ವಿಚಿತ್ರ ಬೇಡಿಕೆಯಿಟ್ಟ ಯುವತಿಯರು; ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ ಹೇಳಿದ್ದೇನು?
ಸೋಶಿಯಲ್ ಮೀಡಿಯಾ ಬಂದಮೇಲೆ ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುವುದು ಬಹಳ ಸುಲಭ ಆಗಿಬಿಟ್ಟಿದೆ. ನೆಚ್ಚಿನ ನಟ, ನಟಿಯರನ್ನು ಪ್ರಶ್ನೆ ಕೇಳುವುದು, ತಮ್ಮ ಅಭಿಮಾನ ವ್ಯಕ್ತಪಡಿಸಲು ಇದು ಸುಲಭ ಮಾರ್ಗವಾಗಿಬಿಟ್ಟಿದೆ.
ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಯುವಜನತೆಯಲ್ಲಿ ಆತನ ಬಗ್ಗೆ ಕ್ರೇಜ್ ಇದೆ. ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡ ಜಾಸ್ತಿನೇ ಇದೆ. ಇನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ನೆಚ್ಚಿನ ನಟ, ನಟಿಯರ ಬಳಿ ಚಿತ್ರ ವಿಚಿತ್ರ ಬೇಡಿಕೆಗಳನ್ನು ಇಡುವುದನ್ನು ನೋಡುತ್ತಿರುತ್ತೇವೆ.

ಸದ್ಯ ಇಬ್ಬರು ವಿದ್ಯಾರ್ಥಿನಿಯರು ನಟ ವಿಜಯ್ ದೇವರಕೊಂಡ ಗಮನ ಸೆಳೆಯಲು ಮಾಡಿರುವ ವಿಡಿಯೋ ಪೋಸ್ಟ್ ವೈರಲ್ ಆಗಿದೆ. ಅಚ್ಚರಿ ಎಂದರೆ ಈ ವಿಡಿಯೋ ನೋಡಿ 'ಲೈಗರ್' ನಟ ಪ್ರತಿಕ್ರಿಯಿಸಿದ್ದಾರೆ. ನಮ್ಮ ಈ ಪೋಸ್ಟ್‌ಗೆ ವಿಜಯ್ ದೇವರಕೊಂಡ ಕಾಮೆಂಟ್ ಮಾಡಿದರೆ ಮಾತ್ರ ನಾವು ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಹುಡುಗಿಯರು ಹಾಕಿರುವ ಪೋಸ್ಟ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇದೆಂಥ ಬೇಡಿಕೆ ಎಂದು ಹುಬ್ಬೇರಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮ್ಮ ವೀಡಿಯೊ ನೋಡಿ ನಿಜಕ್ಕೂ ವಿಜಯ್ ಕಾಮೆಂಟ್ ಮಾಡ್ತಾರಾ? ಅಷ್ಟೆಲ್ಲಾ ಸೀನ್ ಇದ್ಯಾ? ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಆದರೆ ಖುದ್ದು ವಿಜಯ್ ಈ ಪೋಸ್ಟ್ ರಿಪ್ಲೇ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪರೀಕ್ಷೆಯಲ್ಲಿ 90% ಅಂಕ ಗಳಿಸಿದರೆ ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ವಿಜಯ್ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಸಿನಿಮಾಗಳ ವಿಚಾರಕ್ಕೆ ಬಂದರೆ 'ಲೈಗರ್' ಸಿನಿಮಾದಿಂದ ಭಾರೀ ಹಿನ್ನಡೆ ಅನುಭವಿಸಿದ್ದರು. ಮತ್ತೆ ಕಂಬ್ಯಾಕ್ ಮಾಡಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. 'ಫ್ಯಾಮಿಲಿ ಸ್ಟಾರ್' ಎನ್ನುವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೃಣಾಲ್ ಠಾಕೂರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಏಪ್ರಿಲ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ.
ದೇವರಕೊಂಡ ನಟನೆಯ 12ನೇ ಸಿನಿಮಾ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ಪೊಲೀಸ್ ಆಫಿಸರ್ ಆಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಚಿತ್ರಕ್ಕೆ ಕನ್ನಡ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆಯಿದೆ. ಇನ್ನು 'ಲೈಗರ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎನ್ನುವ ವಿಜಯ್ ಕನಸು ನುಚ್ಚು ನೂರಾಗಿತ್ತು.
ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾ ಪ್ಯಾನ್ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡು ನಿರಾಸೆ ಮೂಡಿಸಿತ್ತು. ದೊಡ್ಡಮಟ್ಟದಲ್ಲಿ ಸಿನಿಮಾ ನಷ್ಟ ತಂದೊಡ್ಡಿತ್ತು. ನಿರ್ದೇಶಕನಾಗಿ ಮಾತ್ರವಲ್ಲದೇ ಪೂರಿ ಜಗನ್ನಾಥ್ ನಿರ್ಮಾಪಕರಾಗಿಯೂ ಆ ಸಿನಿಮಾದಲ್ಲಿ ಸೋತಿದ್ದರು.
ವಿಜಯ್ ದೇರವಕೊಂಡ ಸಿನಿಕರಿಯರ್‌ಗೂ 'ಲೈಗರ್' ದೊಡ್ಡ ಪೆಟ್ಟು ಕೊಟ್ಟಿದ್ದು ಸುಳ್ಳಲ್ಲ. 'ಅರ್ಜುನ್ ರೆಡ್ಡಿ' ಸಿನಿಮಾ ಮಾಡಿ ವಿಜಯ್ ದೇವರಕೊಂಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆ ಸಿನಿಮಾ ಹೊಸ ದಾಖಲೆ ಬರೆದಿತ್ತು. ಬಳಿಕ ರಶ್ಮಿಕಾ ಮಂದಣ್ಣ ಜೊತೆ 'ಗೀತಾ ಗೋವಿಂದಂ' ಕಾಣಿಸಿಕೊಂಡು ಗೆದ್ದರು. ಈ ಎರಡೂ ಸಿನಿಮಾಗಳ ಬಳಿಕ ದೊಡ್ಡ ಸಕ್ಸಸ್ ವಿಜಯ್‌ಗೆ ಸಿಗಲಿಲ್ಲ.


Click it and Unblock the Notifications











