'ಜನನಾಯಗನ್' ರೀತಿ ಬಿಡುಗಡೆಗೂ ಮುನ್ನ ಲೀಕ್ ಆಗಿದ್ದ ಚಿತ್ರಗಳಿವು; ಬಳಿಕ ಫಲಿತಾಂಶ ಏನಾಗಿತ್ತು?
ದಳಪತಿ ವಿಜಯ್ ನಟನೆಯ 'ಜನನಾಯಗನ್' ಆನ್ಲೈನ್‌ನಲ್ಲಿ ಲೀಕ್ ಆಗಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಯಾರು, ಯಾಕೆ ಚಿತ್ರತಂಡಕ್ಕೆ ಪೆಟ್ಟು ಕೊಟ್ರು ಎನ್ನುವುದು ಗೊತ್ತಿಲ್ಲ. ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಿದೆ. ಅಂದಹಾಗೆ ಸಿನಿಮಾ ಬಿಡುಗಡೆಗೂ ಮುನ್ನ ಹೀಗೆ ಲೀಕ್ ಆಗುತ್ತಿರುವುದು ಹೊಸದೇನು ಅಲ್ಲ. ಈ ಹಿಂದೆ ಕೂಡ ಕೆಲ ಸಿನಿಮಾಗಳು ಇದೇ ರೀತಿ ಹಿನ್ನಡೆ ಅನುಭವಿಸಿದ್ದವು.
ಆನ್ಲೈನ್‌ನಲ್ಲಿ ಸಿನಿಮಾ ಟೀಸರ್, ಟ್ರೈಲರ್, ಸಾಂಗ್ ಆಗಾಗ್ಗೆ ಲೀಕ್ ಆಗುತ್ತದೆ. ಎಡಿಟ್ ಟೇಬಲ್‌ನಿಂದ ಕೆಲವರು ಈ ದುಷ್ಕೃತ್ಯಕ್ಕೆ ಕೈ ಹಾಕುತ್ತಾರೆ. ಆದರೆ ಬಿಡುಗಡೆಗೂ ಮುನ್ನ ಸಂಪೂರ್ಣ ಚಿತ್ರವನ್ನು ಲೀಕ್ ಮಾಡಿರುವ ಉದಾಹರಣೆಗಳು ಇದೆ. ಆ ಬಳಿಕ ಕೂಡ ಸಿನಿಮಾಗಳು ದೊಡ್ಡ ಪರದೆಯಲ್ಲಿ ಸದ್ದು ಮಾಡಿವೆ. ಕೆಲವು ಹೀನಾಯವಾಗಿ ಸೋತಿವೆ.

1. ಸಿಕಂದರ್
ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಕಳೆದ ವರ್ಷ ತೆರೆಕಂಡು ಹೀನಾಯವಾಗಿ ಸೋತಿತ್ತು. ತಮಿಳು ನಿರ್ದೇಶಕ ಮುರುಗದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದರು. ಆದರೆ ಸಿನಿಮಾ ಅಷ್ಟೇನು ಕ್ರೇಜ್ ಹುಟ್ಟಿಸಿರಲಿಲ್ಲ. ಬಿಡುಗಡೆಗೂ ಒಂದು ದಿನ ಮುನ್ನ ಸಿನಿಮಾ ಲೀಕ್ ಆಗಿಬಿಟ್ಟಿತ್ತು. ಇದರಿಂದ ಚಿತ್ರತಂಡಕ್ಕೆ ಭಾರೀ ನಷ್ಟವಾಗಿತ್ತು. ಲೀಕ್ ಆಗದೇ ಇದ್ದರೂ 'ಸಿಕಂದರ್' ಸಿನಿಮಾ ಗೆಲ್ಲುತ್ತಿರಲಿಲ್ಲ ಎನ್ನುವವರು ಇದ್ದಾರೆ.
2. ಉಡ್ತಾ ಪಂಜಾಬ್
ಅಭಿಷೇಕ್ ಚಬ್ಬಿ ನಿರ್ದೇಶನದ 'ಉಡ್ತಾ ಪಂಜಾಬ್' ಸಿನಿಮಾ 8 ವರ್ಷಗಳ ಹಿಂದೆ ಸಖತ್ ಸದ್ದು ಮಾಡಿತ್ತು. ಶಾಹಿದ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಕೂಡ ಬಿಡುಗಡೆಗೂ ಮುನ್ನ ಆನ್ಲೈನ್‌ನಲ್ಲಿ ಸೋರಿಕೆಯಾಗಿತ್ತು. ಇದು ಸಹಜವಾಗಿಯೇ ಚಿತ್ರದ ಮೇಲೆ ಪರಿಣಾಮ ಬೀರಿತ್ತು. ಆದರೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 30 ಕೋಟಿ ರೂ. ಬಜೆಟ್ ಸಿನಿಮಾ 90 ಕೋಟಿ ರೂ. ಗಳಿಕೆ ಕಂಡಿತ್ತು.

