ಇದು ರೀಲ್ ಅಲ್ಲಾ ಗುರೂ, ರಿಯಲ್.. ಥೇಟ್ ಸಿನಿಮಾ ಶೈಲಿಯಲ್ಲಿ ವಿಜಯ್ ಪ್ರಮಾಣವಚನ; ತಿದ್ದಿದ ರಾಜ್ಯಪಾಲ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಕೂಡ ಭಾಗವಹಿಸಿದ್ದಾರೆ. ನಿನ್ನೆ(ಮೇ 10) ಚೆನ್ನೈನ ಜವಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ದೇವರ ಹೆಸರಿನಲ್ಲಿ ವಿಜಯ್ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.
ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಪ್ರಮಾಣವಚನ ಬೋಧಿಸಿದರು. ಆದರೆ ವಿಜಯ್ ಪ್ರತಿಜ್ಞಾವಿಧಿಯನ್ನು ತಮ್ಮದೇ ಶೈಲಿಯಲ್ಲಿ ಸಿನಿಮಾ ಡೈಲಾಗ್ ರೀತಿ ಹೇಳಿದರು. ನೆರೆದ ಅಭಿಮಾನಿಗಳನ್ನು ಹುರಿದುಂಬಿಸುವಂತೆ ಡೈಲಾಗ್ ಹೊಡೆದರು. ಬಳಿಕ ರಾಜ್ಯಪಾಲರು ಬರೆದುಕೊಟ್ಟಿದ್ದನ್ನು ಓದಲು ಹೇಳಿದರು. ಸರಿ ಎಂದು ವಿಜಯ್ ಮತ್ತೊಮ್ಮೆ ಪ್ರತಿಜ್ಞಾವಿಧಿ ಓದಿದರು. ಇದು ಸಿನಿಮಾ ಅಲ್ಲ ಗುರು, ನೀನು ಸಿಎಂ, ಕೊಂಚ ನಿಯಮಗಳನ್ನು ಪಾಲಿಸು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ತಪ್ಪೇನು ಹೇಳಿಲ್ಲ. ಬರೆದುಕೊಟ್ಟಿದ್ದನ್ನು ನೋಡಿ ಓದುವುದು ಬಿಟ್ಟು ತಮ್ಮದೇ ಶೈಲಿಯಲ್ಲಿ ಪ್ರಮಾಣವಚನ ಬಾಯಿಪಾಠ ಮಾಡಿಕೊಂಡು ಬಂದು ಹೇಳಿದ್ದಾರೆ ಅಷ್ಟೆ. ಅದರಲ್ಲಿ ತಪ್ಪು ಹುಡುಕಬೇಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ತಮ್ಮ ಪ್ರತಿ ಮಾತಿನ ನಡುವೆ ಗ್ಯಾಪ್ ಕೊಟ್ಟು ಅಭಿಮಾನಿಗಳ ಪ್ರತಿಕ್ರಿಯೆ ನಿರೀಕ್ಷಿಸಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿಗಳು ಬರೆದುಕೊಟ್ಟಿದ್ದನ್ನು ಓದುತ್ತಾರೆ. ಆದರೆ ವಿಜಯ್ ಪ್ರಮಾಣ ವಚನ ಸ್ವೀಕಾರ ಥೇಟ್ ಸಿನಿಮಾ ಶೈಲಿಯಲ್ಲಿತ್ತು. ಅದೇ ಕ್ರೇಜ್, ಸ್ವಾಗ್ ಕಂಡು ಬಂತು. ನಾವು ಈ ರೀತಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಹಿಂದೆ ನೋಡಿರಲಿಲ್ಲ ಎಂದು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಸರಿಯಾಗಿ ಗಮನಿಸಿದ 'ಬಾಹುಬಲಿ'-2 ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಸೈನ್ಯಾಧಿಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ಸನ್ನಿವೇಶ ಇದೇ ರೀತಿ ಇತ್ತು.
