14 Years For Magadheera: ಚಿತ್ರ ಒಟ್ಟು ಎಷ್ಟು ಗಳಿಕೆ ಮಾಡಿತ್ತು, ಕರ್ನಾಟಕದಲ್ಲಿ ಸಿನಿಮಾ ಮಾಡಿದ್ದ ಕಲೆಕ್ಷನ್ ಎಷ್ಟು?
ನಿನ್ನೆಗೆ ( ಜುಲೈ 30 ) ತೆಲುಗಿನ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾ ಮಗಧೀರ ಬಿಡುಗಡೆಗೊಂಡು ಬರೋಬ್ಬರಿ 14 ವರ್ಷಗಳು ತುಂಬಿವೆ. ನಿರ್ದೇಶಕ ರಾಜಮೌಳಿ ಹೆಸರು ದೇಶವ್ಯಾಪಿ ಅತಿದೊಡ್ಡ ಮಟ್ಟದಲ್ಲಿ ಹರಡಲು ಕಾರಣವಾದ ಈ ಸಿನಿಮಾ ಅನೇಕ ಸಿನಿ ರಸಿಕರ ಫೇವರಿಟ್. ಮಾಡರ್ನ್ ಡೇ ಲವ್ ಸ್ಟೋರಿಗೆ ಹಳೆಯ ರಾಜ ಮನೆತನದ ಕಥೆಯ ಲಿಂಕ್ ನೀಡಿದ್ದ ರಾಜಮೌಳಿ ಎರಡನ್ನೂ ಅಚ್ಚುಕಟ್ಟಾಗಿ ಬೆಸೆದು ಟ್ರೆಂಡ್ ಸೆಟ್ ಮಾಡಿ ಗೆದ್ದಿದ್ದರು.
ಇನ್ನು ಚಿರುತ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಟಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ನಟನೆಯ ಎರಡನೇ ಚಿತ್ರವಾದ ಮಗಧೀರ ನಟನಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು ಹಾಗೂ ಸ್ಟಾರ್ ಪಟ್ಟವನ್ನೂ ಸಹ ತಂದುಕೊಟ್ಟಿತ್ತು. ರಾಮ್ ಚರಣ್ ಅಭಿನಯಕ್ಕೆ ಫಿದಾ ಆದ ಅನೇಕರು ಅಭಿಮಾನಿಗಳಾಗಿ ಪರಿವರ್ತನೆಗೊಂಡಿದ್ದರು.

ಹೀಗೆ ಕಂಟೆಂಟ್ ವಿಚಾರವಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಮಗಧೀರ ಚಿತ್ರ ಬಾಕ್ಸ್ ಆಫೀಸ್‌ನಲ್ಲಿಯೂ ಸಹ ಅಬ್ಬರದ ಗಳಿಕೆ ಮಾಡಿತ್ತು. ಹೌದು, ಜುಲೈ 30 2009ರಂದು ಬಿಡುಗಡೆಗೊಂಡಿದ್ದ ಮಗಧೀರ ಅದಕ್ಕೂ ಮುನ್ನ ತೆಲುಗು ಚಿತ್ರರಂಗದಲ್ಲಿ ದಾಖಲಾಗಿದ್ದ ಎಲ್ಲಾ ಚಿತ್ರಗಳ ಗಳಿಕೆ ದಾಖಲೆಯನ್ನು ಮುರಿದು ಹಾಕಿ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತ್ತು.
ಈ ರೀತಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಮಗಧೀರ ಸಿನಿಮಾದ 14 ವರ್ಷಗಳ ವಾರ್ಷಿಕೋತ್ಸವವನ್ನು ನಿನ್ನೆ ರಾಮ್ ಚರಣ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಆಚರಿಸಿದ್ದಾರೆ. ಈ ವಿಶೇಷ ದಿನದಂದು ಚಿತ್ರ ಮಾಡಿದ ದಾಖಲೆ ಮತ್ತು ಕಲೆಕ್ಷನ್ ಬಗ್ಗೆ ಹೆಚ್ಚು ಚರ್ಚೆಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಿ ನಡೆದ ಈ ಚರ್ಚೆಯಲ್ಲಿ ಮಗಧೀರ ಚಿತ್ರ ವಿಶ್ವದಾದ್ಯಂತ ಎಷ್ಟು ಗಳಿಕೆ ಮಾಡಿತ್ತು ಹಾಗೂ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 94.15 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದ್ದ ಮಗಧೀರ ಸಿನಿಮಾ ತಮಿಳು ನಾಡಿನಲ್ಲಿ 8.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು, ಕೇರಳದಲ್ಲಿ 1.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು, ದೇಶದ ಉಳಿದ ಭಾಗದಲ್ಲಿ 1.20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು, ವಿದೇಶದಲ್ಲಿ 16.20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಮತ್ತು ಕರ್ನಾಟಕದಲ್ಲಿ ಬರೋಬ್ಬರಿ 11.10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಹೀಗೆ ಒಟ್ಟು ವಿಶ್ವದಾದ್ಯಂತ ಮಗಧೀರ 132.65 ಕೋಟಿ ರೂಪಾಯಿ ಗಳಿಕೆಯನ್ನು ಮಾಡಿತ್ತು. ಹೀಗೆ ಅಂದು ಅಬ್ಬರಿಸಿದ್ದ ಮಗಧೀರ ತೆಲುಗು ರಾಜ್ಯಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಅನ್ನು ಮಾಡಿದ ದಾಖಲೆ ಬರೆದಿತ್ತು.


Click it and Unblock the Notifications











