ಲೀಕ್ ಆಗಿರುವ 'ಜನ ನಾಯಗನ್' ಸಿನಿಮಾ ರಿವ್ಯೂ ಮಾಡಿದ 'ಜಾಣ' ಸಿನಿಮಾ ನಟಿ
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿರುವುದು ಗೊತ್ತೇಯಿದೆ. ಸಾಕಷ್ಟು ಜನ ಈಗಾಗಲೇ ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ರಿವ್ಯೂ ಕೂ ಬರೆಯುತ್ತಿದ್ದಾರೆ. ಇನ್ನು ಚಿತ್ರದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ಕಸ್ತೂರಿ ಕೂಡ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ತಮಿಳು ನಟಿ ಕಸ್ತೂರಿ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ 'ಜಾಣ', 'ಹಬ್ಬ', 'ತುತ್ತಾ ಮುತ್ತಾ' ಸೇರಿ ಕೆಲ ಸಿನಿಮಾಗಳಲ್ಲಿ ಮಿಂಚಿದ್ದರು. ರಾಜಕೀಯರಂಗದಲ್ಲಿ ಕೂಡ ಸಕ್ರಿಯರಾಗಿರುವ ಕಸ್ತೂರಿ ಕೆಲವೊಮ್ಮೆ ವಿವಾದಗಳಲ್ಲಿ ಸಿಲುಕಿಕೊಂಡಿರುವುದು ಉದಾಹರಣೆಗಳಿವೆ. ತಮ್ಮ ನೇರಾನೇರ ಮಾತುಗಳಿಂದ ಕಸ್ತೂರಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಲೀಕ್ ಆಗಿರುವ 'ಜನ ನಾಯಗನ್' ಚಿತ್ರದ ಕೆಲ ದೃಶ್ಯಗಳನ್ನು ನಾನು ನೋಡಿದ್ದೀನಿ. ಇದು 3 ಗಂಟೆಗಳ ಪ್ರೊಪಾಗಂಡ ಸಿನಿಮಾ ಎಂದು ಆಕೆ ಹೇಳಿದ್ದಾರೆ.

ತಾವು ನೋಡಿರುವ ಕೆಲ ದೃಶ್ಯಗಳನ್ನು ಆಧರಿಸಿ 'ಜನ ನಾಯಗನ್' ಚಿತ್ರದ ರಿವ್ಯೂ ಮಾಡಿದ್ದಾರೆ ನಟಿ ಕಸ್ತೂರಿ. ಈ ಸಿನಿಮಾ ನೋಡಿದ್ರೆ ವಿಜಯ್ ಸ್ಥಾಪಿಸಿರುವ ಟಿವಿಕೆ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಕಸ್ತೂರಿ ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿಲ್ಲ. ಬಳಿಕ ತಮಿಳುನಾಡಿದ ಬೇರೆ ಪಕ್ಷಗಳನ್ನು ಚಿತ್ರದಲ್ಲಿ ಟಾರ್ಗೆಟ್ ಮಾಡಿದ್ದಾರೆ ಎಂದು IANS ಮಾಧ್ಯಮಕ್ಕೆ ನಟಿ ಕಸ್ತೂರಿ ಪ್ರತಿಕ್ರಿಯಿಸಿದ್ದಾರೆ.
