'ರಾಕಿಭಾಯ್' ನಾಯಿ ಎಂದಿದ್ದ ವೆಂಕಟೇಶ್‌ಗೆ ಕೆಜಿಎಫ್ ತಂಡದ ಆ ವ್ಯಕ್ತಿ ಕರೆ ಮಾಡಿ ಕೆಟ್ಟದಾಗಿ ಬೈದರಂತೆ!
ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದ ತುಂಬಾ ವೆಂಕಟೇಶ್ ಮಹಾ ಎಂಬ ನಿರ್ದೇಶಕನದ್ದೇ ಸುದ್ದಿ. ತೆಲುಗಿನಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ಈತ ತನ್ನ ಆ ಸಿನಿಮಾಗಳ ಮೂಲಕ ಮಾಡಿದ್ದಕ್ಕಿಂತ ಹತ್ತು ಪಟ್ಟು ಸುದ್ದಿಯನ್ನು ಕೆಜಿಎಫ್ ಕುರಿತು ಕೊಂಕು ನುಡಿದು ಮಾಡಿಬಿಟ್ಟಿದ್ದಾರೆ.
ಹೌದು, ಪ್ರೇಮ ದ ಜರ್ನಲಿಸ್ಟ್ ಯುಟ್ಯೂಬ್ ಚಾನೆಲ್‌ನಲ್ಲಿ ನಡೆದ ನಿರ್ದೇಶಕರ ರೌಂಡ್ ಟೇಬಲ್ ಸಂದರ್ಶನದಲ್ಲಿ ಭಾಗವಹಿಸಿದ್ದ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ತೀರ ಕೆಳಮಟ್ಟದಲ್ಲಿ ಮಾತನಾಡಿದ್ದರು. ಕೆಜಿಎಫ್ ಚಾಪ್ಟರ್ 2 ಚಿತ್ರ ತನಗೆ ಇಷ್ಟವಾಗಿಲ್ಲ ಎಂಬುದನ್ನು ಸರಿಯಾಗಿ ಹೇಳಿದ್ದರೆ ವೆಂಕಟೇಶ್ ಮಹಾ ಇಷ್ಟು ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕುತ್ತಿರಲಿಲ್ಲ. ಆದರೆ ಚಿತ್ರ ಚೆನ್ನಾಗಿಲ್ಲ ಎಂಬುದನ್ನು ಹೇಳುವ ಭರದಲ್ಲಿ ವೆಂಕಟೇಶ್ ಮಹಾ ಉಪಯೋಗಿಸಿದ ಭಾಷೆಯ ರೀತಿ ಅವರನ್ನು ಸಂಕಷ್ಟಕ್ಕೆ ತಳ್ಳಿದೆ.

ಹೌದು, ಸಂದರ್ಶನದಲ್ಲಿ ವೆಂಕಟೇಶ್ ಮಹಾ ಎಲ್ಲಿಯೂ ಕೆಜಿಎಫ್ ಎಂಬ ಹೆಸರನ್ನು ಹೇಳದೇ ಕೇವಲ ಚಿತ್ರದ ಕೆಲ ದೃಶ್ಯಗಳ ಬಗ್ಗೆ ಮಾತನಾಡಿ ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿ ಪಾತ್ರವನ್ನು ಟ್ರೋಲ್ ಮಾಡಿದರು. ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಮಗನಿಗೆ ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ ಎಂದು ಟೀಕಿಸಿದ್ದರು.
ಇನ್ನೂ ಮುಂದುವರಿದು ಮಾತನಾಡಿದ ವೆಂಕಟೇಶ್ ಮಹಾ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್‌ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ ಎಂದಿದ್ದರು.
ಈ ಹೇಳಿಕೆಯಿಂದ ವೆಂಕಟೇಶ್ ಮಹಾ ತೀವ್ರ ಟ್ರೋಲ್ ಆದರು. ಓರ್ವ ನಿರ್ದೇಶಕನಾಗಿ ಇಂತಹ ಪದ ಬಳಕೆ ಎಷ್ಟು ಸರಿ ಎಂದು ನೆಟ್ಟಿಗರು ವೆಂಕಟೇಶ್ ಮಹಾ ವಿರುದ್ಧ ಕಿಡಿಕಾರಿದ್ದರು. ಹೀಗೆ ಎರಡು ದಿನಗಳಿಂದ ತೀವ್ರ ಟೀಕೆ ಎದುರಿಸುತ್ತಿರುವ ವೆಂಕಟೇಶ್ ಮಹಾ ಇದೀಗ ಮತ್ತೊಂದು ಸಂದರ್ಶನದಲ್ಲಿ ವಿವಾದದ ಬಳಿಕ ಏನೆಲ್ಲಾ ನಡೆಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಫಿಲ್ಮಿ ಲುಕ್ಸ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಆಂಗರ್ ಎಂಬ ವೆಬ್ ಸರಣಿಯ ನಿರ್ದೇಶಕನಾಗಿರುವ ವೆಂಕೆಟೇಶ್ ಇದರ ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿದ್ದರು.

