ವಯಸ್ಸು 45 ದಾಟಿದ್ರು ಮದುವೆ ಆಗದ ವಿಶಾಲ್, ಅಂದು ಎಂಗೇಜ್‌ಮೆಂಟ್ ಮುರಿದು ಬಿದ್ದಿದ್ದೇಕೆ?
ತಮಿಳು ನಟ ವಿಶಾಲ್ ಆರೋಗ್ಯಸ್ಥಿತಿ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇತ್ತೀಚೆಗೆ ವೈರಲ್ ಫೀವರ್‌ನಿಂದ ಅವರು ಬಹಳ ಬಳಲಿದ್ದರು. 'ಮದಗಜರಾಜ' ಚಿತ್ರದ ಈವೆಂಟ್ ವೇಳೆ ವಿಶಾಲ್ ಅವರನ್ನು ನೋಡಿದವರಿಗೆ ಶಾಕ್ ಆಗಿತ್ತು. ಮೈ ನಡುಗಿ ಮೈ ಹಿಡಿದು ಮಾತನಾಡಲು ಕಷ್ಟಪಟ್ಟಿದ್ದರು. ಡೆಂಗಿ ಜ್ವರದಿಂದ ಅವರು ಜರ್ಜರಿತರಾಗಿದ್ದರು ಎಂದು ಇತ್ತೀಚೆಗೆ ನಟಿ ಖುಷ್ಬೂ ಸ್ಪಷ್ಟಪಡಿಸಿದ್ದರು.
12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ 'ಮದಗಜರಾಜ' ಸಿನಿಮಾ ಬಹಳ ತಡವಾಗಿ ತೆರೆಗೆ ಬರ್ತಿದೆ. ಚಿತ್ರದ ಪ್ರಚಾರದಲ್ಲಿ ವಿಶಾಲ್ ಬ್ಯುಸಿಯಾಗಿದ್ದಾರೆ. ಇನ್ನು ಅವರು ಚಿತ್ರದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ತಮಿಳು ಗಾಯಕಿ ಸುಚಿತ್ರಾ ವಿಶಾಲ್ ಆರೋಗ್ಯ ಸ್ಥಿತಿ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ವಿಶಾಲ್ ಆರೋಗ್ಯದ ಕುರಿತು ಹರಿದಾಡುತ್ತಿರುವ ವದಂತಿ ಬಗ್ಗೆ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ವಿಶಾಲ್ ತಂದೆ ಜಿಕೆ ರೆಡ್ಡಿ ಕರ್ನಾಟಕ ಮೂಲದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಬಳಿಕ ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ತಾವೇ ಹೀರೊ ಆಗಬೇಕು ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆ ಆಸೆಯನ್ನು ಮಗನ ಮೂಲಕ ಈಡೇರಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ವಿಶಾಲ್ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ. ವಯಸ್ಸು 47 ದಾಟಿದ್ರು ಅವರು ಇನ್ನು ಮದುವೆ ಆಗಿಲ್ಲ.
ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಕೆಲ ನಟಿಯರ ಜೊತೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ಇನ್ನು ಈ ಹಿಂದೆ ಹಿರಿಯರು ನಿಶ್ಚಿಯಿಸಿ ಅನಿಶಾ ಅಲ್ಲಾ ರೆಡ್ಡಿ ಎಂಬಾಕೆಯ ಜೊತೆ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಇನ್ನೇನು ವಿಶಾಲ್ ಹೊಸ ಬಾಳಿಗೆ ಕಾಲಿಡುತ್ತಾರೆ ಎಂದುಕೊಳ್ಳುವ ವೇಳೆಗೆ ಎಂಗೇಜ್‌ಮೆಂಟ್ ಮುರಿದು ಬಿದ್ದಿತ್ತು.

