Janayanagan Leak; ವಿಜಯ್ 'ಜನನಾಯಗನ್' ಲೀಕ್ ವಿವಾದ; ಚಿರು, ರಜನಿಕಾಂತ್, ಖುಷ್ಬು ಗರಂ
ತಮಿಳುನಾಡು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಟ, ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್‌ಗೆ ಭಾರೀ ಪೆಟ್ಟು ಬಿದ್ದಿದೆ. ಬಹುನಿರೀಕ್ಷಿತ 'ಜನನಾಯಗನ್' ಸಿನಿಮಾ ಬಿಡುಗಡೆಗೂ ಮುನ್ನ ಆನ್ಲೈನ್‌ನಲ್ಲಿ ಲೀಕ್ ಆಗಿದೆ. ಸಂಪೂರ್ಣ ಸಿನಿಮಾ ಪೈರಸಿ ಸೈಟ್‌ಗಳಲ್ಲಿ ಹರಿದಾಡ್ತಿದೆ. ಈ ಬಗ್ಗೆ ಚಿತ್ರತಂಡ ಕ್ರಮಕ್ಕೆ ಮುಂದಾಗಿದೆ. ಆದರೂ ಸಾಕಷ್ಟು ನಷ್ಟ ಎದುರಾಗಿದೆ.
ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ 'ಜನನಾಯಗನ್' ಸಿನಿಮಾ ನಿರ್ಮಾಣವಾಗಿದೆ. ಸುಗ್ಗಿ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾದ ಬಳಿಕ ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಆಗಲಿಲ್ಲ. ಆ ಬಳಿಕ ಚಿತ್ರತಂಡ ಎಷ್ಟು ಪ್ರಯತ್ನಿಸಿದರೂ 'ಜನನಾಯಗನ್' ತೆರೆಗೆ ಬರಲೇ ಇಲ್ಲ. ತಮಿಳುನಾಡು ಚುನಾವಣೆ ಬಳಿಕ ಚಿತ್ರ ಬಿಡುಗಡೆ ಪ್ರಯತ್ನ ನಡೆದಿತ್ತು. ಅಷ್ಟರಲ್ಲೇ ಪೈರಸಿಯಾಗಿದೆ.

ಚಿರಂಜೀವಿ, ರಜನಿಕಾಂತ್, ಶಿವಕಾರ್ತಿಕೇಯನ್ ಹಾಗೂ ಖುಷ್ಬು ಸೇರಿ ಖ್ಯಾತ ತಾರೆಯರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಂದು ಸಿನಿಮಾ ಬಿಡುಗಡೆಗೂ ಮುನ್ನ ಲೀಕ್ ಆಗುವುದು ತಮಾಷೆ ಮಾತಲ್ಲ. ಕೋಟ್ಯಂತರ ರೂಪಾಯಿ ವ್ಯವಹಾರ ಇದು. ಚಿತ್ರರಂಗಕ್ಕೆ ಇದು ದೊಡ್ಡ ಹೊಡೆತ ಅಷ್ಟೇ ಅಲ್ಲ. ಇಂತಹ ಪ್ರಕರಣಗಳು ಸಿನಿಮಾ ಮೇಕಿಂಗ್ ಬಗ್ಗೆ ಗೊಂದಲ ನಿರ್ಮಾಣ ಮಾಡುತ್ತವೆ. ಚಿತ್ರತಂಡ ಎಷ್ಟೇ ಎಚ್ಚರಿಕೆ ವಹಿಸಿದ್ರು ಹೀಗೆ ಕೆಲವೊಮ್ಮೆ ಎಡವಟ್ಟು ಆಗಿಬಿಡುತ್ತದೆ.
ನಟ ರಜನಿಕಾಂತ್ ಟ್ವೀಟ್ ಮಾಡಿ "ಜನನಾಯಕನ್ ಚಿತ್ರವನ್ನು ಯಾರೋ ಅಂತರ್ಜಾಲದಲ್ಲಿ ಲೀಕ್ ಮಾಡಿರುವುದು ಆಘಾತ ಮತ್ತು ನೋವುಂಟು ಮಾಡಿದೆ. ಚಲನಚಿತ್ರ ಸಂಘಗಳು ಇದರ ವಿರುದ್ಧ ಧ್ವನಿ ಎತ್ತಬೇಕು. ಸರ್ಕಾರವು ಇದಕ್ಕೆ ಕಾರಣರಾದವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಅಪರಾಧಗಳು ಭವಿಷ್ಯದಲ್ಲಿ ಮುಂದುವರಿಯಲು ಬಿಡಬಾರದು" ಎಂದು ಬರೆದುಕೊಂಡಿದ್ದಾರೆ.
ತೆಲುಗು ನಟ ಚಿರಂಜೀವಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಜನನಾಯಗನ್ ಸಿನಿಮಾ ಲೀಕ್ ಆಗಿರುವುವು ದುರದೃಷ್ಟಕರ. ನನಗೆ ತುಂಬಾ ಕಳವಳ ಉಂಟು ಮಾಡಿದೆ. ಸಿನಿಮಾವು ನಂಬಿಕೆ, ಪ್ರಯತ್ನ ಮತ್ತು ಹಲವರ ಸಾಮೂಹಿಕ ಕನಸುಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಇಂತಹ ಘಟನೆಗಳು ಉದ್ಯಮದಲ್ಲಿರುವ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ನಮ್ಮ ಸೃಜನಶೀಲ ಕೆಲಸವನ್ನು ರಕ್ಷಿಸುವುದು ಎಷ್ಟು ಮುಖ್ಯ ಎಂಬುದನ್ನು ನಮಗೆ ನೆನಪಿಸುತ್ತವೆ. ಹಾನಿಯನ್ನು ತಡೆಗಟ್ಟುವಲ್ಲಿ ಮತ್ತು ಅಪರಾಧಿಗಳನ್ನು ಶಿಕ್ಷಿಸುವಲ್ಲಿ ನಾವು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಒಂದಾಗಿದ್ದೇವೆ. ಸಿನಿಮಾವನ್ನು ಗೌರವಿಸಲು ಮತ್ತು ರಕ್ಷಿಸಲು ನಾವೆಲ್ಲರೂ ನಮ್ಮ ಬೆಂಬಲ ನೀಡೋಣ.. ಪೈರಸಿ ತಡೆಗಟ್ಟಿ.. ಸಿನಿಮಾ ಉಳಿಸಿ" ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಕೆವಿಎನ್ ಸಂಸ್ಥೆ ಮುಂದಿನ ಚಿತ್ರದಲ್ಲಿ ಚಿರು ನಟಿಸುತ್ತಿದ್ದಾರೆ.
