ಆ ನಟ ನನ್ನ ಕ್ರಶ್.. ಆತನ ಪತ್ನಿಗೆ ಗೊತ್ತಾದ್ರೆ ಸಾಯ್ಸಿಬಿಡ್ತಾಳೆ; ನಟಿ ಲೈಲಾ ಹೇಳಿಕೆ ವೈರಲ್
ಗೋವಾ ಮೂಲದ ನಟಿ ಲೈಲಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಿದಾಕೆ. ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಚೆಲುವೆ ಮದುವೆ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಇತ್ತೀಚೆಗೆ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಗೋದಾರಿ ಗಟ್ಟುಪೈನ' ಎಂಬ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
1996ರಲ್ಲಿ 'ದುಷ್ಮನ್ ದುನಿಯಾ ಕಾ' ಎಂಬ ಬಾಲಿವುಡ್ ಚಿತ್ರದಲ್ಲಿ ಲೈಲಾ ಮೊದಲಿಗೆ ನಟಿಸಿದ್ದರು. ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. 'ದೇವರ ಮಗ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ತಮಿಳಿನಲ್ಲಿ ಸೂರ್ಯ ಹಾಗೂ ಲೈಲಾ ಜೋಡಿ ಮೋಡಿ ಮಾಡಿತ್ತು. 4 ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಒಂದಕ್ಕಿಂತ ಒಂದು ವಿಭಿನ್ನವಾದ ಜಾನರ್ ಸಿನಿಮಾಗಳಲ್ಲಿ ಮಿಂಚಿದ್ದರು.

ಚಿತ್ರರಂಗದಲ್ಲಿ ಸೂರ್ಯ ನನ್ನ ಕ್ರಶ್, ಈ ವಿಚಾರ ಜೋತಿಕಾಗೆ ಗೊತ್ತಾದ್ರೆ ನನ್ನ ಸಾಯಿಸಿಬಿಡ್ತಾಳೆ ಎಂದು ಲೈಲಾ ತಮಾಷೆಯಾಗಿ ನಕ್ಕಿರುವುದು ಈಗ ವೈರಲ್ ಆಗ್ತಿದೆ. "ಕ್ರಶ್ ಎನ್ನುವುದಕ್ಕಿಂತ ನಾವಿಬ್ಬರು ಬಹಳ ಒಳ್ಳೆ ಫ್ರೆಂಡ್ಸ್.. ಮೊದಲ ಬಾರಿ 'ನಂದಾ' ಚಿತ್ರದಲ್ಲಿ ನಟಿಸುವ ಸಮಯದಿಂದ ನಮ್ಮ ಸ್ನೇಹ ಶುರುವಾಯಿತು ಎಂದು ಲೈಲಾ ಹೇಳಿದ್ದಾರೆ.
ಮತ್ತೊಂದು ಸಂದರ್ಶನದಲ್ಲಿ ಕೂಡ ಸೂರ್ಯ ಜೊತೆಗಿನ ಆತ್ಮೀಯ ಒಡನಾಟದ ಬಗ್ಗೆ ಲೈಲಾ ಮಾತನಾಡಿದ್ದರು. ನಾನು ಯಾವಾಗಲೂ ಸೆಟ್‌ನಲ್ಲಿ ಅವರನ್ನು ರೇಗಿಸುತ್ತಿದ್ದೆ. ತಮಾಷೆ ಮಾಡಿ ಎಂಜಾಯ್ ಮಾಡುತ್ತಿದ್ದೆವು. ಜ್ಯೋತಿಕಾ ಕೂಡ ನನಗೆ ಒಳ್ಳೆ ಫ್ರೆಂಡ್. ನಾನು ಹಾಗೂ ಸೂರ್ಯ ಒಳ್ಳೆ ಆನ್‌ಸ್ಕ್ರೀನ್ ಪೇರ್ ಅಂತ ಸ್ವತಃ ಜ್ಯೋತಿಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಲೈಲಾ ತಿಳಿಸಿದ್ದರು.
'ನಂದಾ', 'ಉನ್ನೈ ನಿನ್ನತ್ತು', 'ಮೌನಂ ಪೇಸಿದೆಯೆ' ಹಾಗೂ ಪಿತಾಮಗನ್' ಸಿನಿಮಾಗಳಲ್ಲಿ ಸೂರ್ಯ ಹಾಗೂ ಲೈಲಾ ಒಟ್ಟಿಗೆ ನಟಿಸಿದ್ದರು. ಅಚ್ಚರಿ ಎಂದರೇ ಯಾವುದೇ ಸಿನಿಮಾ ಇಬ್ಬರ ಲವ್ ಸಕ್ಸಸ್ ಆಗುವುದಿಲ್ಲ. ರೊಮ್ಯಾಂಟಿಕ್ ಆಗಿ ಇಬ್ಬರೂ ನಟಿಸಿರುವುದೇ ಕಮ್ಮಿ ಎಂದು ಲೈಲಾ ಹೇಳಿದ್ದಾರೆ.
'ದೇವರ ಮಗ' ಬಳಿಕ ಕನ್ನಡದಲ್ಲಿ 'ರಾಮಕೃಷ್ಣ' ಹಾಗೂ 'ತಂದೆಗೆ ತಕ್ಕ ಮಗ' ಎಂಬ ಸಿನಿಮಾಗಳಲ್ಲಿ ಲೈಲಾ ನಟಿಸಿದ್ದರು. 2006ರಲ್ಲಿ ಆಕೆ ಮದುವೆ ನಡೆದಿತ್ತು. ಬಳಿಕ 16 ವರ್ಷ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರು. 2022ರಲ್ಲಿ ತಮಿಳಿನ 'ಸರ್ದಾರ್' ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಲು ಆರಂಭಿಸಿದರು. ತಮಿಳಿನ 'GOAT' ಹಾಗೂ ಕಳೆದ ವರ್ಷ ಬಂದ 'ಶಬ್ದಂ' ಸಿನಿಮಾಗಳಲ್ಲಿ ಕೂಡ ನಗುಮೊಗದ ಚೆಲುವೆ ಮಿಂಚಿದ್ದರು.
ಅಜಿತ್, ವಿಜಯ್, ಸೂರ್ಯ ಹೀಗೆ ತಮಿಳಿನ ಸ್ಟಾರ್ ನಟರ ಜೊತೆಗೆ ಲೈಲಾ ತೆರೆ ಹಂಚಿಕೊಂಡಿದ್ದಾರೆ. ಆದರೆ ನಾಯಕಿಯಾಗಿ ಉತ್ತುಂಗದಲ್ಲಿ ಇದ್ದಾಗಲೇ ಮದುವೆಯಾಗಿ ಚಿತ್ರರಂಗದಿಂದ ದೂರಾಗಿದ್ದರು. ಇರಾನ್ ಮೂಲದ ಉದ್ಯಮಿ ಮೆಹದಿ ಎಂಬುವವರನ್ನು 8 ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದರು. ಮದುವೆಗೂ 4 ವರ್ಷ ಮುನ್ನ ಎಂಗೇಜ್‌ಮೆಂಟ್ ಆಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ನಂದಾ ಹಾಗೂ ಪಿತಾಮಗನ್ ಚಿತ್ರಗಳ ನಟನೆಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಲೈಲಾಗೆ ಸಿಕ್ಕಿತ್ತು. ಕೆಲ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಕೂಡ ಆಕೆ ಕಾಣಿಸಿಕೊಂಡಿದ್ದಾರೆ. ಈಗ ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ. ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications