ಮಂಕಾದ ಕಾಲಿವುಡ್‌ಗೆ ಬೇಕಿದೆ ಗೆಲುವಿನ ಆಕ್ಸಿಜನ್; ಆ ಸಿನಿಮಾ ಮೇಲೆ ಎಲ್ಲರ ಕಣ್ಣು
ಒಂದ್ಕಾಲದಲ್ಲಿ ತಮಿಳು ಚಿತ್ರರಂಗದಲ್ಲಿ ಅದ್ಭುತ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಆದರೆ ಇತ್ತೀಚೆಗೆ ತಮಿಳು ಸಿನಿಮಾಗಳು ಸಪ್ಪೆ ಎನಿಸಿಕೊಂಡುಬಿಟ್ಟಿದೆ. ಪ್ಯಾನ್ ಇಂಡಿಯಾ ಪೈಪೋಟಿಯಲ್ಲಿ ಕೂಡ ತಮಿಳು ಸಿನಿಮಾಗಳು ಹಿಂದೆ ಉಳಿಯುತ್ತಿವೆ. 'ಲಿಯೋ' ರೀತಿಯ ಕೆಲ ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕಾಚಾರವೇ ಅನುಮಾನ ಹುಟ್ಟಿಸುತ್ತಿದೆ.
ಮೊದಲೆಲ್ಲಾ ಕಂಟೆಂಟ್ ಸಿನಿಮಾಗಳು ಅಂದ್ರೆ ತಮಿಳು ಚಿತ್ರರಂಗದತ್ತ ತಿರುಗಿ ನೋಡುವಂತಿತ್ತು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಮಲಯಾಳಂನಲ್ಲಿ ಅಂತಹ ಪ್ರಯತ್ನಗಳು ಹೆಚ್ಚು ಕಾಣಿಸುತ್ತಿದೆ. ಆಗೊಮ್ಮೆ ಈಗೊಮ್ಮೆ ಕನ್ನಡ ಹಾಗೂ ತೆಲುಗಿನಲ್ಲಿ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳು ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ತಮಿಳಿನಲ್ಲಿ ದೊಡ್ಡದಾಗಿ ಹಿಟ್ ಸಿನಿಮಾ 'ಜೈಲರ್' ಒಂದೇ ಎಂದರೆ ತಪ್ಪಾಗಲ್ಲ.

ಕಾಲಿವುಡ್ ಸ್ಟಾರ್ ನಟರು ಸಿನಿಮಾಗಳನ್ನು ಗೆಲ್ಲಿಸುವಲ್ಲಿ ವಿಫಲರಾಗುತ್ತಿದ್ದಾರೆ. 'ಜೈಲರ್' ಚಿತ್ರದ ಸಕ್ಸಸ್‌ನಲ್ಲಿ ಶಿವಣ್ಣ, ಮೋಹನ್ ಲಾಲ್ ಹಾಗೂ ಗೆಸ್ಟ್ ಅಪಿಯರೆನ್ಸ್ ಅನಿರುದ್ಧ್ ಮ್ಯೂಸಿಕ್ ಪ್ಲಸ್ ಆಗಿತ್ತು. ಇನ್ನುಳಿದಂತೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ತಮಿಳು ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ ಕೋವಿಡ್ ಸಮಯದಲ್ಲಿ 'ಸುರರೈ ಪೋಟ್ರು' ಸಿನಿಮಾ ನೇರವಾಗಿ ಓಟಿಟಿಗೆ ಬಂದು ಗೆದ್ದಿತ್ತು. ಅದ್ಯಾಕೋ ವಿಕ್ರಂ, ಅಜಿತ್, ಕಾರ್ತಿ, ಸಿಂಬು ಸಿನಿಮಾಗಳು ಮೊದಲಿನ ರೀತಿ ಸದ್ದು ಗದ್ದಲ ಮಾಡುತ್ತಿಲ್ಲ.
'ವಿಕ್ರಂ' ಸಿನಿಮಾ ಮೂಲಕ ಕಮಲ್ ಹಾಸನ್ ಕಂಬ್ಯಾಕ್ ಮಾಡಿದ್ದೇ ಸಮಾಧಾನಕರ ಸಂಗತಿ. ಇನ್ನು ಭಾರೀ ನಿರೀಕ್ಷೆ ಮೂಡಿಸಿದ್ದ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾ ಗೆಲ್ಲಲಿಲ್ಲ. ಕಾಲಿವುಡ್ 'ಬಾಹುಬಲಿ' ಎಂದೇ ಬಿಂಬಿತವಾಗಿದ್ದ ಈ ಸಿನಿಮಾ ದೊಡ್ಡಮಟ್ಟದಲ್ಲಿ ಜಾದೂ ಮಾಡಲಿಲ್ಲ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಆದರೆ ಈ ಹಾದಿಯಲ್ಲಿ ತಮಿಳು ಸಿನಿಮಾಗಳು ಕಮಾಲ್ ಮಾಡುತ್ತಿಲ್ಲ. ಬಾಲಿವುಡ್ ಬಳಿಕ ತೆಲುಗು, ಕನ್ನಡ ಸಿನಿಮಾಗಳು 1000 ಕೋಟಿ ರೂ. ಕ್ಲಬ್ ಸೇರಿದವು. ತಮಿಳಿನ ಯಾವುದೇ ಸಿನಿಮಾ ಈ ಟಾರ್ಗೆಟ್ ರೀಚ್ ಆಗುತ್ತಿಲ್ಲ.

