Mark Antony: "ಸೆನ್ಸಾರ್ ಮಂಡಳಿ ಸದಸ್ಯರಿಗೆ ನಾನು ಲಂಚ ಕೊಟ್ಟೆ": ವಿಶಾಲ್ ಭ್ರಷ್ಟಾಚಾರದ ಆರೋಪ
ಮುಂಬೈ CBFC ಬಗ್ಗೆ ತಮಿಳು ನಟ ವಿಶಾಲ್ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಮಾರ್ಕ್ ಆಂಟನಿ' ಸಿನಿಮಾದ ಹಿಂದಿ ಅವತರಣಿಕೆಗೆ ಸೆನ್ಸಾರ್ ಮಂಡಳಿಗೆ ಲಂಚ ನೀಡಿದ್ದಾಗಿ ವಿಶಾಲ್ ಹೇಳಿದ್ದಾರೆ. ಮುಂಬೈನಲ್ಲಿರುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಕಚೇರಿಯಲ್ಲಿ ಈ ಪರಿಸ್ಥಿತಿ ಎದುರಿಸಿದ್ದೇನೆ ಎಂದು ವಿಶಾಲ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.
'ಮಾರ್ಕ್ ಆಂಟನಿ' ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾದಾಗ ತಾವು ಎದುರಿಸಿದ ಸಮಸ್ಯೆ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶಾಲ್ ತನ್ನಿಂದ ಹಣ ಪಡೆದವರ ಹೆಸರು, ಖಾತೆ ಸಂಖ್ಯೆ ಮತ್ತು ಪಾವತಿಸಿದ ಮೊತ್ತವನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಬೇಕು ಎಂದು ವಿಶಾಲ್ ವಿಡಿಯೋದಲ್ಲಿ ಹೇಳಿದ್ದಾರೆ. ಸದ್ಯ ವಿಶಾಲ್ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

"ಬೆಳ್ಳಿತೆರೆಯಲ್ಲಿ ಭ್ರಷ್ಟಾಚಾರವನ್ನು ತೋರಿಸಲಾಗುತ್ತದೆ. ಆದರೆ ಇದು ನಿಜ ಜೀವನದಲ್ಲಿ ನೋಡುವಂತಾಗಿದೆ. ನನಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ ಮುಂಬೈನಲ್ಲಿರುವ CBFC ಕಚೇರಿಯಲ್ಲಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ಇನ್ನೂ ಕೆಟ್ಟದಾಗಿ ನಡೆಯುತ್ತಿದೆ. ನನ್ನ 'ಮಾರ್ಕ್ ಆಂಟೋನಿ' ಚಿತ್ರದ ಹಿಂದಿ ಅವತರಣಿಕೆಗೆ ನಾನು 6.5 ಲಕ್ಷ ರೂಪಾಯಿ ಕೊಡಬೇಕಾಗಿತ್ತು. ನಾನು ಇದಕ್ಕೆ ಸಂಬಂಧಿಸಿದ 2 ವಹಿವಾಟುಗಳನ್ನು ಮಾಡಿದ್ದೇನೆ" ಎಂದು ವಿಶಾಲ್ ಹೇಳಿದ್ದಾರೆ.
"ಸ್ಕ್ರೀನಿಂಗ್‌ಗಾಗಿ ರೂ.3 ಲಕ್ಷ ಮತ್ತು ಪ್ರಮಾಣಪತ್ರಕ್ಕಾಗಿ ರೂ.3.5 ಲಕ್ಷ ಪಾವತಿಸಿದ್ದೇನೆ. ನನ್ನ ವೃತ್ತಿಜೀವನದಲ್ಲಿ ನಾನು ಅಂತಹ ಪರಿಸ್ಥಿತಿನು ಎದುರಿಸಿಲ್ಲ. ಇಂದಿನ ದಿನಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಸಂಬಂಧಪಟ್ಟ ಮಧ್ಯವರ್ತಿಗಳಿಗೆ ಸಾಕಷ್ಟು ಹಣ ಕೊಡದೆ ಬೇರೆ ದಾರಿಯಿಲ್ಲ. ನಾನು ಈ ವಿಷಯವನ್ನು ಮಾನ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತಿದ್ದೇನೆ"
"ಇದು ನನಗಾಗಿ ಅಲ್ಲ. ಭವಿಷ್ಯದ ನಿರ್ಮಾಪಕರಿಗಾಗಿ. ನಾನು ಕಷ್ಟಪಟ್ಟು ದುಡಿದ ಹಣವನ್ನು ಭ್ರಷ್ಟಾಚಾರಕ್ಕೆ ಕೊಡಲು ಸಾಧ್ಯವಿಲ್ಲ.ನನ್ನ ಬಳಿ ಇರುವ ಪುರಾವೆಗಳನ್ನು ಎಲ್ಲರಿಗೂ ತಿಳಿಯುವಂತೆ ಹಾಕುತ್ತಿದ್ದೇನೆ. ಸತ್ಯ ಎಂದಿನಂತೆ ಗೆಲ್ಲಲಿ ಎಂದು ಹಾರೈಸುತ್ತೇನೆ" ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.
ವಿಶಾಲ್ ಅಭಿನಯದ 'ಮಾರ್ಕ್ ಆಂಟೋನಿ' ಚಿತ್ರಕ್ಕೆ ಅಧಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳಿದ್ದಾರೆ . ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಎಸ್.ಜೆ ಸೂರ್ಯ, ಸೆಲ್ವ ರಾಘವನ್ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಿತು ವರ್ಮಾ ನಾಯಕಿಯಾಗಿದ್ದು, ಮಿನಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿನೋದ್ ಕುಮಾರ್ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೆಲ್ಲದರ ಮಧ್ಯೆ ವಿಶಾಲ್ ಮುಂಬೈ ಸೆನ್ಸಾರ್ ಮಂಡಲಿ ಮೇಲೆ ವಿಶಾಲ್ ಆರೋಪ ಭಾರೀ ಚರ್ಚೆ ಹುಟ್ಟಾಕ್ಕಿದೆ.
ತಮಿಳಿನಲ್ಲಿ 'ಮಾರ್ಕ್ ಆಂಟೋನಿ' ಚಿತ್ರ 55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ತೆಲುಗು ರಾಜ್ಯಗಳಲ್ಲಿ 9 ಕೋಟಿ ರೂ. ಕರ್ನಾಟಕ ಹಾಗೂ ಇನ್ನಿತರೆ ರಾಜ್ಯಗಳಲ್ಲಿ 10 ಕೋಟಿ ರೂ. ಹಾಗೂ ಓವರ್‌ಸೀಸ್‌ನಲ್ಲಿ 17 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಚರ್ಚೆ ನಡೆದಿದೆ. ಈಗಾಗಲೇ 90 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ ಎಂದು ಟ್ರೇಡ್ ವರ್ಗಗಳು ಅಂದಾಜಿಸಿವೆ. ಚಿತ್ರದಲ್ಲಿ ಜ್ಯೂನಿಯರ್ ಸಿಲ್ಕ್ ಪಾತ್ರ ಹೈಲೆಟ್ ಎನಿಸಿಕೊಂಡಿದೆ.


Click it and Unblock the Notifications