2019ರ ಮಾರ್ಚ್‌ನಲ್ಲಿ ವಿಶಾಲ್ ಹಾಗೂ ಅನಿಶಾ ಮದುವೆ ಎಂಗೇಜ್‌ಮೆಂಟ್ ನಡೆದಿತ್ತು. ಹೈದರಾಬಾದ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎರಡೂ ಕುಟುಂಬ ಸದಸ್ಯರ ಜೊತೆಗೆ ಆಪ್ತರು ಭಾಗಿ ಆಗಿದ್ದರು. ಅದಕ್ಕೂ ಮುನ್ನ ಅನಿಶಾ ತಮ್ಮ ಬಾಳ ಸಂಗಾತಿ ಆಗುತ್ತಾರೆ ಎಂದು ಟ್ವೀಟ್ ಮಾಡಿ ವಿಶಾಲ್ ಮಾಹಿತಿ ನೀಡಿದ್ದರು. ಇವತ್ತಿಗೂ ಆ ಟ್ವೀಟ್ ಇದೆ. ಅನಿಶಾ ಕೂಡ ಇದನ್ನು ಖಚಿತಪಡಿಸಿ ಪೋಸ್ಟ್ ಮಾಡಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಮದುವೆ ನಡೆಯುತ್ತದೆ ಎನ್ನಲಾಗಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಶಾಲ್ ನಮ್ಮಿಬ್ಬರದ್ದು ಅರೇಂಜ್ಡ್ ಮ್ಯಾರೇಜ್ ಅಲ್ಲ. ನಾವಿಬ್ಬರು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗುತ್ತಿದ್ದೇವೆ ಎಂದಿದ್ದರು. ಆದರೆ ಇದ್ದಕ್ಕಿದಂತೆ ಅನಿಶಾ ಇನ್‌ಸ್ಟಾಗ್ರಾಮ್‌ನಲ್ಲಿದ್ದ ತಮ್ಮ ಎಂಗೇಜ್‌ಮೆಂಟ್ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಹಾಗಾಗಿ ಇಬ್ಬರ ಮದುವೆ ಆಗಲ್ಲ ಎನ್ನುವ ಗುಸುಗುಸು ಶುರುವಾಗಿತ್ತು. ಬಳಿಕ ಅದು ನಿಜವೇ ಆಯಿತು. ಕೆಲ ಭಿನ್ನಾಭಿಪ್ರಾಯಗಳಿಂದ ಈ ನಿರ್ಧಾರಕ್ಕೆ ಬಂದರು ಎನ್ನಲಾಗಿತ್ತು.
ಹೈದರಾಬಾದ್ ಮೂಲದ ಅನಿಶಾ ಅಲ್ಲಾ ಬ್ಯಾಸ್ಕೆಟ್ ಬಾಲ್ ಪ್ಲೇಯರ್. ತೆಲುಗಿನ 'ಅರ್ಜುನ್ ರೆಡ್ಡಿ' ಹಾಗೂ 'ಪೆಳ್ಳಿ ಚೂಪುಲು' ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ಕೂಡ ವಿಶಾಲ್ ಮದುವೆ ಬಗ್ಗೆ ಸಾಕಷ್ಟು ಊಹಾಪೋಹ ಶುರುವಾಯಿತು. ಆದರೆ ಅದು ನಿಜವಾಗಲಿಲ್ಲ. ಸದ್ಯ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.
ಸುಂದರ್. ಸಿ ನಿರ್ದೇಶನದ 'ಮದಗಜರಾಜ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 12ಕ್ಕೆ ತೆರೆಗೆ ಬರುತ್ತಿದೆ. 12 ವರ್ಷಗಳ ಹಿಂದಿನ ಸಿನಿಮಾ ಈಗ ಪ್ರೇಕ್ಷಕರನ್ನು ರಂಜಿಸುತ್ತಾ ಎನ್ನುವ ಪ್ರಶ್ನೆಯೂ ಮೂಡಿದೆ. ಇನ್ನು 'ತುಪ್ಪಾರಿವಾಲನ್'-2 ಚಿತ್ರವನ್ನು ನಿರ್ದೇಶಿಸಿ ವಿಶಾಲ್ ನಟಿಸುತ್ತಿದ್ದಾರೆ.


Click it and Unblock the Notifications