"ವಾಟ್ಸಪ್‌ನಲ್ಲಿ ಕೆಲವರು ಚಿತ್ರದ ತುಣುಕುಗಳನ್ನು ಕಳಿಸಿದ್ದರು. ನಾನು ನೋಡಿದ್ದೇನೆ. ಸಿನಿಮಾ ಬಗ್ಗೆ ನನಗೆ ಸಾಕಷ್ಟು ಮಾಹಿತಿಯಿದೆ. ಟಿವಿಕೆ ಪಕ್ಷ ಹಾಗೂ ಸಿದ್ದಾಂತಕ್ಕೆ 'ಜನನಾಯಗನ್' 3 ಗಂಟೆಗಳ ಪ್ರೊಪಾಗಂಡ ಸಿನಿಮಾ. ಪರ್ಫೆಕ್ಟ್ ಕ್ವಾಲಿಟಿ ಕಾಪಿಯನ್ನು ಲೀಕ್ ಮಾಡಿದ್ದಾರೆ. ಯಾವುದೇ ಸೆನ್ಸಾರ್ ಕಟ್, ಮ್ಯೂಟ್ ಇಲ್ಲದೇ ಲೀಕ್ ಮಾಡಿದ್ದಾರೆ. ಟಿವಿಕೆ ವಿಚಾರಗಳು ಸಂಪೂರ್ಣವಾಗಿ ಜನರಿಗೆ ತಲುಪಬೇಕು ಎಂದು ಈ ರೀತಿ ಮಾಡಿದ್ದಾರೆ. ವಿಜಯ್ ಆರೋಪ ಮಾಡುತ್ತಿರುವ ಬಿಜೆಪಿ ಹಾಗೂ ಡಿಎಂಕೆ ಪಕ್ಷಗಳಿಗೆ ಇದರಿಂದ ಲಾಭವಿಲ್ಲ. ಹಾಗಾಗಿ ಟಿವಿಕೆ ಪಕ್ಷಕ್ಕೆ ಲಾಭ ಹೆಚ್ಚು" ಎಂದು ಕಸ್ತೂರಿ ಹೇಳಿದ್ದಾರೆ.
ಒಂದು ವೇಳೆ 'ಜನ ನಾಯಗನ್' ಬಿಡುಗಡೆ ಆಗಬಾರದು ಎಂದು ತಮಿಳುನಾಡು ರಾಜ್ಯ ಸರ್ಕಾರ ಪ್ರಯತ್ನಿಸಿದೆ ಎಂದು ಕಸ್ತೂರಿ ಆರೋಪ ಮಾಡಿದ್ದಾರೆ. "ರಾಜ್ಯ ಸರ್ಕಾರದ ಸುತ್ತಾ 'ಜನನಾಯಗನ್' ಸಿನಿಮಾ ಕತೆ ಸುತ್ತುತ್ತೆ. ಸರ್ಕಾರ ಪ್ರೊಪಾಗಂಡ ಸಿನಿಮಾ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲೇ ವಿಜಯ್ ಸಿನಿಮಾ ಲೀಕ್ ಆಗಿದೆ" ಎಂದಿದ್ದಾರೆ. ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ 'ಜನನಾಯಗನ್' ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಅಷ್ಟರಲ್ಲೇ ಲೀಕ್ ಆಗಿದೆ.
ತಮ್ಮ ರಾಜಕೀಯ ಜೀವನಕ್ಕೆ 'ಜನನಾಯಗನ್' ಚಿತ್ರವನ್ನು ವೇದಿಕೆ ಮಾಡಿಕೊಳ್ಳಲು ಬಯಸಿದ್ದರು. ಎದುರಾಳಿ ಪಕ್ಷಗಳನ್ನು ಟೀಕಿಸಿ, ತಮ್ಮ ಟಿವಿಕೆ ಪಕ್ಷವನ್ನು ಗೆಲ್ಲಿಸಿ ಎನ್ನುವ ಸಂದೇಶವನ್ನು ವಿಜಯ್ ಈ ಸಿನಿಮಾ ಮೂಲಕ ಮಾಡಿದ್ದರು. ಅದೇ ಕಾರಣಕ್ಕೆ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗುವುದು ಕಷ್ಟವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಚುನಾವಣೆಗೆ ಮುನ್ನ ಬರಬೇಕಿದ್ದ ಸಿನಿಮಾ ಚುನಾವಣೆ ಮುಗಿದ ಬಳಿಕ ಬಂದರೂ ಪ್ರಯೋಜನವಿಲ್ಲ ಎಂದು ಟಿವಿಕೆ ಪಕ್ಷದವರೇ ಲೀಕ್ ಮಾಡಿರಬಹುದು ಎನ್ನುವ ಆರೋಪ ಕೇಳಿಬರ್ತಿದೆ.
'ಜನನಾಯಗನ್' ಸಿನಿಮಾ ಲೀಕ್ ಪ್ರಕರಣದಲ್ಲಿ 6 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ.


Click it and Unblock the Notifications











