ಮತ್ತೆ ಕುಡಿದು ಶೂಟಿಂಗ್ ಬಂದ್ರೆ ಚಪ್ಪಲಿಲೀ ಹೊಡೀತಿನಿ- ರಜನಿಕಾಂತ್‌ಗೆ ಎಚ್ಚರಿಕೆ ಕೊಟ್ಟಿದ್ದಿದ್ಯಾರು?
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸ್ಟೈಲ್ ಮ್ಯಾನರಿಸಂನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಿಜ ಜೀವನದಲ್ಲಿ ತಮ್ಮ ಸರಳ ಸಜ್ಜನ ವ್ಯಕ್ತಿತ್ವ ಹಾಗೂ ಸಹಾಯಗುಣದಿಂದ ಮತ್ತಷ್ಟು ಜನಪ್ರಿಯರಾಗಿದ್ದಾರೆ. ಧೂಮಪಾನ ಹಾಗೂ ಮದ್ಯಪಾನದ ಬಗ್ಗೆ ರಜನಿಕಾಂತ್ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ.
ಸಿಗರೇಟ್, ಡ್ರಿಂಕ್ಸ್ ಒಳ್ಳೆದಲ್ಲ. ನಾನು ಅದನ್ನು ಚಟವಾಗಿಸಿಕೊಂಡು ಸಾಕಷ್ಟು ಸಂಕಷ್ಟ ಎದುರಿಸಿದ್ದೇನೆ. ನೀವು ಆ ತಪ್ಪು ಮಾಡಬೇಡಿ ಎಂದು ರಜನಿಕಾಂತ್ ವೇದಿಕೆಗಳಲ್ಲಿ ಹೇಳಿದ್ದಾರೆ. ಸೂಪರ್ ಸ್ಟಾರ್ ಸಿಗರೇಟ್ ಸೇದುವ ಸ್ಟೈಲ್ ಕೂಡ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ಸಮಯದಲ್ಲೇ ಶಿವಾಜಿ ಸಿಗರೇಟ್, ಡ್ರಿಂಕ್ಸ್ ಅಭ್ಯಾಸ ಮಾಡಿಕೊಂಡಿದ್ದರು. ಚಿತ್ರರಂಗಕ್ಕೆ ಬಂದಮೇಲೆ ಅದು ಜಾಸ್ತಿ ಆಗಿತ್ತು. ಒಮ್ಮೆ ಮದ್ಯ ಸೇವಿಸಿ ಚಿತ್ರೀಕರಣಕ್ಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಈ ಬಗ್ಗೆ ಸ್ವತಃ ರಜನಿಕಾಂತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ರಜನಿಕಾಂತ್ ಮಾತನಾಡಿ "ಒಮ್ಮೆ ಚಿತ್ರೀಕರಣಕ್ಕೆ ಹೋಗಿದ್ದೆ. ಪ್ಯಾಕಪ್ ಅಂದ್ರು ಸರಿ ಅಂತ ನಾನು ಹೋಗಿ ಸ್ವಲ್ಪ ಕುಡಿದುಬಿಟ್ಟೆ.. ಆಗ ಅಸಿಸ್ಟೆಂಟ್ ಡೈರೆಕ್ಟರ್ ಬಂದು, ಸರ್ ಕರೀತಿದ್ದಾರೆ. ಈಗ್ಲೇ ಬರಬೇಕಂತೆ. ಒಂದು ಶಾಟ್ ಮಿಸ್ ಆಗಿಬಿಟ್ಟಿದೆ. ಗೊತ್ತಿಲ್ಲದೇ ಪ್ಯಾಕಪ್ ಹೇಳಿಬಿಟ್ರು.. ಈಗ್ಲೇ ಬರಬೇಕು ಅಂದ್ರು.. ನನಗೆ ಶಾಕ್ ಆಗಿಬಿಡ್ತು.. ಎಣ್ಣೆ ಹಾಕಿಬಿಟ್ಟಿದ್ದೀನಿ. ಏನಪ್ಪಾ ಮಾಡೋದು ಅಂತ ಮತ್ತೆ ಸ್ನಾನ ಮಾಡಿ, ಹಲ್ಲು ಉಜ್ಜಿ, ಸೆಂಟ್ ಹೊಡ್ಕೊಂಡು, ಮೇಕಪ್ ಹಾಕಿಕೊಂಡು ಹೋಗಿ ನಿಂತೆ" ಎಂದು ಆ ಘಟನೆ ನೆನಪಿಸಿಕೊಂಡಿದ್ದರು.