ಕೆಜಿಎಫ್ ಚಾಪ್ಟರ್ 2 ಬಗ್ಗೆ ನೀವು ನೀಡಿದ ಹೇಳಿಕೆಯಿಂದ ನಿಮಗೆ ಯಾರಾದರೂ ಕರೆ ಮಾಡಿ ಏನಾದರೂ ಬೆದರಿಕೆ ಹಾಕಿದ್ರಾ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ವೆಂಕಟೇಶ್ ಮಹಾ ಇಂಡಸ್ಟ್ರಿಯ ಹಲವಾರು ಮಂದಿ ಕರೆ ಮಾಡಿದ್ರು ಹಾಗೂ ಬಹುತೇಕ ಎಲ್ಲರೂ ನನ್ನ ಪರವಾಗಿಯೇ ಮಾತನಾಡಿದರು, ನಾವಿದ್ದೇವೆ ಎಂದು ಧೈರ್ಯ ತುಂಬಿದರು ಎಂದು ಹೇಳಿಕೆ ನೀಡಿದರು.
ಇನ್ನೂ ಮುಂದುವರಿದು ಮಾತನಾಡಿ ಯಾರೋ ಒಬ್ಬರು ನಾನು ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಮಾತನಾಡುತ್ತಾ ಇದ್ದೇನೆ, ಆ ಚಿತ್ರದ ಪಾರ್ಕಿಂಗ್ ಕಲೆಕ್ಷನ್ ಆಗುವಷ್ಟು ನಿನ್ನ ಚಿತ್ರದ ಬಜೆಟ್ ಇಲ್ಲ ನೀನು ಅಂತಹ ಚಿತ್ರದ ಬಗ್ಗೆ ಮಾತನಾಡ್ತೀಯ ಎಂದು ಕೆಟ್ಟ ಪದಗಳನ್ನು ಬಳಸಿ ಬೈದರು ಎಂದು ವೆಂಕಟೇಶ್ ಮಹಾ ತಿಳಿಸಿದ್ದಾರೆ. ಇಲ್ಲಿಯೂ ಸಹ ವೆಂಕಟೇಶ್ ಮಹಾ ಎಲ್ಲಿಯೂ ಕರೆ ಮಾಡಿದ್ದ ವ್ಯಕ್ತಿಯ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಕರೆ ಮಾಡಿದ್ದು ನಿಜವಾಗಿಯೂ ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾ ಅಥವಾ ಇದು ಕಿಡಿಗೇಡಿಗಳ್ಯಾರೋ ಮಾಡಿದ ಕೆಲಸವಾ ಎಂಬ ಅನುಮಾನ ಇಲ್ಲಿಯೂ ಸಹ ಇದೆ.


Click it and Unblock the Notifications