ಮಾಹಿಷ್ಮತಿ ಸಾಮ್ರಾಜ್ಯದ ರಾಜನಾಗಿ ಬಲ್ಲಾಳದೇವ(ರಾಣಾ) ಪ್ರಮಾಣವಚನ ಸ್ವೀಕರಿಸುತ್ತಾನೆ. ಬಳಿಕ ಸೈನ್ಯಾಧಿಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸನ್ನಿವೇಶದಲ್ಲಿ ಪ್ರತಿಜ್ಞಾವಿಧಿ ಬರೆದ ಪತ್ರವನ್ನು ಬಾಹುಬಲಿ ಬಳಿ ತಂದಾಗ ಬೇಡ ಎಂದು ದೂರು ತಳ್ಳುತ್ತಾನೆ. ತಾನೇ ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾನೆ. ಪ್ರಮಾಣವಚನ ಸ್ವೀಕರಿಸುತ್ತಾನೆ. ಇದೇ ರೀತಿ ವಿಜಯ್ ಕೂಡ ನಡೆದುಕೊಂಡರೂ ಎಂದು ಎರಡೂ ವೀಡಿಯೋಗಳನ್ನು ಎಡಿಟ್ ಮಾಡಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಬಾಹುಬಲಿ ಪ್ರಮಾಣವಚನ ಸ್ವೀಕರಿಸುವಾಗ ಜನರ ಹರ್ಷೋದ್ಘಾರದ ರೀತಿಯಲ್ಲೇ ವಿಜಯ್‌ಗೆ ಕೂಡ ಬೆಂಬಲ ವ್ಯಕ್ತವಾಗಿತ್ತು.
"ಸಿ. ಜೋಸೆಫ್ ವಿಜಯ್ ಆದ ನಾನು, ಕಾನೂನುಬದ್ಧವಾಗಿ ಸ್ಥಾಪಿಸಲಾದ ಭಾರತದ ಸಂವಿಧಾನಕ್ಕೆ ನಿಷ್ಠನಾಗಿರುತ್ತೇನೆ. ಏಕೀಕೃತ ಸರ್ಕಾರವನ್ನು ತರುವುದಾಗಿ ಭರವಸೆ ನೀಡುತ್ತೇನೆ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿ, ನನ್ನ ಜವಾಬ್ದಾರಿಗಳನ್ನು ಪೂರೈಸಲು ಪ್ರಾಮಾಣಿಕವಾಗಿ ಮತ್ತು ಸಮರ್ಪಿತ ಭಾವದಿಂದ ಕೆಲಸ ಮಾಡುತ್ತೇನೆ. ಕಾನೂನಿನ ನಿಯಮವನ್ನು ಪಾಲಿಸುತ್ತೇನೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ, ದ್ವೇಷ ಇಲ್ಲದೇ, ಎಲ್ಲಾ ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ದೇವರ ಮೇಲೆ ಪ್ರಮಾಣ ಮಾಡುವುದಾಗಿ ಈ ಪ್ರಮಾಣ ವಚನ ಸ್ವೀಕರಿಸುತ್ತೇನೆ" ಎಂದು ವಿಜಯ್ ಪ್ರತಿಜ್ಞಾವಿಧಿ ಓದಿದರು.
ವಿಜಯ್ ತಮ್ಮ ಶಕ್ತಿ ಮತ್ತು ಸಾಮರ್ಥ್ಯ ಸೂಚಿಸಲು ಕೈ ಮೇಲೆತ್ತಿ ಸನ್ನೆ ಮಾಡಿದರು. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಪ್ರತಿಜ್ಞಾವಿಧಿಯನ್ನು ಓದುವಂತೆ ಹೇಳಿದರು. ಸರಿ ಎಂದು ವಿಜಯ್ ಮತ್ತೊಮ್ಮೆ "ಸಿ. ಜೋಸೆಫ್ ವಿಜಯ್ ಆದ ನಾನು," ಎಂದು ಪ್ರಮಾಣವಚನ ಓದಿದರು. ಸಾವಿರಾರು ಸಂಖ್ಯೆಯಲ್ಲಿ ಟಿವಿಕೆ ಕಾರ್ಯಕರ್ತರು, ವಿಜಯ್ ಅಭಿಮಾನಿಗಳು ಸಮಾರಂಭದಲ್ಲಿ ಭಾಗಿ ಆಗಿದ್ದರು. ವಿಜಯ್ ಪಕ್ಕದಲ್ಲೇ ಕೂತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಸಿದರು. ನಟಿಯರಾದ ತ್ರಿಷಾ ಹಾಗೂ ಸಂಗೀತಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವಿಜಯ್ ಪ್ರಮಾಣವಚನ ಸ್ವೀಕರಿಸುವುದು ನೋಡಿ ಪೋಷಕರು ಭಾವುಕರಾದರು.


Click it and Unblock the Notifications