ಅಲ್ಲು ಅರ್ಜುನ್ ಜೊತೆ 'ಪುಷ್ಪಾ' ಮಾಡಿದ್ದು ನನ್ನ ಬದುಕಿನ ದೊಡ್ಡ ತಪ್ಪು - ಪಶ್ಚಾತಾಪದ ಬೇಗೆಯಲ್ಲಿ ಕಣ್ಣೀರಾದ ನಟಿ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬರುವ ಹಲವರಲ್ಲಿ ಬೆಳ್ಳಿಪರದೆಯ ಮೇಲೆ ಮಿಂಚಬೇಕೆನ್ನುವ ಆಸೆ ಇರುತ್ತೆ. ಜನರ ಮನದಲ್ಲಿ ಉಳಿಯುವಂತಹ ಪಾತ್ರಗಳನ್ನು ನಿರ್ವಹಿಸಬೇಕೆನ್ನುವ ಕನಸು ಇರುತ್ತೆ. ದೊಡ್ಡ ದೊಡ್ಡವರ ಜೊತೆ ಕೆಲಸ ಮಾಡಬೇಕೆಂಬ ಉಮೇದಿ ಇರುತ್ತೆ.
ಹಾಗಂಥ ಎಲ್ಲರಿಗೆ ಇಲ್ಲಿ ಅವಕಾಶಗಳ ಬಾಗಿಲು ತೆರೆಯುವುದಿಲ್ಲ. ತೆರೆದಾಗ ಖುಷಿಗೆ ಪಾರವೇ ಇರಲ್ಲ. ಆದರೆ ಕೆಲ ಒಮ್ಮೆ ಈ ಸಂಭ್ರಮ-ಸಡಗರಕ್ಕೆ ಕೂಡ ಕಣ್ಣು ಬೀಳುತ್ತೆ. ಅವಕಾಶ ಸಿಕ್ಕರೂ ಕೂಡ ಅಂದುಕೊಂಡಂತೆ ಮಿಂಚಲು ಸಾಧ್ಯವಾಗುವುದಿಲ್ಲ. ಬದಲಿಗೆ ಪಶ್ಚಾತಾಪ ಕಾಡಲು ಶುರುವಾಗುತ್ತೆ. ಉದಾಹರಣೆಗೆ ದಿವಿ ವಡತ್ಯಾ ಅವರನ್ನೇ ತೆಗೆದುಕೊಳ್ಳಿ.

ಹೌದು, ದಿವ್ಯಾ ವಡತ್ಯಾ.. ಹೈದರಾಬಾದ್‌ನ ಹುಡುಗಿ. ಮಾಡೆಲಿಂಗ್‌ನಲ್ಲಿ ಮಿಂಚುತ್ತಲೇ ಚಿತ್ರರಂಗಕ್ಕೆ ಬಂದ ಸುರ ಸುಂದರಿ. ಮಹೇಶ್ ಬಾಬು ಅಭಿನಯದ ''ಮಹರ್ಷಿ'' ಇವರ ಮೊದಲ ಚಿತ್ರ. ತೆಲುಗು ''ಬಿಗ್ ಬಾಸ್''ನ ನಾಲ್ಕನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ದಿವ್ಯಾ ಹೆಚ್ಚು ಕಡಿಮೆ 7 ವಾರ ಮನೆಯಲ್ಲಿದ್ದರು.
ಇಂಥಾ ದಿವಿ ''ಪುಷ್ಪಾ 2'' ಚಿತ್ರದಲ್ಲಿ ನಾನು ಆಕ್ಟ್ ಮಾಡಬಾರದಿತ್ತು ಎಂದು ಹೇಳಿದ್ಧಾರೆ. ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳುವ ಆಸೆಯಲ್ಲಿ ಬಹುದೊಡ್ಡ ತಪ್ಪು ಮಾಡಿದೆ ಎಂದು ಭಾವುಕರಾಗಿದ್ದಾರೆ.
