"ಹಿಂದಿ ಕಲಿತಿದ್ರೆ, ನಾನು ಹೋಗಿ ಐಶ್ವರ್ಯ ರೈನ ಅತ್ಯಾಚಾರ ಮಾಡ್ತಿದ್ದೆ": ನಟ ರಾಧಾ ರವಿ ಹೇಳಿಕೆ ವೈರಲ್
ನಟಿ ತ್ರಿಶಾ ಕುರಿತು ತಮಿಳು ಪೋಷಕ ನಟ ಮನ್ಸೂರ್ ಅಲಿಖಾನ್ ನೀಡಿರುವ ಅಸಭ್ಯ ಹೇಳಿಕೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ತಮ್ಮ ಹೇಳಿಕೆಗೆ ಮನ್ಸೂರ್ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಹೆಚ್ಚಾಗುತ್ತಿದೆ. ಚಿರಂಜೀವಿ ಸೇರಿದಂತೆ ಸಾಕಷ್ಟು ನಟ, ನಟಿಯರು ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಮನ್ಸೂರ್ ಅಲಿಖಾನ್ ಕ್ಷಮೆ ಕೇಳಲ್ಲ ಎಂದು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ.
'ಲಿಯೋ' ಚಿತ್ರದಲ್ಲಿ ಇತ್ತೀಚೆಗೆ ಮನ್ಸೂರ್ ಅಲಿಖಾನ್ ನಟಿಸಿದ್ದರು. ದಳಪತಿ ವಿಜಯ್ ನಟನೆಯ ಈ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿತು. ಆದರೆ ವಿಲನ್ ಪಾತ್ರ ಸಿಗಲಿಲ್ಲ. ತ್ರಿಶಾನ ರೇ* ಮಾಡುವ ಸನ್ನಿವೇಶ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಮನ್ಸೂರ್ ಅಲಿಖಾನ್ ಹೇಳಿದ್ದರು. ಇದಕ್ಕೆ ತ್ರಿಶಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ ತಮಿಳು ಪೋಷಕ ನಟ ರಾಧಾ ರವಿ ಇದೇ ರೀತಿ ಬಾಲಿವುಡ್ ನಟಿ ಐಶ್ವರ್ಯ ರೈ ಕುರಿತು ಅಸಭ್ಯವಾಗಿ ಮಾತನಾಡಿದ್ದ ಹಳೇ ವಿಡಿಯೋ ವೈರಲ್ ಆಗುತ್ತಿದೆ.

2016ರಲ್ಲಿ ತಮಿಳಿನ 'ಇರೈವಿ' ಎನ್ನುವ ಸಿನಿಮಾ ರಿಲೀಸ್ ಆಗಿತ್ತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರದಲ್ಲಿ ಎಸ್. ಜೆ ಸೂರ್ಯ, ವಿಜಯ್ ಸೇತುಪತಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಇದೇ ಚಿತ್ರದಲ್ಲಿ ರಾಧಾ ರವಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ ಅಸಭ್ಯವಾದ ಜೋಕ್ ಮಾಡಿದ್ದರು.
ನಟ ರಾಧಾ ರವಿ ಮಾತನಾಡುತ್ತಾ "ನನಗೆ ತಮಿಳು ಭಾಷಾಭಿಮಾನದ ಬಗ್ಗೆ ಸಾಕಷ್ಟು ಜನ ಹೇಳಿದ್ರು. ಹಿಂದಿ ಕಲಿಬೇಡ ಅಂದ್ರು. ಆ ರೀತಿ ಹಿಂದಿ ಬೇಡ ಎಂದು ಬಿಟ್ಟವರಲ್ಲಿ ನಾನು ಒಬ್ಬ. ಆದರೆ ಆ ರೀತಿ ಹೇಳಿದವರೇ ಬಳಿಕ ಹಿಂದಿ ಕಲಿತರು. ನಾನು ಕಲಿಯಲೇಯಿಲ್ಲ. ತಮಿಳು, ತಮಿಳು ಅನ್ನೋದನ್ನು ಬಿಟ್ಟು ಹಿಂದಿ ಕಲಿತಿದ್ದರೆ, ನಾನು ಬಾಲಿವುಡ್‌ಗೆ ಹೋಗಿ ಐಶ್ವರ್ಯ ರೈನ ಅತ್ಯಾಚಾರ ಮಾಡಬಹುದಿತ್ತು. ಅಂದ್ರೆ, ನನಗೆ ಅಂತಹ ಪಾತ್ರಗಳು(ವಿಲನ್) ತಾನೇ ಕೊಡ್ತಾರೆ. ಅದು ಬಿಟ್ಟು ನನಗೇನು ದೇವರ ಪಾತ್ರ ಕೊಡ್ತಾರಾ? ನಿರ್ದೇಶಕರಿಗೆ ಗೊತ್ತಿಲ್ಲದೇ ಈ ಚಿತ್ರದಲ್ಲಿ ಒಳ್ಳೆ ಪಾತ್ರ ಕೊಟ್ಟುಬಿಟ್ಟಿದ್ದಾರೆ" ಎಂದು ಹೇಳಿದ್ದರು.

