'ಚಿಕ್ಕಿರಿ ಚಿಕ್ಕಿರಿ' ಹೊಸ ದಾಖಲೆ; 5 ತಿಂಗಳು ಮುನ್ನ ಶುರುವಾಯ್ತು 'ಪೆದ್ದಿ' ದಾಖಲೆಗಳ ಪರ್ವ
ಸಂಗೀತಪ್ರೇಮಿಗಳ ನಾಡಿಮಿಡಿತ ಅರಿಯುವುದು ಪ್ರತಿಭಾನ್ವಿತ ಸಂಗೀತ ನಿರ್ದೇಶನಿಗೆ ಮಾತ್ರ ಸಾಧ್ಯ. ಎ. ಆರ್ ರಹಮಾನ್ ತಮ್ಮ ಹಾಡುಗಳ ಮೂಲಕ ಅಂಥಾದೊಂದು ಮ್ಯಾಜಿಕ್ ಮಾಡ್ತಾ ಬರ್ತಿದ್ದಾರೆ. ಹೊಸಬರ ಆರ್ಭಟದ ನಡುವೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕನ ಹವಾ ಕಮ್ಮಿ ಆಯ್ತು ಎಂದು ಕೆಲವರು ಭಾವಿಸಿದ್ದರು. ಆದರೆ 'ಚಿಕ್ಕಿರಿ ಚಿಕ್ಕಿರಿ' ಸಾಂಗ್ ಮಾಡಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ.
ರಾಮ್‌ಚರಣ್ ನಟನೆಯ 'ಪೆದ್ದಿ' ಚಿತ್ರಕ್ಕೆ ಎ. ಆರ್ ರಹಮಾನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 16 ದಿನಗಳ ಹಿಂದೆ ಬಂದಿದ್ದ 'ಚಿಕ್ಕಿರಿ ಚಿಕ್ಕಿರಿ' ಸಾಂಗ್ ಹೊಸ ದಾಖಲೆ ಬರೆದಿದೆ. ಸಿಂಪಲ್ ಮೆಲೋಡಿ ಸಾಂಗ್, ಚೆರ್ರಿ ಡ್ಯಾನ್ಸ್ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದೆ. ಪದೇ ಪದೆ ಕೇಳುವಂತೆ ನೋಡುವಂತೆ ಮಾಡಿದೆ.

ಬುಚ್ಚಿಬಾಬು 'ಪೆದ್ದಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದು ಫಸ್ಟ್ ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಪರ್ವತಗಳ ಸಾಲಿನ ಹಳ್ಳಿಯಲ್ಲಿ ವಾಸಿಸುವ ನಾಯಕ ತನ್ನ ಪ್ರೇಯಸಿಯನ್ನು 'ಚಿಕ್ಕಿರಿ ಚಿಕ್ಕಿರಿ' ಎಂದು ಪ್ರೀತಿಯಿಂದ ಕರೆಯುತ್ತಾನೆ. ಅದನ್ನೇ ಸಾಂಗ್‌ನಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ 90ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೇಳಲಾಗ್ತಿದೆ.
ಚಿತ್ರದಲ್ಲಿ ರಗಡ್ ಅವತಾರದಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್ಸ್ ಹಿಟ್ ಆಗಿತ್ತು. ಟೀಸರ್ ಬಳಿಕ ಇದೀಗ ಫಸ್ಟ್ ಸಾಂಗ್ ಅಭಿಮಾನಿಗಳ ಮನಗೆದ್ದಿದೆ. ಚರನ್ ಹಾಕಿರುವ ಹುಕ್ ಸ್ಟೆಪ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ರೀಲ್ಸ್‌ನಲ್ಲಿ ಸಾಕಷ್ಟು ಜನ ಈ ರೀತಿ ಸ್ಟೆಪ್ಸ್ ಹಾಕಿ ತಮ್ಮ ವೀಡಿಯೋಗಳನ್ನು ತೇಲಿಬಿಡುತ್ತಿದ್ದಾರೆ. ಬರೀ ಯೂಟ್ಯೂಬ್‌ನಲ್ಲಿ 'ಚಿಕ್ಕಿರಿ ಚಿಕ್ಕಿರಿ' ಸಾಂಗ್ 100 ಮಿಲಿಯನ್ ವೀವ್ಸ್ ಸಾಧಿಸಿದೆ. ಅಂದರೆ ಕೇವಲ 16 ದಿನಗಳಲ್ಲಿ 10 ಕೋಟಿ ವೀವ್ಸ್ ಗಳಿಸಿದಂತಾಗಿದೆ.
ದಕ್ಷಿಣ ಭಾರತ ಸಿನಿಮಾಗಳಲ್ಲಿ ಬಹಳ ಬೇಗ ಇಷ್ಟು ವೀವ್ಸ್ ಸಾಧಿಸಿರುವ ಹಾಡುಗಳ ಲಿಸ್ಟ್‌ನಲ್ಲಿ ಇದು ಸೇರಿಕೊಂಡಿದೆ. ಈ ಹಿಂದೆ ಧನುಷ್ ಹಾಗೂ ಸಾಯಿ ಪಲ್ಲವಿ ಕುಣಿದಿದ್ದ 'ರೌಡಿ ಬೇಬಿ' ಸಾಂಗ್ ಕೂಡ 16 ದಿನಗಳಲ್ಲಿ 10 ಕೋಟಿ ವೀವ್ಸ್ ಗಳಿಸಿದ ಸಾಧನೆ ಮಾಡಿತ್ತು. ಸಾಮಾನ್ಯವಾಗಿ ಮಾಸ್ ಸಾಂಗ್ಸ್ ಪದೇ ಪದೆ ಕೇಳಿವಂತೆ ಮಾಡುತ್ತವೆ. ಆದರೆ ಸಿಂಪಲ್ ಮೆಲೋಡಿ ಸಾಂಗ್ ಈ ಪಾಟಿ ಜಾದೂ ಮಾಡಿರುವುದು ವಿಶೇಷ. 'ಚಿಕ್ಕಿರಿ ಚಿಕ್ಕಿರಿ' ಸಾಂಗ್ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಕೂಡ ಪಡೆದುಕೊಂಡಿದೆ.
'ಪೆದ್ದಿ' ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ದಿವ್ಯೆಂದು, ಸತ್ಯ, ಶೋಭನಾ, ವಿಜಿ ಚಂದ್ರಶೇಖರ್ ತಾರಾಗಣದಲ್ಲಿದ್ದಾರೆ. ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ. ಮುಂದಿನ ವರ್ಷ ಮಾರ್ಚ್ 28ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. 'RRR'ಬಳಿಕ ರಾಮ್‌ಚರಣ್ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ 'ಪೆದ್ದಿ' ಮೇಲೆ ಬಹಳ ನಿರೀಕ್ಷೆಯಿದೆ.
'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಹಳ್ಳಿಯ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ಮಿಂಚಿದ್ದಾರೆ. ಫಸ್ಟ್ ಟೀಸರ್‌ನಲ್ಲಿ ವಿಭಿನ್ನ ಶೈಲಿಯಲ್ಲಿ ಆತ ಚೆಂಡನ್ನು ಬೌಂಡರಿಗೆ ಅಟ್ಟುವ ಪರಿ ವೈರಲ್ ಆಗಿತ್ತು. ವಿಶೇಷ ಅಂದ್ರೆ 'ಚಿಕ್ಕಿರಿ ಚಿಕ್ಕಿರಿ' ಹಾಡಿನಲ್ಲಿ ಕೂಡ ಅದನ್ನು ಡ್ಯಾನ್ಸ್ ರೀತಿ ಬಳಸಿಕೊಳ್ಳಲಾಗಿದೆ. ಜಾನಿ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿರುವುದು ವಿಶೇಷ. ತೆಲುಗು ಸಾಂಗ್ 64 ಮಿಲಿಯನ್, ಹಿಂದಿ 25 ಮಿಲಿಯನ್ ವೀವ್ಸ್ ಗಳಿಸಿದ್ದು ತೆಲುಗು, ಕನ್ನಡ, ಮಲಯಾಳಂ ಸೇರಿ 100 ಮಿಲಿಯನ್ ವೀವ್ಸ್ ದಾಟಿದೆ.


Click it and Unblock the Notifications