ತಮಿಳಿನ ಸ್ಟಾರ್ ನಿರ್ದೇಶಕರು ಕೂಡ ಪರಭಾಷೆಯತ್ತ ಮುಖ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಜಮಾನ ಎನ್ನುವ ಕಾರಣಕ್ಕೆ ಬಾಲಿವುಡ್, ಟಾಲಿವುಡ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಜವಾನ್' ಸಿನಿಮಾ ಮೂಲದ ಅಟ್ಲಿ ಬಾಲಿವುಡ್‌ನಲ್ಲಿ ಗೆದ್ದರು. ಇದೀಗ ಅಲ್ಲು ಅರ್ಜುನ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇನ್ನು ಸೂಪರ್ ಹಿಟ್ ಸಿನಿಮಾಗಳ ಸರದಾರ ಶಂಕರ್ ಟಾಲಿವುಡ್ ಪ್ರವೇಶಿಸಿದ್ದಾರೆ. ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಜನಿಕಾಂತ್ ಒಬ್ಬೊಂಟಿಯಾಗಿ ಸಿನಿಮಾಗಳನ್ನು ಗೆಲ್ಲಿಸುವುದು ಕಷ್ಟ ಎನ್ನುವಂತಾಗಿದೆ. ಅದಕ್ಕೆ ತಾಜಾ ಉದಾಹರಣೆ ಪುತ್ರ ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಸೋಲು. ಇದೆಲ್ಲದರ ನಡುವೆ ದಳಪತಿ ವಿಜಯ್ ಪಾಲಿಟಿಕ್ಸ್ ಕಡೆ ಮುಖ ಮಾಡಿದ್ದಾರೆ. ಇನ್ನೆರಡು ಸಿನಿಮಾಗಳ ಬಳಿಕ ವಿಜಯ್ ಸಂಪೂರ್ಣವಾಗಿ ರಾಜಕೀಯರಂಗದಲ್ಲೇ ಗುರ್ತಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯಕ್ಕೆ ತಮಿಳು ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳನ್ನು ಕೊಡುತ್ತಾ ಬರುತ್ತಿರುವುದು ಸೂರ್ಯ ಹಾಗೂ ಧನುಷ್ ಮಾತ್ರ.
ಸೂರ್ಯ ನಟನೆಯ 'ಕಂಗುವ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸದ್ಯ ಚಿತ್ರದ ಪೋಸ್ಟರ್, ಟೀಸರ್‌ಗಳು ಬಿಡುಗಡೆಯಾಗಿ ನಿರೀಕ್ಷೆ ಮೂಡಿಸಿವೆ. ಈ ಫ್ಯಾಂಟಸಿ ಆಕ್ಷನ್ ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ 'ಕಂಗುವ' ಆರ್ಭಟ ನಡೆಯಲಿದೆ. ಸೂರ್ಯ ವಿಭಿನ್ನ ಅವತಾರಹಗಳನ್ನು ಪ್ರೇಕ್ಷಕರಿಗೆ ಥ್ರಿಲ್ ಕೊಡಲು ಬರುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ.


Click it and Unblock the Notifications