ರಾಧಾ ರವಿ ಅಸಭ್ಯ ಜೋಕ್ ಅನ್ನು ಅಲ್ಲಿ ನೆರೆದವರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಸದ್ಯ ಮನ್ಸೂರ್ ಅಲಿಖಾನ್ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ, ರಾಧ ರವಿ ಹಳೇ ಹೇಳಿಕೆ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಂದು ರಾಧಾ ರವಿ ಜೋಕ್ ಮಾಡಿದಂತೆಯೇ ಈಗ ಮನ್ಸೂರ್ ಅಲಿಖಾನ್ ಮಾತನಾಡಿದ್ದಾರೆ. ರಾಧ ರವಿ ಬಗ್ಗೆಯೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಚಿನ್ಮಯಿ ಪ್ರಶ್ನಿಸಿದ್ದಾರೆ.
ಹಿರಿಯ ನಟ ರಾಧಾ ರವಿ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ನಯನತಾರಾ, ಕಮಲ್ ಹಾಸನ್ ಕುರಿತು ಮಾತನಾಡಿದ್ದರು. "ಮೂವರು ಹೆಂಗಸರನ್ನು (ಮಾಜಿ ಪತ್ನಿಯರು) ಕಾಪಾಡಿಕೊಳ್ಳಲಾಗದ ಅವನು ಜನರನ್ನು ಹೇಗೆ ಕಾಪಾಡಿಯಾನು' ಎಂದು ಕಮ್ ಬಗ್ಗೆ ರಾಧಾ ರವಿ ಕಾಮೆಂಟ್ ಮಾಡಿದ್ದರು.
"ನಯನತಾರಾ 'ಭೂತ' ಹಾಗೂ ಸೀತೆಯ ಪಾತ್ರ ಎರಡು ಪಾತ್ರ ನಿರ್ವಹಿಸಿದ್ದಾರೆ. ಹಿಂದೆಲ್ಲ ದೇವತೆಯ ಪಾತ್ರ ಎಂದರೆ ಕೆಆರ್ ವಿಜಯ ಅವರು ಮೊದಲ ಆಯ್ಕೆಯಾಗಿರುತ್ತಿದ್ದರು. ಈಗ ಯಾರನ್ನು ಬೇಕಾದರೂ ದೇವತೆಯ ಪಾತ್ರ ನಿರ್ವಹಿಸಲು ಆಯ್ಕೆ ಮಾಡಲಾಗುತ್ತಿದೆ. ನೋಡಿದ ತಕ್ಷಣ ನಮಸ್ಕಾರ ಮಾಡಬೇಕು ಅನಿಸುವವರನ್ನು ಪಾತ್ರಕ್ಕೆ ಆಯ್ಕೆ ಮಾಡಬಹುದು ಅಥವಾ ನೋಡಿದ ತಕ್ಷಣ ಕರೆಯಬೇಕು ಅಂತಾ ಅನಿಸುವವರನ್ನು ಆರಿಸಬಹುದು ಎಂದು ರಾಧಾರವಿ ಹೇಳಿದ್ದರು. ಈ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


Click it and Unblock the Notifications