3. ಗ್ರೇಟ್ ಗ್ರ್ಯಾಂಡ್ ಮಸ್ತಿ
ವಿವೇಕ್ ಒಬೆರಾಯ್, ರಿತೇಶ್ ದೇಶ್‌ಮುಖ್, ಊರ್ವಶಿ ರೌಟೇಲ ನಟನೆಯ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾ 10 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಈ ಹಾರರ್ ಕಾಮಿಡಿ ಚಿತ್ರವನ್ನು ಇಂದ್ರಕುಮಾರ್ ನಿರ್ದೇಶಿಸಿದ್ದರು. ಈ ಸಿನಿಮಾ ಕೂಡ ಬಿಡುಗಡೆಗೂ ಕೆಲ ದಿನಗಳ ಮುನ್ನ ಲೀಕ್ ಆಗಿ ವಿವಾದ ಸೃಷ್ಟಿಸಿತ್ತು.
4. ಅತ್ತಾರಿಂಟಿಕಿ ದಾರೇದಿ
13 ವರ್ಷಗಳ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಪವನ್ ಕಲ್ಯಾಣ್ ನಟನೆಯ 'ಅತ್ತಾರಿಂಟಿಕಿ ದಾರೇದಿ' ಸಿನಿಮಾ ಬಿಡುಗಡೆ ಆಗಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಪವರ್ ಸ್ಟಾರ್ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಿಡುಗಡೆಗೂ ಮುನ್ನ ಒಂದು ಗಂಟೆ ಫುಟೇಜ್ ಸೋರಿಕೆ ಆಗಿತ್ತು. ಆದರೂ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಗೆಲ್ಲಿಸಿದ್ದರು.
ಸಿನಿಮಾ ಬಿಡುಗಡೆ ಬಳಿಕ ಪೈರಸಿ ಆಗುವುದನ್ನು ಗೊತ್ತು. ಆದರೆ ಕೆಲ ಕಿಡಿಗೇಡಿಗಳು ಹೀಗೆ ಸಿನಿಮಾ ಬಿಡುಗಡೆಗೂ ಮುನ್ನ ಲೀಕ್ ಮಾಡಿ ಶಾಕ್ ಕೊಡುತ್ತಾರೆ. ಐದಾರು ವರ್ಷಗಳ ಹಿಂದೆ ಇಂಟರ್‌ನೆಟ್ ಇಷ್ಟು ಸ್ಪೀಡ್ ಇರಲಿಲ್ಲ. ಸೋಶಿಯಲ್ ಮೀಡಿಯಾ ಕೂಡ ಇದು ಪರಿಣಾಮಕಾರಿ ಆಗಿ ಇರಲಿಲ್ಲ. 10 ವರ್ಷಗಳ ಹಿಂದೆ ಸಿನಿಮಾ ಹೀಗೆ ಲೀಕ್ ಆದರೂ ಡೌನ್‌ಲೋಡ್ ಮಾಡುವುದು ಕಷ್ಟ ಇತ್ತು. ಆದರೆ ಈಗ 5ಜಿ ಜಮಾನ. ಕೆಲವೇ ಕ್ಷಣಗಳಲ್ಲಿ ಸಿನಿಮಾ ಡೌನ್‌ಲೋಡ್ ಆಗ್ತಿದೆ. ಟೆಲಿಗ್ರಾಂ ರೀತಿಯ ಸೈಟ್‌ಗಳಲ್ಲಿ ಸಿನಿಮಾ ಲಿಂಕ್‌ಗಳು ಬಹಳ ಸುಲಭವಾಗಿ ಸಿಗುತ್ತಿದೆ. ಇದೇ ಕಾರಣಕ್ಕೆ 'ಜನ ನಾಯಗನ್' ಚಿತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ.


Click it and Unblock the Notifications











