ವಿಜಯ್ ಮಧುರೈ ಸಮಾವೇಶ; ಕಾರಿನ ಮೇಲೆ ಮುರಿದು ಬಿತ್ತು 100 ಅಡಿ ಧ್ವಜಸ್ತಂಭ
ತಮಿಳು ನಟ ವಿಜಯ್ ರಾಜಕೀಯರಂಗ ಪ್ರವೇಶಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ವಿಧಾನ ಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.ಪಕ್ಷ ಸಂಘಟನೆಗಾಗಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ನಾಳೆ(ಆಗಸ್ಟ್ 21) ಮಧುರೈನಲ್ಲಿ ಭಾರೀ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ವೇದಿಕೆ ಮುಂಭಾಗದಲ್ಲಿ 100 ಅಡಿ ಧ್ವಜಸ್ತಂಭ ಮುರಿದು ಬಿದ್ದು ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಧುರೈ-ತೂತುಕುಡಿ ನ್ಯಾಷನಲ್ ಹೈವೇ ಎಲಿಯಾರ್‌ಪತ್ತಿ ಟೋಲ್ ಬಳಿ ಸಮಾವೇಶ ನಡೆಯಲಿದೆ. 506 ಎಕರೆ ಜಾಗದಲ್ಲಿ ಬಹಳ ಅದ್ಧೂರಿಯಾಗಿ ಸಮಾವೇಶ ಆಯೋಜಿಸಲಾಗಿದೆ. ಕಳೆದೊಂದು ತಿಂಗಳಿಂದ ಅದಕ್ಕಾಗಿ ತಯಾರಿ ನಡೀತಿದೆ. ವೇದಿಕೆ ಮುಂಭಾಗದಲ್ಲಿ ವಿಜಯ್ ಪಕ್ಷದ ಧ್ವಜಾರೋಹಣ ಮಾಡಬೇಕಿತ್ತು. ಅದಕ್ಕಾಗಿ 100 ಅಡಿ ಎತ್ತರದ ಧ್ವಜಸ್ತಂಭವನ್ನು ನಿಲ್ಲಿಸುವ ಕೆಲಸ ನಡೀತಿತ್ತು.

ಕ್ರೇನ್ ಸಹಾಯದಿಂದ ಭಾರೀ ಗಾತ್ರದ ಧ್ವಜಸ್ತಂಭ ಎತ್ತಿ ನಿಲ್ಲಿಸುವ ವೇಳೆ ಅದಕ್ಕೆ ಕಟ್ಟಿದ್ದ ಬೆಲ್ಟ್ ತುಂಡಾಗಿ ಸ್ತಂಭ ಮುರಿದು ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದೆ. ಬರೋಬ್ಬರಿ 10 ಟನ್ ತೂಕದ ಕಂಬ ಅದು ಎನ್ನಲಾಗ್ತಿದೆ. ಕೂದಲೆಳೆ ಅಂತರದಲ್ಲಿ ಅಲ್ಲಿದ್ದವರು ಬಚಾವಾಗಿದ್ದಾರೆ. ಕೂಡಲೇ ಕಾರ್ಮಿಕರು ಅಲ್ಲಿದ್ದವರನ್ನು ದೂರ ಕಳುಹಿಸಿ ಧ್ವಜಸ್ತಂಭವನ್ನು ಸ್ಥಳಾಂತರಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗ್ತಿದೆ.
ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ವಿಜಯ್. ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿ ಗೆದ್ದಿದ್ದಾರೆ. ಚಿತ್ರರಂಗದಿಂದ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸುತ್ತಿದ್ದಾರೆ. ಅದಕ್ಕಾಗಿ ಸ್ವಂತ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. ತಮಿಳುನಾಡಿನಲ್ಲಿ ಮಾಸ್ ಪೊಲಿಟಿಕಲ್ ಲೀಡರ್ ಅಭಾವ ಇದೆ. ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ನಡುವೆ ಗೆದ್ದು ಬೀಗುವ ಲೆಕ್ಕಾಚಾರದಲ್ಲಿದ್ದಾರೆ.
ಲಕ್ಷಾಂತರ ಜನ ಮಧುರೈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಒಂದೂವರೆ ಲಕ್ಷ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಮಧುರೈನಲ್ಲಿ ಟಿವಿಕೆ ಭರಾಟೆ ಜೋರಾಗಿದೆ. ಎಲ್ಲೆಲ್ಲೂ ಪಕ್ಷದ ಬ್ಯಾನರ್, ಕಟೌಟ್, ಧ್ವಜಗಳು ರಾರಾಜಿಸುತ್ತಿದೆ. ಕಳೆದ ವರ್ಷ ಅಕ್ಟೋಬರ್ 27ರಂದು ಪಕ್ಷ ಮೊದಲ ಸಮಾವೇಶ ನಡೆದಿತ್ತು. ವಿಕ್ರವಂಡಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ವಿಜಯ್ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಬರುತ್ತಿದ್ದ ಅಭಿಮಾನಿಗಳ ಕಾರ್ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದರು. ಇನ್ನು ಸಮಾವೇಶಕ್ಕೆ ಆಗಮಿಸಿದ್ದ ಜನರಲ್ಲಿ 120 ಮಂದಿಗೆ ಡಿಹೈಡ್ರಾಷನ್ ಹಾಗೂ ಉಸಿರಾಟದ ತೊಂದರೆ ಉಂಟಾಗಿ ಕುಸಿದು ಬಿದ್ದಿದ್ದ ಘಟನೆ ನಡೆದಿತ್ತು.
ರಜನಿಕಾಂತ್ ಬಿಟ್ಟರೆ ತಮಿಳು ಚಿತ್ರರಂಗದ ನಂಬರ್ ವನ್ ನಟ ವಿಜಯ್. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ದಳಪತಿ ರಾಜಕೀಯರಂಗಕ್ಕೆ ಬರ್ತಿದ್ದಾರೆ. ತನಗೆ ಇಷ್ಟೆಲ್ಲಾ ಹೆಸರು, ಹಣ ಕೊಟ್ಟ ಜನರಿಗೆ ನಾನು ಸೇವೆ ಮಾಡಬೇಕು. ಅದಕ್ಕಾಗಿ ಈ ನಿರ್ಧಾರ ಎಂದು ಹೇಳಿದ್ದಾರೆ. ವಿಜಯ್ ಪೊಲಿಟಿಕಲ್ ಎಂಟ್ರಿ ಇತರೆ ಪಕ್ಷದ ನಾಯಕರಿಗೆ ಆತಂಕ ತಂದಿರುವುದು ಸುಳ್ಳಲ್ಲ.
ಮುಂದೆ ವಿಜಯ್ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನಲಾಗ್ತಿದೆ. ಸದ್ಯ 'ಜನ ನಾಯಗನ್' ಚಿತ್ರದಲ್ಲಿ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೋ ಬೇಡವೋ ಎಂದು ವಿಜಯ್ ನಿರ್ಧರಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











