25ನೇ ವಯಸ್ಸಿನಲ್ಲಿಯೇ ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ, ಇವತ್ತು ಪಶ್ಚಾತಾಪ ಇದೆ- ಜಯಪ್ರದಾ ಭಾವುಕ
''ಮದುವೆ'' ಎಂಬ ಮೂರಕ್ಷರದ ಬಂಧನದಲ್ಲಿ ಒಮ್ಮೆ ಸಿಲುಕಿಕೊಂಡರೆ ಅಷ್ಟೇ. ಅದರಿಂದ ಹೊರ ಬರುವುದು ಸುಲಭದ ಮಾತಲ್ಲ. ಈ ಕಾರಣಕ್ಕಾಗಿಯೇ ಮದುವೆ ವಿಚಾರದಲ್ಲಿ ತುಂಬಾನೇ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಕೈ ಹಿಡಿಯುವ ಜೀವನ ಸಂಗಾತಿಯ ಆಯ್ಕೆಯಲ್ಲಿ ತುಂಬಾ ಎಚ್ಚರ ವಹಿಸಿ ಎಂಬ ಕಿವಿಮಾತನ್ನು ಹೇಳುತ್ತಾರೆ.
ಈ ಸಂದರ್ಭದಲ್ಲಿ ಚೂರು ಯಾಮಾರಿದರೂ ಎಡವಿದರೂ .. ಜೀವನಪರ್ಯಂತ ಪಶ್ಚಾತಾಪ ಪಡಬೇಕಾಗುತ್ತೆ. ಆತುರಾತುರವಾಗಿ ಮದುವೆಯಾಗಿದ್ದಕ್ಕೆ .. ಆಕರ್ಷಣೆಯನ್ನೇ ಪ್ರೀತಿ ಅಂದುಕೊಂಡಿದ್ದಕ್ಕೆ.. ಯೋಚನೆ ಮಾಡದೇ ಮದುವೆಯಾಗಿದ್ದಕ್ಕೆ .. ಮನೆಯವರ ಬಲವಂತಕ್ಕೆ ಮಣಿದು ಹಸೆಮಣೆ ಏರಿದ್ದಕ್ಕೆ .. ಕಣ್ಣೀರಿನಲ್ಲಿಯೇ ಕೈ ತೊಳೆಯಬೇಕಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಮತ್ತು ಸಾಕ್ಷಿ ಎಂಬಂತಿದೆ ಸೌಂದರ್ಯದ ಗಣಿ ಜಯಪ್ರದಾ ಅವರ ವೈಯಕ್ತಿಕ ಬದುಕು.

ಹೌದು. ಜಯಪ್ರದಾ.. ಆಂಧ್ರಪ್ರದೇಶದ ರಾಜಮಂಡ್ರಿಯ ಲಲಿತಾ ರಾಣಿ. ಕೇವಲ 17ರ ಪ್ರಾಯದಲ್ಲಿಯೇ ಭಾರತದ ಸ್ಟಾರ್ ನಾಯಕಿಯ ಸ್ಥಾನ ಅಲಂಕರಿಸಿದ ಜಯಪ್ರದಾ ಅವರನ್ನು ಸತ್ಯಜಿತ್ ರೇ ಭಾರತ ಚಿತ್ರರಂಗದ ಅತ್ಯಂತ ಸುಂದರವಾದ ಮುಖ ಎಂದು ಬಣ್ಣಿಸಿದ್ದರು. ಜಯಪ್ರದಾ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಕಾಲ ಅದು.
1977ರಲ್ಲಿ ''ಸನಾದಿ ಅಪ್ಪಣ್ಣ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಜಯಪ್ರದಾ ಮುಂದೆ ಡಾ.ರಾಜ್ ಕುಮಾರ್ ಅವರ ಜೊತೆ ''ಹುಲಿಯ ಹಾಲಿನ ಮೇವು''.. ''ಕವಿರತ್ನ ಕಾಳಿದಾಸ''.. ''ರವಿಚಂದ್ರ''.. ''ಶಬ್ದವೇದಿ'' ಚಿತ್ರಗಳನ್ನು ಮಾಡಿದರು. ಡಾ.ವಿಷ್ಣುವರ್ಧನ್.. ಅಂಬರೀಷ್.. ಶಂಕರ್ ನಾಗ್ ಅವರಿಗೆ ಕೂಡ ನಾಯಕಿಯಾಗಿ ಮಿಂಚಿದರು.
