ವಿಜಯ್ ತಮಿಳುನಾಡು ಸಿಎಂ ಆಗ್ತಿದ್ದಂತೆ 'ಜನ ನಾಯಗನ್' ಲೆಕ್ಕಾಚಾರವೇ ಬದಲಾಗಿ ಹೋಯ್ತು
ತಮಿಳು ನಟ ವಿಜಯ್ ತಮಿಳುನಾಡು ರಾಜಕೀಯರಂಗದಲ್ಲಿ ಹೊಸ ಕ್ರಾಂತಿ ಹುಟ್ಟಾಕ್ಕಿದ್ದಾರೆ. ಸ್ವಂತ ಪಕ್ಷ ಕಟ್ಟಿ ಎರಡೇ ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಟಿವಿಕೆ ಪಕ್ಷ 20 ಕ್ಷೇತ್ರಗಳಲ್ಲಿ ಗೆದ್ದರೆ ಹೆಚ್ಚು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿದೆ. ವಿಜಯ್ ಅಧಿಕಾರ ಹಿಡಿದಿದ್ದಾರೆ. ಇದರ ಬೆನ್ನಲ್ಲೇ 'ಜನ ನಾಯಗನ್' ಸಿನಿಮಾ ಟಾಕ್ ಆಫ್ ದ ಟೌನ್ ಆಗಿದೆ.
ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗುತ್ತಿದೆ. ಸೆನ್ಸಾರ್ ಸಮಸ್ಯೆಯಿಂದ ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಡಿಎಂಕೆ ಸರ್ಕಾರವೇ ಸಿನಿಮಾ ಬಿಡುಗಡೆಗೆ ಅಡ್ಡಗಾಲು ಹಾಕುತ್ತಿದೆ ಎಂದು ಚರ್ಚೆ ಆಗಿತ್ತು. ಇದೀಗ ವಿಜಯ್ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಸಿನಿಮಾ ತೆರೆಗೆ ಬರುವುದು ಸುಲಭ ಎನ್ನಲಾಗ್ತಿದೆ. ಬಾಕ್ಸಾಫೀಸ್ ಕಲೆಕ್ಷನ್ ಹಾಗೂ ಓಟಿಟಿ, ಸ್ಯಾಟಲೈಟ್ ರೈಟ್ಸ್ ಲೆಕ್ಕಾಚಾರ ಬದಲಾಗಿದೆ.

ತಮಿಳುನಾಡು ಚುನಾವಣೆಗೂ ಮುನ್ನ 'ಜನ ನಾಯಗನ್' ಸಂಪೂರ್ಣ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿತ್ತು. ಈ ಬಗ್ಗೆ ತನಿಖೆ ನಡೆದು ಕೆಲವರನ್ನು ಬಂಧಿಸಲಾಗಿದೆ. ಚುನಾವಣೆ ಪ್ರಚಾರಕ್ಕಾಗಿ ಚಿತ್ರತಂಡವೇ ಸಿನಿಮಾ ಲೀಕ್ ಮಾಡಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈಗಾಗಲೇ ಸಾಕಷ್ಟು ಜನ ಸಿನಿಮಾ ನೋಡಿಬಿಟ್ಟಿದ್ದಾರೆ. ಆದರೆ ವಿಜಯ್ ನೋಡುತ್ತಿದ್ದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ತಿದೆ.
ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣ ಮಾಡಿದೆ. ಇದು ವಿಜಯ್ ಕೊನೆಯ ಸಿನಿಮಾ ಎಂದು ಬಿಂಬಿಸಲಾಗಿತ್ತು. ಸದ್ಯ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ಹಾಗಾಗಿ ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಹಾಗಾಗಿ ಮತ್ತೆ ನೆಚ್ಚಿನ ನಟನ ಸಿನಿಮಾ ತೆರೆಮೇಲೆ ನೋಡಲು ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ. ಒಂದು ಲೆಕ್ಕದಲ್ಲಿ 'ಜನ ನಾಯಗನ್' ಕೊನೆಯ ಸಿನಿಮಾ ಎನ್ನುವಂತಾಗಿದೆ. ಹಾಗಾಗಿ ದೊಡ್ಡ ಪರದೆಯಲ್ಲಿ ದಳಪತಿ ವೆಟ್ರಿ ಕೊಂಡಾನ್ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ವಿಜಯ್ ಪ್ರಮಾಣವಚನದ ಬೆನ್ನಲ್ಲೇ ನಿರ್ಮಾಪಕ ವೆಂಕಟ್ ಕೊನಂಕಿ ಪ್ರತಿಕ್ರಿಯಿಸಿದ್ದಾರೆ. ಇನ್ನೆರಡು ವಾರಗಳಲ್ಲಿ 'ಜನ ನಾಯಗನ್' ಸಿನಿಮಾ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಸೆನ್ಸಾರ್ ಸರ್ಟಿಫಿಕೇಟ್ ಸಿಗುತ್ತಿದ್ದಂತೆ ಸಿನಿಮಾ ತೆರೆಗೆ ಬರಲಿದೆ. ಸದ್ಯ ಸಿನಿಮಾ ಓಟಿಟಿ ರೈಟ್ಸ್ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಪ್ರೈಂ ವಿಡಿಯೋ ಸಂಸ್ಥೆ 120 ಕೋಟಿ ರೂ.ಗೆ ಚಿತ್ರದ ರೈಟ್ಸ್ ಕೊಂಡುಕೊಂಡಿರುವುದಾಗಿ ಹೇಳಲಾಗಿತ್ತು.
'ಜನ ನಾಯಗನ್' ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗುತ್ತಿದ್ದಂತೆ ಪ್ರೈಂ ವೀಡಿಯೋ ಸಂಸ್ಥೆ ಉಲ್ಟಾ ಹೊಡೆಯುತ್ತಿದೆ ಎನ್ನಲಾಗಿತ್ತು. ಸಿನಿಮಾ ಲೀಕ್ ಆಗಿರುವುದರಿಂದ ಓಟಿಟಿಗೆ ಬಂದ್ರೆ ಯಾರು ನೋಡಲ್ಲ. ಹಾಗಾಗಿ 50 ಕೋಟಿ ರೂ. ರೈಟ್ಸ್ ಖರೀದಿಸುವುದಾಗಿ ಹೇಳ್ತಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಇದೀಗ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಎಲ್ಲಾ ಲೆಕ್ಕಾಚಾರ ಬದಲಾಗಿದೆ. ಮತ್ತೆ ಕೆವಿಎನ್ ಸಂಸ್ಥೆ ಜೊತೆ ಪ್ರೈಂ ವೀಡಿಯೋ ಮಾತುಕತೆ ಆರಂಭಿಸಿದೆ ಎನ್ನುವ ಊಹಾಪೋಹ ಶುರುವಾಗಿದೆ. ಸಿನಿಮಾ ಲೀಕ್ ಆಗಿದ್ದರೂ ವಿಜಯ್ ಕ್ರೇಜ್ ಜೋರಾಗಿರುವುದರಿಂದ ಓಟಿಟಿಯಲ್ಲೂ ಒಳ್ಳೆ ರೆಸ್ಪಾನ್ಸ್ ಸಿಗಬಹುದು ಎನ್ನುವ ಚರ್ಚೆ ನಡೀತಿದೆ. ಹಾಗಾಗಿ ಈ ಬದಲಾವಣೆ ಎನ್ನಲಾಗ್ತಿದೆ.
ಅಂದಹಾಗೆ ತೆಲುಗಿನ 'ಭಗವಂತ್ ಕೇಸರಿ' ರೀಮೆಕ್ ಇದು. ಬಾಲಕೃಷ್ಣ ಹಾಗೂ ಶ್ರೀಲೀಲಾ ಮಾಡಿದ್ದ ಪಾತ್ರಗಳಲ್ಲಿ ವಿಜಯ್ ಹಾಗೂ ಮಮಿತಾ ಬೈಜು ನಟಿಸಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯ್ ತಮ್ಮ ರಾಜಕೀಯರಂಗ ಪ್ರವೇಶಕ್ಕೆ ಈ ಸಿನಿಮಾ ಬಳಸಿಕೊಳ್ಳಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಇನ್ನು ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ದಳಪತಿ ವಿಜಯ್ ಬದಲು ತಮಿಳು ಮುಖ್ಯಮಂತ್ರಿ ವಿಜಯ್ ಎಂದು ಬದಲಾವಣೆ ಮಾಡುವ ಪ್ರಯತ್ನ ಕೂಡ ನಡೀತಿದೆ.


Click it and Unblock the Notifications