ಈ ಕುರಿತು ''ವಿಶುವಲ್ ಟಾಕ್ಸ್'' ಪಾಡ್‌ಕಾಸ್ಟ್‌ನಲ್ಲಿ, ಈ ಕುರಿತು ಮಾತನಾಡಿರುವ ದಿವಿ ನನಗೆ ಅವರು ಹೇಳಿದ್ದೇ ಒಂದು, ಅವರು ಮಾಡಿದ್ಧೇ ಒಂದು ಎಂದು ಹೇಳಿದ್ದಾರೆ. ನನಗೆ ಆ ಚಿತ್ರದ ಅವಕಾಶ ಬಂದಾಗ ನನ್ನದು ಬಹುಮುಖ್ಯವಾದ ಪಾತ್ರ ಎಂದು ಹೇಳಲಾಗಿತ್ತು, ಇದಕ್ಕೆ ಪೂರಕವಾಗಿ ಪುಷ್ಪಾ ಎಲ್ಲಿ ? ಎಂಬ ನನ್ನ ಡೈಲಾಗ್ ಕೂಡ ಇತ್ತು ಎಂದು ಹೇಳಿರುವ ದಿವಿ ವಡತ್ಯಾ ಟೀಸರ್ ನಲ್ಲಿ ನನ್ನ ಪಾತ್ರವನ್ನು ತೋರಿಸಿದ್ದ ಹಿನ್ನೆಲೆ ನನ್ನ ನಿರೀಕ್ಷೆಗಳು ಇನ್ನೂ ಹೆಚ್ಚಾಗಿದ್ದವು ಎಂದು ಹೇಳಿದ್ದಾರೆ.
''ಪುಷ್ಪಾ 2'' ಚಿತ್ರಕ್ಕೆ ನಾನು 20 ದಿನ ಶ್ರಮ ಹಾಕಿದ್ದೆ, ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ, ಇನ್ನೂ ಪಾತ್ರಕ್ಕೆ ಜೀವ ತುಂಬಲು ಹತ್ತು ದಿನ ವ್ಯರ್ಥ ಮಾಡಿದ್ದೆ ಎಂದು ಹೇಳಿರುವ ದಿವಿ ವಡತ್ಯಾ, ನನ್ನ ಪಾತ್ರ ಚೆನ್ನಾಗಿ ಮೂಡಿ ಬಂದಿರುತ್ತೆ ಎಂಬ ಭ್ರಮೆಯಲ್ಲಿ ನನ್ನ ಹತ್ತು ಜನ ಸ್ನೇಹಿತರನ್ನು ಬೇರೆ ಚಿತ್ರ ಬಿಡುಗಡೆಯಾದಾಗ ಚಿತ್ರಮಂದಿರಕ್ಕೆ ಕರೆದೊಯ್ದಿದ್ದೆ ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಸ್ನೇಹಿತರ ಎದುರು ನನಗೆ ತುಂಬಾನೇ ಮುಜುಗರವಾಯ್ತು ಎಂದು ಹೇಳಿರುವ ದಿವಿ, ತೆರೆಯ ಮೇಲೆ ನನ್ನ ಪಾತ್ರ ಕಾಣದಿದ್ದಾಗ ನನಗೆ ತುಂಬಾ ಆಘಾತವಾಯ್ತು ಎಂದು ಹೇಳಿದ್ಧಾರೆ. ನನ್ನ ನೋವಿನ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ನಾವೇ ನಮ್ಮನ್ನು ಸಮಾಧಾನ ಮಾಡಿಕೊಂಡು ಮುಂದೆ ಸಾಗಬೇಕು. ಸಿನಿಮಾ ನೋಡಿದ ಮೇಲೆ ನನಗೆ ತುಂಬಾ ದುಃಖವಾಯಿತು ಎಂದು ಭಾವುಕರಾಗಿದ್ಧಾರೆ.
ಸದ್ಯ ದಿವಿ ಅವರ ಈ ಹೇಳಿಕೆ ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕರೂ ಕೂಡ ಆ ನಂತರ ಆ ಪಾತ್ರಕ್ಕೆ ಹೇಗೆ ಕತ್ತರಿ ಹಾಕಲಾಗುತ್ತೆ ಎನ್ನುವುದಕ್ಕೆ ದಿವಿ ನಿರ್ವಹಿಸಿದ್ದ ಟಿವಿ ವರದಿಗಾರ್ತಿ ಮಿನ್ನು ಉಮಾ ದೇವಿ ಪಾತ್ರವೇ ಅತ್ಯುತ್ತಮ ಉದಾಹರಣೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದು ಚಿತ್ರದ ಹಿಂದೆ ಇಂತಹ ಹತ್ತಾರು ಕಥೆ ಮತ್ತು ವ್ಯಥೆಗಳಿರುತ್ತಾವೆ ಆದರೆ ಅವೆಲ್ಲವೂ ಹೊರ ಜಗತ್ತಿಗೆ ಕಾಣಿಸುವುದಿಲ್ಲ ಅಷ್ಟೇ ಎಂಬ ಮಾತು ಕೂಡ ಸದ್ಯ ಹೈದರಾಬಾದ್ ನಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