ಬಳಿಕ ಏನಾಯ್ತು ಅಂದು ನಿರ್ದೇಶಕ ಬಾಲಚಂದರ್ ಕೊಟ್ಟ ಎಚ್ಚರಿಕೆ ಏನು ಎನ್ನುವುದನ್ನು ರಜನಿಕಾಂತ್ ಹೇಳಿದ್ದರು. "ಮತ್ತೆ ಮೇಕಪ್ ಹಾಕಿಕೊಂಡು ಹೋಗಿ ನಿಂತೆ.. ಹೇಗಾದರೂ ಮಾಡಿ ಬಾಲಚಂದರ್ ಸರ್ ಅವರಿಂದ ಅಂತಹ ಕಾಯ್ತಿಕೊಳ್ಳಬೇಕು. ಹತ್ತಿರ ಹೋಗಬಾರದು ಎಂದುಕೊಂಡೆ. ಆದ್ರೂ ಗೊತ್ತಾಗಿಬಿಡ್ತು. ರೂಮ್‌ಗೆ ಬಾ ಎಂದು ಕರ್ಕೊಂಡು ಹೋದ್ರು. ನನಗೆ ಬಹಳ ಭಯ ಆಗಿಬಿಟ್ಟಿತ್ತು. ಆಗ ಖ್ಯಾತ ನಟ ತಮಿಳ್ ನಾಗೇಶ್ ಉದಾಹರಣೆ ಕೊಟ್ಟು ಬೈದ್ರು" ಎಂದು ಹೇಳಿದ್ದರು.

"ನಿನಗೆ ನಾಗೇಶ್ ಗೊತ್ತಾ? ಅಂತ ಬಾಲಚಂದರ್ ಸರ್ ಕೇಳಿದ್ರು. ಗೊತ್ತು ಸರ್ ಅಂದೆ.. ಎಂತಹ ಕಲಾವಿದ ಗೊತ್ತಾ? ಅಂದಿದ್ದಕ್ಕೆ ಗೊತ್ತಿಲ್ಲ ಅಂದೆ. ಆತನ ಮುಂದೆ ನೀನು ಒಂದು ಸಣ್ಣ ಇರುವೆಗೂ ಸಮ ಅಲ್ಲ.. ಕುಡಿದು ಅವನೇ ಜೀವನ ಹಾಳು ಮಾಡಿಕೊಂಡ. ಇನ್ಮುಂದೆ ಚಿತ್ರೀಕರಣದ ಸಮಯದಲ್ಲಿ ಕುಡಿದಿದ್ದೀಯಾ ಎಂದು ಗೊತ್ತಾದ್ರೆ, ಚಪ್ಪಲಿಯಲ್ಲಿ ಹೊಡಿತ್ತೀನಿ ಅಂದ್ರು.. ಅದೇ ಕೊನೆ ಆ ಬಳಿಕ ಚಿತ್ರೀಕರಣದ ಸಮಯದಲ್ಲಿ ಕುಡಿಯಲ್ಲ. ಅದು ಯಾವುದೇ ಜಾಗ ಆಗಿದ್ದರೂ ಎಷ್ಟೇ ಚಳಿ ಇರಲಿ ಏನೇ ಆಗಿರಲಿ ಎಣ್ಣೆ ಮಾತ್ರ ಮುಟ್ಟಲ್ಲ" ಎಂದು ರಜನಿಕಾಂತ್ ಆ ಘಟನೆಯನ್ನು ವಿವರಿಸಿದ್ದರು.
'ಜೈಲರ್' ಆಡಿಯೋ ಲಾಂಚ್ ವೇದಿಕೆಯಲ್ಲಿ ಕೂಡ ಆಲ್ಕೋಹಾಲ್ ಒಳ್ಳೆದಲ್ಲ ಎಂದು ರಜನಿಕಾಂತ್ ಕಿವಿಮಾತು ಹೇಳಿದ್ದರು. ನಾನು ಕುಡಿದು ಕುಡಿದು ಹೀಗಾದೆ, ಅದನ್ನು ಬಿಟ್ಟಿದ್ದರೆ ಈಗ ಇರುವ ರಜನಿಕಾಂತ್ ಏನೇನು ಅಲ್ಲ. ಬರೀ ಸಿನಿಮಾ ಅಲ್ಲ, ಸಾಕಷ್ಟು ಜನ ಸೇವೆ ಕೂಡ ಮಾಡುತ್ತಿದ್ದೆ. ಕುಡಿತ ನನಗೆ ನಾನೇ ಮಾಡಿಕೊಂಡ ಶಿಕ್ಷೆ. ದಿನ ಕುಡಿಯಬೇಡಿ, ಹಾಗಂತ ಕುಡಿಯಲೇ ಬೇಡಿ ಎಂದು ನಾನು ಹೇಳಲ್ಲ. ಅಷ್ಟು ದೊಡ್ಡವನಲ್ಲ.. ನೀವು ಕುಡಿಯುವುದರಿಂದ ನಿಮ್ಮ ಕುಟುಂಬದವರಿಗೂ ಕಷ್ಟ. ಅದನ್ನು ಬಿಡುವುದು ಅಷ್ಟು ಕಷ್ಟ ಏನಲ್ಲ.. ನಾನು ಬಿಟ್ಟಿದ್ದೀನಿ ಎಂದು ರಜನಿಕಾಂತ್ ಹೇಳಿದ್ದರು.


Click it and Unblock the Notifications











