ವಿಜಯ್-ಸಂಗೀತಾ ಸಂಸಾರದಲ್ಲಿ ಬಿರುಗಾಳಿ ; ತ್ರಿಶಾ ಹಳೆ ಫೋಟೊ ವೈರಲ್ - ಮಿಸ್ ಚೆನ್ನೈ ಜೊತೆ ಇರುವ ಈ 'ಕರಿಚಿರತೆ' ಯಾರು ?
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇಂತಹ ಪ್ರಪಂಚದಲ್ಲಿ ತಮ್ಮ ನೆಚ್ಚಿನ ನಾಯಕಿ ಅಪ್ಪಿ ತಪ್ಪಿ ಅಪರಿಚಿತ ವ್ಯಕ್ತಿಯ ಜೊತೆ ತೀರಾ ಆಪ್ತವಾಗಿ ಕಾಣಿಸಿಕೊಂಡರೆ ಮುಗಿಯಿತು.
ಅಭಿಮಾನಿಗಳು ರಾತ್ರಿ ಎಲ್ಲ ನಿದ್ದೆ ಇಲ್ಲದೇ ಒದ್ದಾಡುತ್ತಾರೆ. ಯಾರಿರಬಹುದು ಎಂದು ತಲೆ ಕೆದರಿಕೊಂಡು ಹುಡುಕುತ್ತಾರೆ. ಆ ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆಯೇ ವೈರಲ್ ಆಗುತ್ತಿರುವ ತ್ರಿಶಾ ಅವರ ಫೋಟೊ ಮತ್ತು ನಡೆಯುತ್ತಿರುವ ಚರ್ಚೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ.. ದಳಪತಿ ವಿಜಯ್ ಮತ್ತು ಸಂಗೀತಾ ಅವರ 27 ವರ್ಷದ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಒಂದು ಕಡೆ ಸುಂದರವಾದ ಸಂಸಾರದಲ್ಲಿ ಹುಳಿ ಹಿಂಡಿದ ಆರೋಪ ತ್ರಿಶಾ ಅವರ ಮೇಲೀದೆ. ಮತ್ತೊಂದು ಕಡೆ ಚಿತ್ರರಂಗ ಈ ವಿಚಾರದಲ್ಲಿ ಇಬ್ಬಾಗವಾಗಿದೆ.
ಕೆಲವರು ತ್ರಿಶಾ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತ್ರಿಶಾ ಮೇಲೆ ಕೆಂಡ ಕಾರುತ್ತಿದ್ದಾರೆ. ಈ ಎರಡು ಗುಂಪಿನ ನಡುವೆ ಮತ್ತೊಂದು ಗುಂಪು ವ್ಯಂಗ್ಯವಾಡುತ್ತಾ ಮಜಾ ತೆಗೆದುಕೊಳ್ಳುತ್ತಿದೆ.
ಹೀಗಿರುವಾಗ 'ಕರಿಚಿರತೆ'ಯಂತೆ ಸ್ಟೈಲಿಶ್ ಆಗಿ ಕಾಣುತ್ತಿರುವ ವ್ಯಕ್ತಿಯೊಬ್ಬನ ಜೊತೆ ತುಂಬಾನೇ ಆತ್ಮೀಯವಾಗಿರುವ 'ಮಿಸ್ ಚೆನ್ನೈ' ತ್ರಿಶಾ ಅವರ ಕೆಲ ಹಳೆಯ ಫೋಟೊಗಳು ವೈರಲ್ ಆಗಿವೆ. ಯಾರು ಈ ವ್ಯಕ್ತಿ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಿದೆ.
ಯಾರು ಈ ವ್ಯಕ್ತಿ ..?
ತ್ರಿಶಾ ಜೊತೆ ಇರುವ ಈ ವ್ಯಕ್ತಿಯ ಹೆಸರು ಸಿಡ್ನಿ ಸ್ಲೇಡನ್. ಕೀನ್ಯಾದ ಕುಮಾರ. ಹಾಗಂಥ ಸಿಡ್ನಿ ಕೀನ್ಯಾದಲ್ಲಿ ಇರಲ್ಲ. ಯಾಕೆಂದರೆ ಕೀನ್ಯಾದಲ್ಲಿಯೇ ಸಿಡ್ನಿ ಹುಟ್ಟಿದ್ದಾರೂ ಬೆಳೆದಿದ್ದೆಲ್ಲ ಚೆನ್ನೈನಲ್ಲಿ.

