಕ್ಕೂ ಮುನ್ನ ವಿಜಯ್ ಜೊತೆಗಿನ ಫೋಟೊ ತ್ರಿಶಾ ಹಂಚಿಕೊಳ್ಳುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಮದುವೆ ಸಮಾರಂಭಕ್ಕೆ ಇಬ್ಬರು ಒಟ್ಟಿಗೆ ಹೋಗಿದ್ದು, ನಟ ಅಜಿತ್ ತಾಯಿ ನಿಧನರಾದಾಗ ಅಂತಿಮ ದರ್ಶನಕ್ಕೆ ಇಬ್ಬರು ಒಟ್ಟಿಗೆ ಹೋಗಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.


Click it and Unblock the Notifications