ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಲು ಯಶ್ ಹಣ ನೀಡಿದ್ದ ವಿಚಾರ ಬಿಚ್ಚಿಟ್ಟ ನಟ ಡೇನಿಯಲ್ ಬಾಲಾಜಿ!
ಪ್ರಸ್ತುತ ಭಾರತ ಚಿತ್ರರಂಗದ ಸ್ಟಾರ್ ನಟರು ಯಾರು ಎಂದರೆ ಬರುವ ಕೆಲ ಹೆಸರುಗಳಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರದ್ದೂ ಸಹ ಒಂದು. ಕನ್ನಡದ ಹಾಸ್ಯ ಧಾರಾವಾಹಿಯಲ್ಲಿ ಸೈಡ್ ರೋಲ್ ಮಾಡುತ್ತಿದ್ದ ಯಶ್ ಇಂದು ಇಂಡಿಯನ್ ಬಾಕ್ಸ್ ಆಫೀಸ್ ಸಿಇಒ ಆಗಿ ಮಿಂಚುತ್ತಿದ್ದಾರೆ. ಧಾರಾವಾಹಿಯಿಂದ ಚಿತ್ರರಂಗಕ್ಕೆ ಕಾಲಿಟ್ಟು ಚಿತ್ರರಂಗದಲ್ಲಿ ಬೇರೂರಲು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸಿದ ಯಶ್ ಅವರನ್ನು ಅವರ ಟ್ಯಾಲೆಂಟ್ ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಅದರಲ್ಲಿಯೂ ಯಶ್ ಕಂಡ ಕೆಜಿಎಫ್ ಎಂಬ ಸಿನಿಮಾದ ಪ್ಯಾನ್ ಇಂಡಿಯಾ ಕನಸನ್ನು ನನಸು ಮಾಡಿ ಬೃಹತ್ ಗೆಲುವನ್ನು ಸಾಧಿಸಿದ್ದು, ಇದೀಗ ಯಶ್ ತಮ್ಮ ಮುಂದಿನ ಚಿತ್ರವನ್ನು ಯಾವಾಗ ಘೋಷಿಸಲಿದ್ದಾರೆ ಎಂದು ಇಡೀ ದೇಶವೇ ಕಾಯುತ್ತಿದೆ. ಇಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಯಶ್ ಎಷ್ಟೇ ಮೇಲೇರಿದರೂ ಸಹ ತಾವು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಇಂದಿಗೂ ಸಹ ತಮ್ಮ ಹಳೆ ಸ್ನೇಹಿತರನ್ನ ಮರೆತಿಲ್ಲ, ಯಶೋಮಾರ್ಗ ಫೌಂಡೇಷನ್ ಅಡಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಮರೆತಿಲ್ಲ.

ಹೌದು, ಯಶ್ ಸಿನಿಮಾದಲ್ಲಿ ಹೇಗೆ ಸಾಧನೆ ಮಾಡಿ ದೊಡ್ಡ ಹೆಸರು ಮಾಡಬೇಕು, ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಹಾತೊರೆಯುತ್ತಾರೋ ಅಷ್ಟೇ ಮಟ್ಟಕ್ಕೆ ಇತರರಿಗೆ ಸಹಾಯ ಮಾಡಬೇಕು, ಕಷ್ಟದಲ್ಲಿರುವ ಹಾಗೂ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಬೇಕು ಎಂಬ ಮನಸ್ಸಿರುವಂತಹ ಒಳ್ಳೆಯ ವ್ಯಕ್ತಿ ಕೂಡ ಹೌದು. ಯಶ್ ಈಗಾಗಲೇ ಹಲವಾರು ಸಹಾಯಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಕೆಲವು ಹೊರಗೆ ಬಂದಿವೆ ಹಾಗೂ ಇನ್ನೂ ಕೆಲವು ಎಲ್ಲಿಯೂ ಸುದ್ದಿಯಾಗದೇ ಹಾಗೆಯೇ ಉಳಿದುಬಿಟ್ಟಿವೆ.
