ಸ್ಟಾರ್ ನಟನ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ನರ್ಸ್
ತಮಿಳಿನ ಸೂಪರ್ ಸ್ಟಾರ್ ನಟ ಅಜಿತ್‌ರ ಚೆನ್ನೈನ ಮನೆಯ ಮುಂದೆ ನರ್ಸ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಫರ್ಜಾನಾ ಹೆಸರಿನ ಮಹಿಳೆ ಇಂದು ಏಕಾಏಕಿ ಅಜಿತ್ ಮನೆಯ ಮುಂದೆ ಬಂದು ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲಿದ್ದವರು ಆಕೆಯನ್ನು ರಕ್ಷಿಸಿದ್ದಾರೆ.
ಫರ್ಜಾನಾಳ ವರ್ತನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಫರ್ಜಾನಾ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆ ಆಸ್ಪತ್ರೆಗೆ ನಟ ಅಜಿತ್ ಹಾಗೂ ಪತ್ನಿ ಶಾಲಿನಿ ಭೇಟಿ ನೀಡಿದ್ದರು. ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ ಫರ್ಜಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಕ್ಕಾಗಿ ಫರ್ಜಾನಾ ಅನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿತ್ತು.
ಕೆಲಸ ಕಳೆದುಕೊಂಡಿದ್ದ ಫರ್ಜಾನಾ, ನಟ ಅಜಿತ್ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಆದರೆ ನಟ ಅಜಿತ್ ಸಹಾಯ ಮಾಡಲು ನಿರಾಕರಿಸಿದ್ದರು. ಇದರಿಂದ ಹತಾಶೆಗೊಂಡಿದ್ದ ಫರ್ಜಾನಾ ಇಂದು ಅಜಿತ್ ಮನೆಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಟ ಅಜಿತ್ ತಮ್ಮ ವಿಡಿಯೋಗಳನ್ನು ಚಿತ್ರೀಕರಿಸುವುದನ್ನು, ತಮ್ಮೊಂದಿಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಆಗಮಿಸಿದಾಗ ಅಜಿತ್ ಫೋಟೊ ತೆಗೆದ ಅಭಿಮಾನಿಯೊಬ್ಬನ ಮೊಬೈಲ್ ಅನ್ನು ಕಸಿದುಕೊಂಡಿದ್ದರು ಅಜಿತ್. ಆ ವಿಡಿಯೋ ಬಹಳ ವೈರಲ್ ಆಗಿತ್ತು. ಖಾಸಗಿ ಜೀವನ ಖಾಸಗಿಯಾಗಿಯೇ ಇರಲು ಬಯಸುತ್ತಾರೆ ಅಜಿತ್. ಹಾಗಾಗಿ ಸಿನಿಮಾ ಚಿತ್ರೀಕರಣದ ಹೊರತಾಗಿ ಬೇರೆ ಕಾರ್ಯಕ್ರಮಗಳಲ್ಲಿ ಅಜಿತ್ ಕಾಣಿಸಿಕೊಳ್ಳುವುದಿಲ್ಲ.
ಅಜಿತ್ ನಟನೆಯ 'ವಾಲಿಮೈ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅಜಿತ್ ಎದುರು ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ. ಬೋನಿ ಕಪೂರ್ ನಿರ್ಮಾಣದ ಈ ಸಿನಿಮಾವನ್ನು ಎಚ್.ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಮುಂದಿನ ವರ್ಷ ಜನವರಿ 14 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