ತಮಿಳು ನಟಿ, ಬಿಜೆಪಿ ನಾಯಕಿ ಖುಷ್ಬು ಟ್ವೀಟ್ ಮಾಡಿ "ಪೈರಸಿ ಮನರಂಜನೆಯಲ್ಲ. ಇದು ಸಂಘಟಿತ ಕಳ್ಳತನ. ಇದರಲ್ಲಿ ಭಾಗಿಯಾಗಿರುವವರು ಯಾವುದೇ ಅಪರಾಧಿಗಳಿಗಿಂತ ಕಡಿಮೆಯಿಲ್ಲ. ಇದನ್ನು ಇತರೆ ಅಪರಾಧದಂತೆ ಪರಿಗಣಿಸಬೇಕು. 'ಜನನಾಯಗನ್' ಲೀಕ್ ಎನ್ನುವುದು ರಕ್ತ, ಬೆವರು ಸುರಿಸಿದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಮತ್ತು ಕೆಲಸಗಾರರಿಗೆ ಮಾಡಿದ ದ್ರೋಹವಾಗಿದೆ. ಇದನ್ನು ಒಪ್ಪುವುದಿಲ್ಲ. ಇದರಲ್ಲಿ ಯಾವುದೇ ಸಮರ್ಥನೆ ಇಲ್ಲ. ನೀವು ನಿಜವಾಗಿಯೂ ಸಿನಿಮಾವನ್ನು ಗೌರವಿಸಿದರೆ, ನೀವು ಪೈರಸಿಯನ್ನು ನಿರಾಕರಿಸುತ್ತೀರಿ. ಚಿತ್ರತಂಡದ ಜೊತೆ ನಿಲ್ಲಿ ಮನರಂಜನಾ ಉದ್ಯಮದ ಜೊತೆ ನಿಲ್ಲಿ" ಎಂದು ಮನವಿ ಮಾಡಿದ್ದಾರೆ.
'ಜನನಾಯಗನ್' ಸಿನಿಮಾ ಲೀಕ್ ವಿಚಾರದ ಬಗ್ಗೆ ಮೊದಲು ಮಾತನಾಡಿದ್ದು ತಮಿಳು ನಟ ಶಿವ ಕಾರ್ತಿಕೇಯನ್. "ಪ್ರತಿಯೊಂದು ಸಿನಿಮಾವನ್ನು ನೂರಾರು ಜನರ ರಕ್ತ ಮತ್ತು ಬೆವರು ಬಳಸಿ ನಿರ್ಮಿಸಲಾಗಿದೆ. ದಯವಿಟ್ಟು ಪೈರಸಿಯನ್ನು ತಪ್ಪಿಸಿ. ದಯವಿಟ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೆ ಕಾಯಿರಿ ಮತ್ತು ಅದನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ. 'ಜನನಾಯಗನ್' ಚಿತ್ರದ ಲೀಕ್ ಆಗಲು ಕಾರಣರಾದವರ ವಿರುದ್ಧ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಪ್ರತಿಭೆಗಳನ್ನು ಗೌರವಿಸಿ. ಕಠಿಣ ಪರಿಶ್ರಮವನ್ನು ಗೌರವಿಸಿ ಚಿತ್ರೋದ್ಯಮವನ್ನು ಗೌರವಿಸಿ" ಎಂದು ಟ್ವೀಟ್ ಮಾಡಿದ್ದರು.
"ದಯನೀಯ ಮತ್ತು ಅನ್ಯಾಯ.. ಇಡೀ ತಂಡದ ಉತ್ಸಾಹ ಇದರಿಂದ ಕಮರಿ ಹೋಗಿದೆ. ನಾನು ನಿಮ್ಮೆಲ್ಲರನ್ನೂ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ, ದಯವಿಟ್ಟು ಲೀಕ್ ಆಗಿರುವ 'ಜನ ನಾಯಗನ್' ಚಿತ್ರವನ್ನು ನೋಡಬೇಡಿ, ಶೇರ್ ಮಾಡಬೇಡಿ ಅಥವಾ ಚರ್ಚಿಸಬೇಡಿ. ಅವರ ಕೆಲಸವನ್ನು ಗೌರವಿಸಿ. ನಾನು ನನ್ನ ಸ್ನೇಹಿತರೊಂದಿಗೆ ನಿಂತು ಈ ಕೃತ್ಯವನ್ನು ಖಂಡಿಸುತ್ತೇನೆ, ಇದನ್ನು ಕ್ಷಮಿಸಲಾಗದು" ಎಂದು ನಟ ಸೂರ್ಯ ಟ್ವೀಟ್ ಮಾಡಿದ್ದಾರೆ.


Click it and Unblock the Notifications











