ತಮಿಳು ನಿರ್ದೇಶಕನ ಜೊತೆ ಪ್ರಭು ಮಗಳ 2ನೇ ಮದುವೆ: ವಿಶಾಲ್ ಸ್ವೀಟ್ ವಾರ್ನಿಂಗ್ ಕೊಟ್ಟಿದ್ಯಾಕೆ?
ತಮಿಳು ನಟ ಪ್ರಭು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ದರ್ಶನ್ ನಟನೆಯ 'ಬಾಸ್' ಮೊದಲಿಗೆ ನಟಿಸಿದ್ದ ಪ್ರಭು ಬಳಿಕ 'ಪವರ್' ಹಾಗೂ 'ದೃಶ್ಯ' ಸರಣಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರಭು ಪುತ್ರಿ ಐಶ್ವರ್ಯ 2ನೇ ಮದುವೆ ಇತ್ತೀಚೆಗೆ ನೆರವೇರಿದೆ.
ತಮಿಳು ಯುವ ನಿರ್ದೇಶನದ ಆದಿಕ್ ರವಿಚಂದ್ರನ್ ಜೊತೆ ಐಶ್ವರ್ಯ ಪ್ರಭು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕೆಲ ತಮಿಳು ಸಿನಿಮಾ ತೆರೆಯರು ಅದಿಕ್ ಹಾಗೂ ಐಶ್ವರ್ಯ ಜೋಡಿಯ ಮದುವೆಗೆ ಹಾಜರಾಗಿ ನವ ಜೋಡಿಗೆ ಶುಭಾಶಯ ಕೋರಿದ್ದಾರೆ.

'ತ್ರಿಶಾ ಇಲ್ಲಾನ ನಯನತಾರ', 'ಅನ್ಬಾನವನ್ ಅಸರಾದವನ್ ಆದಂಗಧವನ್', 'ಬಘೀರ' ಹಾಗೂ 'ಮಾರ್ಕ್ ಆಂಟನಿ' ಸಿನಿಮಾಗಳನ್ನು ಆದಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಂದ 'ಮಾರ್ಕ್ ಆಂಟನಿ' ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿತ್ತು. ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ಅದಿಕ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಶಿವಾಜಿ ಗಣೇಶನ್ ಮೊಮ್ಮಗಳು ಐಶ್ವರ್ಯ 2009ರಲ್ಲಿ ಸಂಬಂಧಿಕರ ಹುಡುಗ ಕುನಾಲ್ ಎಂಬುವವರ ಕೈ ಹಿಡಿದಿದ್ದರು. ಮದುವೆ ಬಳಿಕ ಜೋಡಿ ಅಮೇರಿಕಾದಲ್ಲಿ ಸೆಟ್ಲ್ ಆಗಿತ್ತು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಪೋಷಕರ ಜೊತೆಗೆ ಇದ್ದ ಐಶ್ವರ್ಯ ಇದೀಗ ನಿರ್ದೇಶಕ ಆದಿಕ್ ರವಿಚಂದ್ರನ್ ಕೈ ಹಿಡಿದಿದ್ದಾರೆ.
'ಮಾರ್ಕ್ ಆಂಟನಿ' ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದ ಆದಿಕ್ ರವಿಚಂದ್ರನ್‌ಗೆ ಆಪ್ತನೂ ಆದ ನಟ ವಿಶಾಲ್ ಮದುವೆಗೆ ಹಾಜರಾಗಿ ನವ ವಧು-ವರರಿಗೆ ಶುಭ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ. ನನ್ನ ಸಹೋದರಿಯನ್ನು ರಾಜಕುಮಾರಿ ರೀತಿ ನೋಡಿಕೊಳ್ಳಬೇಕು ಎಂದು ಆದಿಕ್ ಬಳಿ ಮನವಿ ಮಾಡಿದ್ದಾರೆ.
"ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿರುವ ನಿಮ್ಮಬ್ಬರಿಗೂ ಎಲ್ಲರೂ ಆಶೀರ್ವಾದವಿದೆ. ಮುಖ್ಯವಾಗಿ ಪ್ರಭು ಸರ್ ಹಾಗೂ ಪುನೀತ ಆಂಟಿ ಹಾರೈಕೆ ಸದಾ ಇರುತ್ತದೆ. ನನ್ನ ಸಹೋದರಿಯನ್ನು ಮದುವೆಯಾಗಿರುವ ಆದಿಕ್ ನೀನು ಆಕೆಯನ್ನು ಮಹಾರಾಣಿಯಂತೆ ನೋಡಿಕೊಳ್ಳಬೇಕು. ನೀನು ಈಗಾಗಲೇ ಆಕ್ಷನ್ ಹೀರೊ ಜೊತೆ ಕೆಲಸ ಮಾಡಿದ್ದೀಯಾ. ನಿನಗೆ ಏನಾಗುತ್ತೆ ಎಂದು ಗೊತ್ತು. ಸುಮ್ನೆ ತಮಾಷೆ ಮಾಡಿದೆ. ನೀನು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಅಂತ ನನಗೆ ಗೊತ್ತು. ಅದೇನೋ ಗೊತ್ತಿಲ್ಲ ನನ್ನ ಸಹೋದಿಯರ ಹೆಸರು ಐಶ್ವರ್ಯ ಆಗಿರುತ್ತದೆ. ನೀವಿಬ್ಬರು ಸದಾ ಸಂತೋಷವಾಗಿರಬೇಕು ಎಂದು ಕೋರುತ್ತೇನೆ" ಎಂದು ಟ್ವೀಟ್(ಎಕ್ಸ್) ಮಾಡಿದ್ದಾರೆ.
ಸದ್ಯ ವಿಶಾಲ್ ಟ್ವೀಟ್ ವೈರಲ್ ಆಗುತ್ತಿದೆ. ಇನ್ನು 'ರತ್ನಂ' ಹಾಗೂ 'ತುಪ್ಪರಿವಾಲನ್'-2 ಸಿನಿಮಾಗಳಲ್ಲಿ ವಿಶಾಲ್ ನಟಿಸುತ್ತಿದ್ದಾರೆ. 'ತುಪ್ಪರಿವಾಲನ್' ಸೀಕ್ವೆಲ್‌ನ ತಾವೇ ನಿರ್ದೇಶನ ಮಾಡುತ್ತಿದ್ದಾರೆ. ವಿಶಾಲ್ ಸಹೋದರಿ ಐಶ್ವರ್ಯ ಕೂಡ ಕೆಲ ವರ್ಷಗಳ ಹಿಂದೆ ಮದುವೆ ಆಗಿದ್ದರು. ಕಳೆದ ವರ್ಷ ತಂಗಿಗೆ ಮಗಳು ಹುಟ್ಟಿ ತಾವು ಮಾವ ಆಗುತ್ತಿರುವ ಸಂತಸದ ಸುದ್ದಿಯನ್ನು ವಿಶಾಲ್ ಹಂಚಿಕೊಂಡಿದ್ದರು.
ಇನ್ನು ಖ್ಯಾತ ನಟ ಶಿವಾಜಿ ಗಣೇಶನ್ ಪುತ್ರ ಪ್ರಭು ಒಂದ್ಕಾಲದಲ್ಲಿ ಹೀರೊ ಆಗಿ ಸಿನಿಮಾಗಳಲ್ಲಿ ಮಿಂಚಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಪ್ರಭು ಪುತ್ರ ವಿಕ್ರಂ ಕೂಡ ಹೀರೋ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ.


Click it and Unblock the Notifications