ಆ ಕಾಲದಲ್ಲಿ ಕಮಲ್ ಹಾಸನ್, ಮೋಹನ್ ಲಾಲ್, ರಜನಿಕಾಂತ್, ಧರ್ಮೇಂದ್ರ, ಅಮಿತಾಭ್ ಬಚ್ಚನ್, ರಿಷಿ ಕಪೂರ್, ಮಿಥುನ್ ಚಕ್ರವರ್ತಿ, ಸನ್ನಿ ಡಿಯೋಲ್, ಸಂಜಯ್ ದತ್, ಜೀತೇಂದ್ರ, ರಾಜೇಶ್ ಖನ್ನಾ, ಶತ್ರುಘ್ನ ಸಿನ್ಹಾ, ಶಶಿ ಕಪೂರ್ ಅವರಿಗೂ ಕೂಡ ಜಯಪ್ರದಾ ನಾಯಕಿ.
ಹೀಗೆ ಅತ್ಯಲ್ಪ ಅವಧಿಯಲ್ಲಿ ಖ್ಯಾತಿಯ ಶಿಖರಕ್ಕೇರಿದ್ದ ಜಯಪ್ರದಾ ತಮ್ಮ 25ರ ಹರೆಯದಲ್ಲಿ ಎಡವಿದರು. ನಿರ್ಮಾಪಕ ಶ್ರೀಕಾಂತ್ ನಹತಾಗೆ ಮನ ಸೋತರು. ಅದು ಆಕರ್ಷಣೆಯಾ..? ಪ್ರೀತಿನಾ..? ಖುದ್ದು ಜಯಪ್ರದಾ ಅವರಿಗೆ ಗೊತ್ತಾದರು ಅದಾಗಲೇ ಶ್ರೀಕಾಂತ್ ನಹತಾಗೆ ಮದುವೆಯಾಗಿತ್ತು. ಮೂರು ಮಕ್ಕಳು ಕೂಡ ಇದ್ದರು.

ಆದರೂ ಶ್ರೀಕಾಂತ್ ನಹತಾ ಅವರ ಜೊತೆ ಜಯಪ್ರದಾ ಮದುವೆಯಾಗಲು ಮುಂದಾದರು. ಮದುವೆಯೂ ಆದರು. ವಿಶೇಷ ಅಂದರೆ ಜಯಪ್ರದಾ ಅವರಿಗಾಗಿ ಶ್ರೀಕಾಂತ್ ನಹತಾ ತಮ್ಮ ಮೊದಲ ಪತ್ನಿಯ ಕೈಯನ್ನು ಬಿಡಲಿಲ್ಲ. ವಿಚ್ಛೇದನ ನೀಡಲಿಲ್ಲ. ಶ್ರೀಕಾಂತ್ ಮೊದಲ ಹೆಂಡತಿ ಮತ್ತು ಮಕ್ಕಳ ಜೊತೆ ವಾಸ ಮಾಡುತ್ತಿದ್ದರಿಂದ ಗಂಡನ ಮನೆಯಲ್ಲಿ ಇರಲು ಜಯಪ್ರದಾಗೆ ಸಾಧ್ಯವಾಗಲಿಲ್ಲ. ಜಯಪ್ರದಾಗೆ ಸಿಗಬೇಕಿದ್ದ ಸಂಸಾರದ ಸುಖವೂ ಸಿಗಲಿಲ್ಲ.
ತಮ್ಮ ಈ ಮದುವೆಯ ನಿರ್ಧಾರದ ಕುರಿತು ಜಯಪ್ರದಾ ಇತ್ತೀಚೆಗಷ್ಟೇ ಮಾತನಾಡಿದ್ದಾರೆ. ಮದುವೆಯಾಗುವ ನಿರ್ಧಾರ ಮಾಡಿದ್ದು ನನ್ನ ಬದುಕಿನ ಬಹುದೊಡ್ಡ ತಪ್ಪು ನನಗಿನ್ನೂ ಪಶ್ಚಾತಾಪ ಇದೆ ಎಂದು ಹೇಳಿದ್ದಾರೆ.
ಈ ಕುರಿತು ತೆಲುಗಿನ ಪತ್ರಕರ್ತೆ ''ಪ್ರೇಮಾ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಜಯಪ್ರದಾ, ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಬಹು ದೊಡ್ಡ ತಪ್ಪು ನಿರ್ಧಾರ ಅಂದರೆ ಅದು ಮದುವೆ ಎಂದು ಹೇಳಿದ್ದಾರೆ. ನನಗೆ ಆಗಿನ್ನೂ 25 ವರ್ಷ, ಆಗ ನನಗೆ ಏನೂ ಗೊತ್ತಿರಲಿಲ್ಲ, ಎಂದು ಹೇಳಿರುವ ಜಯಪ್ರದಾ ಸಿನಿಮಾ, ಶೂಟಿಂಗ್ ಅಂತ ಒಂದು ಫ್ಲೋನಲ್ಲಿ ನನ್ನ ಬದುಕು ಹೋಗ್ತಾ ಇತ್ತು ಆದರೆ ಈ ಸಮಯದಲ್ಲಿ ನಾನು ತೆಗೆದುಕೊಂಡ ಮದುವೆಯ ತಪ್ಪು ನಿರ್ಧಾರದಿಂದ ನನ್ನ ಕರಿಯರ್, ನನ್ನ ಜೀವನ ಎಲ್ಲವೂ ಬುಡಮೇಲಾಯ್ತು ಎಂದು ಹೇಳಿದ್ದಾರೆ.
ನಾನು ತುಂಬಾ ತೊಂದರೆ ಅನುಭವಿಸಿದ್ದೀನಿ, ಕಡೆಗೆ ಒಂದು ದಿನ ಜೀವಮಾನ ಇಡೀ ನರಳುವುದಕ್ಕಿಂತ, ಒಂದೇ ಸಾರಿ ನಿರ್ಧಾರ ತಗೊಂಡು ಹೊರಗಡೆ ಬರೋದು ವಾಸಿ ಎಂದುಕೊಂಡೆ ಎಂದು ಹೇಳಿರುವ ಜಯಪ್ರದಾ , ಬೇಕು ಬೇಕು ಅಂತ ಪಡೆಯೋದು ಬೇರೆ..ಅದೇ ಬೇಡ ಅಂದ್ರು ಬರೋದು ಬೇರೆ. ಯಾರನ್ನೂ ನಾವು ಫೋರ್ಸ್ ಮಾಡೋಕೆ ಆಗಲ್ಲ. ಹಾಗಾಗಿ ಇನ್ನು ಸಾಕು ಅಂತ ನಿರ್ಧಾರ ಮಾಡಿ, ಹೊರಗಡೆ ಬಂದೆ ಎಂದು ಹೇಳಿದ್ದಾರೆ. ಈಗ ನಾನು ಖುಷಿಯಾಗಿದ್ದೀನಿ. ನನ್ನ ಕುಟುಂಬ, ಕರಿಯರ್‌ನ ನೋಡ್ಕೋತಿದ್ದೀನಿ. ಈಗ ನಾನು ತುಂಬಾ ಸ್ಟ್ರಾಂಗ್ ಆಗಿದ್ದೀನಿ ಎಂದು ಹೇಳಿರುವ ಜಯಪ್ರದಾ ನನ್ನ ಕಣ್ಣಲ್ಲಿ ನೀರು ಹಾಕಿಸೋಕೆ ಈಗ ಸಾಧ್ಯ ಇಲ್ಲ ಎಂದು ಕೂಡ ಹೇಳಿದ್ದಾರೆ. ಸದ್ಯ ಜಯಪ್ರದಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
` ` ` `


Click it and Unblock the Notifications