ಹೀಗೆ ಎಲ್ಲಿಯೂ ಸುದ್ದಿಯಾಗದೇ ಉಳಿದಿರುವ ವಿಷಯಗಳ ಪೈಕಿ ಯಶ್ ತಮಿಳುನಾಡಿನ ದೇವಸ್ಥಾನವೊಂದರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದೂ ಕೂಡ ಒಂದು. ಹೌದು, ನಾಲ್ಕು ವರ್ಷಗಳ ಹಿಂದೆ ಯಶ್ ತಮಿಳುನಾಡಿನ ದೇವಸ್ಥಾನ ನಿರ್ಮಾಣಕ್ಕೆ ಹಣ ದೇಣಿಗೆ ನೀಡಿದ್ದ ವಿಚಾರ ಈಗ ಬಹಿರಂಗವಾಗಿದೆ. ಕಿರಾತಕ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ತಮಿಳು ನಟ ಡೇನಿಯಲ್ ಬಾಲಾಜಿ ಯುಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾಗ ಮಾತನಾಡಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
"ನಾಲ್ಕು ವರ್ಷಗಳ ಹಿಂದೆ ಕನ್ನಡದ ಚಿತ್ರವೊಂದರಲ್ಲಿ ನಟಿಸುವ ಆಫರ್ ತಿಳಿಸಲು ನನಗೆ ಕರೆ ಮಾಡಿದ್ದರು. ಆದರೆ ನಾನು ಇನ್ನೂ 20 ದಿನಗಳ ಕಾಲ ನನಗೊಂದು ಸಣ್ಣ ಕೆಲಸವಿದೆ ಎಂದು ಹೇಳಿದ್ದೆ. ಏನು ಕೆಲಸ ಎಂದು ಅವರು ಕೇಳಿದರು. ದೇವಸ್ಥಾನವೊಂದನ್ನು ನಿರ್ಮಿಸುತ್ತಿದ್ದೇನೆ, ಅದು ಮುಗಿಯುವವರೆಗೂ ನಾನು ಎಲ್ಲಿಗೂ ಬರಲು ಆಗುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ಯಶ್ ನನಗೆ ಒಳ್ಳೆದಾಗಲಿ ಎಂದು ಶುಭ ಕೋರಿದರು. ಕೆಲವೇ ಸೆಕೆಂಡುಗಳಲ್ಲಿ ನನಗೆ ಮೆಸೇಜ್‌ಗಳು ಬಂದವು. ಕರೆಯನ್ನು ಸ್ಪೀಕರ್‌ಗೆ ಯಾವ ಮೆಸೇಜ್ ಎಂದು ನೋಡಿದರೆ ಯಶ್ ಹಣ ಕಳುಹಿಸಿದ್ದರು. ಅರೇ ಇನ್ನೂ ಪ್ರೊಡಕ್ಷನ್ ಬಗ್ಗೆಯೇ ಮಾತನಾಡಿಲ್ಲ, ಈಗಲೇ ಅಡ್ವಾನ್ಸ್ ಹಾಕಿದ್ದೀರಲ್ಲ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಯಶ್ ಇದು ನಿಮ್ಮ ದೇವಸ್ಥಾನಕ್ಕೆ ನಾನು ಕೊಡುತ್ತಿರುವ ದೇಣಿಗೆ ಎಂದರು" ಎಂದು ಹೇಳಿಕೆ ನೀಡಿ ಯಶ್ ದೇವಸ್ಥಾನ ನಿರ್ಮಾಣಕ್ಕೆ ಮಾಡಿದ ಧನಸಹಾಯವನ್ನು ನೆನೆದರು.

ಸದ್ಯ ಡೇನಿಯಲ್ ಬಾಲಾಜಿ ಬಿಚ್ಚಿಟ್ಟಿರುವ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯಶ್ ಮಾಡಿದ ಸಹಾಯ ಕಂಡ ಸಿನಿ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