ಚೆನ್ನೈನ ಲಯೋಲಾ ಕಾಲೇಜಿನಲ್ಲಿ ವಿಷುವಲ್ ಕಮ್ಯುನಿಕೇಷನ್ ಅಧ್ಯಯನ ಮಾಡಿದ ಸಿಡ್ನಿ ಸ್ಲೇಡನ್ ಆ ನಂತರ ಫ್ಯಾಷನ್ ಡಿಸೈನಿಂಗ್ ವಿಭಾಗದಲ್ಲಿ ಇಟಲಿಯಲ್ಲಿ ಉನ್ನತ ಶಿಕ್ಷಣ ಪಡೆದರು. ಚೆನ್ನೈನ ಕ್ಯಾಥೆಡ್ರಲ್ ರಸ್ತೆಯಲ್ಲಿ ಇವರದ್ದೇ ಆದ ಸ್ವಂತ ಸ್ಟುಡಿಯೋ ಕೂಡ ಇದೆ.
ಫ್ಯಾಶನ್ ಪ್ರಪಂಚದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಸಿಡ್ನಿ ಸ್ಲೇಡನ್, ದಕ್ಷಿಣ ಭಾರತದ ಹೆಸರಾಂತ ಫ್ಯಾಶನ್ ಡಿಸೈನರ್ ಗಳಲ್ಲಿ ಒಬ್ಬರು. 2002ರಲ್ಲಿ ''ಫೈವ್ ಸ್ಟಾರ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಪರಿಚಯವಾದ ಸಿಡ್ನಿ ಸ್ಲೇಡನ್ ಇಲ್ಲಿಯವರೆಗೆ ಹಲವಾರು ಚಿತ್ರಗಳಿಗೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಆ ಪೈಕಿ ''ಚಂದ್ರಮುಖಿ''.. ''ಐಸ್''.. ''ನೆಂಜಿಲ್'' ''ಜಿಲ್ ಜಿಲ್''.. ''ಸಿಲಂಬಟ್ಟಂ''.. ''ಸಕ್ಕ ಪೋಡು ಪೋಡು ರಾಜ''.. ಪ್ರಮುಖವಾದವು.
ಪರಿಚಯವಾಗಿದ್ಹೇಗೆ..?
ಚಿತ್ರರಂಗಕ್ಕೆ ಬರುವ ಮೊದಲು ಅಂದರೆ ಸರಿ ಸುಮಾರು 24-25 ವರ್ಷಗಳ ಹಿಂದೆ ತ್ರಿಶಾ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುವ ಪ್ರಯತ್ನ ಮಾಡುತ್ತಿದ್ದರು. ಆ ಸಮಯದಲ್ಲಿ ಸಿಡ್ನಿ ಸ್ಲೇಡನ್ ಕೂಡ ಇದೇ ಮಾಡೆಲಿಂಗ್ ಪ್ರಪಂಚದಲ್ಲಿ ಫ್ಯಾಶನ್ ಡಿಸೈನರ್ ಆಗಿ ಅಂಬೆಗಾಲು ಇಡುತ್ತಿದ್ದರು. ಚೆನ್ನೈನಲ್ಲಿ ನಡೆದ ಒಂದು ಫ್ಯಾಶನ್ ಶೋನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾದರು.
ಅಲ್ಲಿಂದ ಶುರುವಾದ ಇವರ ಸ್ನೇಹ ಇವತ್ತು ಕೂಡ ಮುಂದುವರೆದಿದೆ. ತ್ರಿಶಾ ಅವರ ಏಳು-ಬೀಳುಗಳನ್ನು ಅತೀ ಹತ್ತಿರದಿಂದ ಕಂಡ ಕೆಲವೇ ಕೆಲವರಲ್ಲಿ ಒಬ್ಬರಾದ ಸಿಡ್ನಿ ಸ್ಲೇಡನ್ , ತ್ರಿಶಾ ಅವರ ''ಬಾಯ್ ಬೆಸ್ಟಿ''. ಧನುಷ್ ಅವರಂತಹ ಸ್ಟಾರ್ ಜೊತೆ ತ್ರಿಶಾ ಯಾವುದೇ ಖಾಸಗಿ ಪಾರ್ಟಿ ಮಾಡಲಿ ಅಥವಾ ಯಾವುದೇ ಕಾರ್ಯಕ್ರಮಕ್ಕೆ ತ್ರಿಶಾ ಹೋಗಲಿ ಅಲ್ಲಿ ಸಿಡ್ನಿ ಸ್ಲೇಡನ್ ಇರಲೇಬೇಕು ಎನ್ನುವ ಅಲಿಖಿತ ನಿಯಮ ಇದೆ. ಅಷ್ಟರ ಮಟ್ಟಿಗೆ ಇವರಿಬ್ಬರ ಸ್ನೇಹ ಗಟ್ಟಿಯಾಗಿದೆ.


Click it and Unblock the Notifications











