ಅಂದ ಹೆಚ್ಚಿಸಿಕೊಳ್ಳಲು ಸರ್ಜರಿ ಮೊರೆ ಹೋದ್ರಾ ತಮಿಳು ನಟ ಚಿಯಾನ್ ವಿಕ್ರಮ್?
ಸಿನಿಮಾ ನಟ, ನಟಿಯರು ತೆಳ್ಳಗೆ, ಬಹಳ ಸುಂದರವಾಗಿ ಇರಬೇಕು ಎನ್ನುವು ಅಲಿಖಿತ ನಿಯಮವೊಂದಿದೆ. ನಟ, ನಟಿಯರು ತೆರೆಮೇಲೆ ಸುಂದರವಾಗಿ ಕಾಣಿಸಿಕೊಳ್ಳಲು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಡಯೆಟ್, ಜಿಮ್, ಯೋಗ, ಧ್ಯಾನ ಅಂತೆಲ್ಲಾ ಸಾಕಷ್ಟು ಸರ್ಕಸ್ ಮಾಡುತ್ತಾರೆ. ಲುಕ್ಸ್ ಕಾರಣಕ್ಕೆ ಕೆಲವರು ಅವಕಾಶ ಕಳೆದುಕೊಂಡು ಮೂಲೆ ಗುಂಪಾಗಿರುವ ಉದಾಹರಣೆ ಕೂಡ ಇದೆ.
ಕೆಲ ನಟ, ನಟಿಯರು ಪ್ರಕೃತಿಗೆ ಸವಾಲು ಎನ್ನುವಂತೆ ವಯಸ್ಸು ಹೆಚ್ಚಾದಂತೆ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ. ಅದಕ್ಕಾಗಿ ಏನೆಲ್ಲಾ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇರುತ್ತದೆ. ನಾವು ಕೂಡ ಸಿನಿಮಾ ನಟ, ನಟಿಯರಂತೆ ಸದಾ ಸುಂದರವಾಗಿ ಕಾಣಬೇಕು ಎಂದು ಬಯಸುವವರು ಇದ್ದಾರೆ. ತಮಿಳು ನಟ ಚಿಯಾನ್ ವಿಕ್ರಮ್ ತಮ್ಮ ವಯಸ್ಸಿಗೆ ಸವಾಲು ಹಾಕಿದಂತೆ ಕಾಣ್ತಿದೆ.

ವಿಕ್ರಂ ವಯಸ್ಸು 60 ದಾಟಿದ್ರು, 20ರ ಯುವಕನಂತೆ ಮಿರಿ ಮಿರಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ವಿಕ್ರಂ ಸ್ಟೈಲಿಶ್ ಲುಕ್‌ನಲ್ಲಿ ಬಂದಿದ್ದರು. ಉದ್ದ ಕೂದಲು ಬಿಟ್ಟು ಬಿಳಿ ಶರ್ಟ್, ಖಾಕಿ ಪ್ಯಾಂಟ್ ಧರಿಸಿ, ಕಣ್ಣಿಗೆ ಕಪ್ಪು ಬಣ್ಣದ ಸನ್‌ಗ್ಲಾಸ್ ಹಾಕಿಕೊಂಡು ಗಮನ ಸೆಳೆದರು. 'ಅನ್ನಿಯನ್' ಚಿತ್ರದಲ್ಲಿ ರೆಮೊ ಆಗಿ ಕಾಣಿಸಿಕೊಂಡಂತೆ ಈಗಲೂ ಕಂಡಿದ್ದಾರೆ.
20 ವರ್ಷಗಳ ಹಿಂದೆ ಶಂಕರ್ ನಿರ್ದೇಶನದ 'ಅನ್ನಿಯನ್' ಸಿನಿಮಾ ಬಂದಿತ್ತು. ಚಿತ್ರದಲ್ಲಿ 3 ವಿಭಿನ್ನ ಶೇಡ್‌ಗಳಿದ್ದ ಪಾತ್ರದಲ್ಲಿ ನಟಿಸಿ ವಿಕ್ರಂ ಮೋಡಿ ಮಾಡಿದ್ದರು. ಅದರಲ್ಲೂ ರೆಮೊ ಲುಕ್ ಸಖತ್ ಸ್ಟೈಲಿಶ್ ಆಗಿತ್ತು. ಅರೇ, 21 ವರ್ಷಗಳ ಬಳಿಕ ಕೂಡ ವಿಕ್ರಂ ಅದೇ ರೀತಿ ಕಾಣ್ತಾರಲ್ಲಪ್ಪಾ ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಅವರ ಈ ಯಂಗ್ ಲುಕ್ ಹಿಂದಿನ ಸೀಕ್ರೆಟ್ ಏನಪ್ಪಾ ಎಂದು ಚರ್ಚಿಸುತ್ತಿದ್ದಾರೆ.
ಸುಂದರವಾಗಿ ಕಾಣಲು ಕೆಲವರು ಸರ್ಜರಿ ಮೊರೆ ಹೋಗುತ್ತಾರೆ. ಸಿನಿಮಾ ನಟ, ನಟಿಯರು ಸರ್ಜರಿ ಮೂಲಕ ತಮ್ಮ ಲುಕ್ಸ್ ಬದಲಿಸಿಕೊಂಡಿದ್ದಾರೆ. ಆದರೆ ಯಾರು ಈ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ. ವಿಕ್ರಂ ಕೂಡ ವಿದೇಶದಲ್ಲಿ ಅತ್ಯಾಧುನಿಯ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಪಡೆದು ಹೀಗೆ ಮಿಂಚುತ್ತಿರಬಹುದು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಅಲ್ಲ, ಪ್ರಕೃತಿ ಚಿಕಿತ್ಸೆ ಹಾಗೂ ಉತ್ತಮ ಅಭ್ಯಾಸಗಳಿಂದ ವಿಕ್ರಂ ಹೀಗೆ ಯುವಕನಂತೆ ಮಿಂಚುತ್ತಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ.
ವಿಕ್ರಂ ಸಾಕಷ್ಟು ಬಾರಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಸಿನಿಮಾ ಮಾಡುವ ವೇಳೆ ರಿಸ್ಕ್ ತೆಗೆದುಕೊಂಡು ಅದಕ್ಕೆ ತಕ್ಕ ಬೆಲೆ ತೆತ್ತಿದ್ದಾರೆ. ಒಂದು ಹಂತದಲ್ಲಿ ಕಾಲಿನ ಸರ್ಜರಿ ಮಾಡಿ ವೈದ್ಯರು ನೀವು ಮೊದಲಿನ ರೀತಿ ನಡೆಯೋಕೆ ಕಷ್ಟ ಎಂದುಬಿಟ್ಟಿದ್ದರು. ಆದರೂ ಅದನ್ನೆಲ್ಲಾ ಮೀರಿ ವಿಕ್ರಂ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಅಂದಹಾಗೆ ವಿಕ್ರಂ ನಟನೆಯ ಸಿನಿಮಾಗಳ ಬಗ್ಗೆ ಈಗ ಕ್ರೇಜ್ ಕಮ್ಮಿ ಆಗಿದೆ. 'ಅನ್ನಿಯನ್' ಚಿತ್ರವೇ ಒಂದರ್ಥದಲ್ಲಿ ಅದಕ್ಕೆ ಕಾರಣ ಎನ್ನುವವರು ಇದ್ದಾರೆ. 20 ವರ್ಷಗಳ ಹಿಂದೆ ಬಂದಿದ್ದ ಈ ಸಿನಿಮಾ ಮಾಡಿದ ಚಮತ್ಕಾರ ಅಷ್ಟಿಷ್ಟಲ್ಲ. ಅದರಲ್ಲೂ ವಿಕ್ರಂ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಮತ್ತೆ ಇದನ್ನು ಮೀರಿಸುವಂತಹ ಸಿನಿಮಾ ಆಗಲಿ, ವಿಕ್ರಂ ನಟನೆ ಆಗಲಿ ಪ್ರೇಕ್ಷಕರಿಗೆ ಕಾಣಲಿಲ್ಲ. 'ಅನ್ನಿಯನ್'ಗಿಂತ ಅದ್ಭುತ ಎನಿಸುವ ಪಾತ್ರಗಳಲ್ಲಿ, ವಿಭಿನ್ನ ಗೆಟಪ್, ಮೇಕಪ್ ಹಾಕಿಕೊಂಡು ವಿಕ್ರಂ ತೆರೆಮೇಲೆ ಬಂದರೂ ಪ್ರಯೋಜನವಾಗುತ್ತಿಲ್ಲ.
'ಅನ್ನಿಯನ್' ಆಗಿ ವಿಕ್ರಂ ನಿರ್ಮಿಸಿದ ಬೆಂಚ್ ಮಾರ್ಕ್ ಅನ್ನು ಅವರಿಂದಲೇ ಮೀರಿಸಲು ಸಾಧ್ಯವಾಗ್ತಿಲ್ಲ. ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡ್ತಿಲ್ಲ. 4 ವರ್ಷಗಳ ಹಿಂದೆ 'ಕೊಬ್ರಾ' ಎಂಬ ಚಿತ್ರದಲ್ಲಿ ವಿಕ್ರಂ ನಟಿಸಿದ್ದರು. ಒಂದೇ ವಾರಕ್ಕೆ ಸಿನಿಮಾ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿತ್ತು. ಸದ್ಯ ಹೆಸರಿಡದ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications