ಅಲ್ಲು ಅರ್ಜುನ್ ಹೊಸ ಅಧ್ಯಾಯಕ್ಕೆ ಮುಹೂರ್ತ ಫಿಕ್ಸ್; ಇಲ್ಲಿದೆ ಡಿಟೈಲ್ಸ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ'- 2 ಸಕ್ಸಸ್ ಅಲೆಯಲ್ಲೇ ಇನ್ನು ತೇಲುತ್ತಿದ್ದಾರೆ. ಅಭಿಮಾನಿಗಳು ಮುಂದಿನ ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಅದೇನೋ ಗೊತ್ತಿಲ್ಲ, ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಿನಿಮಾ ಮಾಡುವ ವೇಗವೇ ಕಮ್ಮಿ ಆಗಿಬಿಟ್ಟಿದೆ.

ದೊಡ್ಡ ಸಿನಿಮಾಗಳನ್ನು ಮಾಡಲು ಬಹಳ ಸಮಯ ಬೇಕು ಎಂದು ಮೊಂಡು ವಾದವನ್ನು ಮುಂದಿಡುವವರು ಇದ್ದಾರೆ. ಆದರೆ ಕೆಲವರು ಏಳೆಂಟು ತಿಂಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಮುಗಿಸುತ್ತಿದ್ದಾರೆ. 4 ವರ್ಷಗಳ ಹಿಂದೆ 'ಅಲಾ ವೈಕುಂಠಪುರಂಲೊ' ಚಿತ್ರದಲ್ಲಿ ನಟಿಸಿ ಅಲ್ಲು ಅರ್ಜುನ್ ರಂಜಿಸಿದ್ದರು. ಬಳಿಕ ನಾಲ್ಕೈದು ವರ್ಷ 'ಪುಷ್ಪ' ಸರಣಿ ಸಿನಿಮಾಗಳಿಗೆ ಮೀಸಲಿದ್ದರು.

AA22 Pushpa actor Allu Arjuna s next film announcement on his birthday

ಅಂತೂ ಇಂತೂ 'ಪುಷ್ಪ'- 2 ಸಿನಿಮಾ ಕೂಡ ಬಂದು ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಸುಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ನಿರ್ಮಾಣವಾಗಿದ್ದ ಸಿನಿಮಾ ಅದೇ ರೀತಿ ಕಲೆಕ್ಷನ್ ಸಹ ಮಾಡಿತ್ತು. ಟಿಕೆಟ್ ದರ ಹೆಚ್ಚಿಸಿ ಗಳಿಕೆಯನ್ನು ನಿರ್ಮಾಪಕರು ಹೆಚ್ಚಿಸಿಕೊಂಡಿದ್ದರು.

'ಪುಷ್ಪ'- 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ದುರಂತ ಸಂಭವಿಸಿತ್ತು. ಅಂದು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಲು ಅಲ್ಲು ಅರ್ಜುನ್ ಹೋಗಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ. ಪ್ರಕರಣದ ಸಂಬಂಧ ಅಲ್ಲು ಅರ್ಜುನ್ ಬಂಧನವಾಗಿ ಒಂದು ದಿನ ಜೈಲಿನಲ್ಲಿ ಇದ್ದು ಬರುವಂತಾಯಿತು.

ಸಿನಿಮಾ ರಿಲೀಸ್ ಬೆನ್ನಲ್ಲೇ ನಡೆದ ಈ ಕಹಿ ಘಟನೆಯಿಂದ ಚಿತ್ರತಂಡ ಸಕ್ಸಸ್ ಸಂಭ್ರಮಾಚರಣೆ ಮಾಡೋಕೆ ಸಾಧ್ಯವಾಗಲಿಲ್ಲ. ಇನ್ನು ಮೃತ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಒಂದು ಕೋಟಿ ರೂ. ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಹಾಗೂ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿಮೇಕರ್ಸ್ 50 ಲಕ್ಷ ರೂ. ಪರಿಹಾರ ನೀಡಿದ್ದರು. ಸದ್ಯ ಕೊಂಚ ಬಿಡುವು ಪಡೆದ ಅಲ್ಲು ಅರ್ಜುನ್ ಇದೀಗ ಮುಂದಿನ ಸಿನಿಮಾ ಕಡೆ ಮುಖ ಮಾಡಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಸ್ಟೈಲಿಶ್ ಸ್ಟಾರ್ ನಟಿಸೋದು ಬಹುತೇಕ ಖಚಿತವಾಗಿದೆ.

AA22 Pushpa actor Allu Arjuna s next film announcement on his birthday

ಈಗಾಗಲೇ ಅಲ್ಲು ಅರ್ಜುನ- ಅಟ್ಲಿ ಸಿನಿಮಾ ಮಾತುಕತೆ ಜೋರಾಗಿ ನಡೀತಿದ್ದು ಏಪ್ರಿಲ್ 8ರಂದು ಸಿನಿಮಾ ಅಧಿಕೃತವಾಗಿ ಘೋಷಣೆ ಆಗುತ್ತದೆ ಎಂದು ವರದಿಯಾಗಿದೆ. ಅಂದು ಸ್ಟೈಲಿಶ್ ಸ್ಟಾರ್ ಹುಟ್ಟುಹಬ್ಬ. ಇದೇ ಸಂಭ್ರಮದಲ್ಲಿ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ತಮಿಳು ನಿರ್ದೇಶಕ ಅಟ್ಲಿ ಇತ್ತೀಚೆಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಗೆದ್ದಿದ್ದರು. ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ.

ಶಾರುಖ್ ಖಾನ್ ನಿರ್ಮಿಸಿ ನಟಿಸಿದ 'ಜವಾನ್' ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತು. ಈ ಮೂಲಕ ಅಟ್ಲಿ ಪ್ರತಿಭೆ ಎಂಥದ್ದು ಎಂದು ಬಾಲಿವುಡ್ ಮಂದಿಗೂ ಪರಿಚಯವಾಯಿತು. ನಿರ್ದೇಶಕ ಶಂಕರ್ ಗರಡಿಯಲ್ಲಿ ಪಳಗಿದ ಅಟ್ಲಿ ನಿರ್ದೇಶನದ ಸಿನಿಮಾಗಳೆಲ್ಲಾ ಹಿಟ್ ಲಿಸ್ಟ್ ಸೇರಿದೆ. 'ಜವಾನ್' ಸಿನಿಮಾ ಬಂದು ಹೋಗಿ ವರ್ಷ ಕಳೆದರೂ ಅಟ್ಲಿ ಹೊಸ ಸಿನಿಮಾ ಕೈಗೆತ್ತಿಕೊಂಡಿಲ್ಲ. ಇದೀಗ 'ಪುಷ್ಪ' ಹೀರೋ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.

ಸನ್ ಪಿಕ್ಚರ್ಸ್ ಸಂಸ್ಥೆ ಈ ಕ್ರೇಜಿ ಪ್ರಾಜೆಕ್ಟ್ ಅನ್ನು ನಿರ್ಮಾಣ ಮಾಡಲಿದೆ. ಈವರೆಗೆ ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಿ ಸಕ್ಸಸ್ ಕಂಡಿರುವ ಸಂಸ್ಥೆ ಈಗ ತೆಲುಗು ಚಿತ್ರಕ್ಕೆ ಕೈ ಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ತೆಲುಗಿನಲ್ಲಿ ನಿರ್ಮಾಣವಾಗುವ ಸಿನಿಮಾ ಇನ್ನುಳಿದ 4 ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಹಾಗಾಗಿ ಇತ್ತೀಚೆಗೆ ಇಂಡಿಯನ್ ಸಿನಿಮಾ ಎನ್ನುವ ಹಣೆಪಟ್ಟಿಯನ್ನು ಅದಕ್ಕೆ ಕಟ್ಟಲಾಗುತ್ತಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.

'ಪುಷ್ಪ'-2 ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನಲಾಗಿತ್ತು. ಬನ್ನಿ ತಮ್ಮ ಮುಂದಿನ ಚಿತ್ರಕ್ಕೆ ಅಟ್ಲಿ ಬದಲು ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರಾ? ಎನ್ನುವ ಗೊಂದಲ ಕೂಡ ಅಭಿಮಾನಿಗಳಲ್ಲಿದೆ. ಒಟ್ಟಾರೆ ಏಪ್ರಿಲ್ 8ರಂದು ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ತ್ರಿವಿಕ್ರಮ್ ನಿರ್ದೇಶನದ 'ಜುಲಾಯಿ', 'ಸನ್ ಆಫ್ ಸತ್ಯಮೂರ್ತಿ' ಹಾಗೂ 'ಅಲಾ ವೈಕುಂಠಪುರಂಲೊ' ಹೀಗೆ 3 ಹಿಟ್ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ನಟಿಸಿದ್ದರು. 4ನೇ ಬಾರಿ ಈ ಜೊತೆ ಜೊತೆಯಾದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.

ಈಗಾಗಲೇ 21 ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. 22ನೇ ಸಿನಿಮಾ ಯಾವಾಗ ಶುರುವಾಗುತ್ತದೆ ಎಂದು ಅಭಿಮಾನಿಗಳು ಕಾಯುವಂತಾಗಿದೆ. ಕಳೆದ ವರ್ಷವೇ ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾ ಮಾತುಕತೆ ನಡೆಯುತ್ತಿರುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಸ್ವತಃ ಬನ್ನಿ ತಂದೆ ಅಲ್ಲು ಅರವಿಂದ್ ತಮ್ಮ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಟೀ-ಸೀರಿಸ್ ಕೂಡ ಕೈ ಜೋಡಿಸುತ್ತದೆ ಎನ್ನಲಾಗಿತ್ತು. ಬಳಿಕ ಆ ಸಿನಿಮಾ ನಿಂತೇ ಹೋಯಿತು ಎನ್ನುವ ಮಾತುಗಳು ಕೇಳಿಬಂದಿತ್ತು.

ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಆ ಪಾತ್ರಕ್ಕಾಗಿ ಅವರ ಶ್ರಮ ಕಂಡು ಅಭಿಮಾನಿಗಳು ಫಿದಾ ಆಗಿದ್ದರು. ಆ ಪಾತ್ರವನ್ನು ತಾನು ಬಿಟ್ಟರೆ ಬೇರೆ ಯಾರು ಕೂಡ ಅಷ್ಟು ಚೆನ್ನಾಗಿ ಮಾಡೋಕೆ ಸಾಧ್ಯವಿಲ್ಲ ಎನ್ನುವಂತೆ ಸ್ಟೈಲಿಶ್ ಸ್ಟಾರ್ ನಟಿಸಿ ಮೋಡಿ ಮಾಡಿದ್ದರು. ಈಗಾಗಲೇ ಈ ಸರಣಿಯನ್ನು ಮುಂದುವರೆಸುವುದಾಗಿ ಚಿತ್ರತಂಡ ಹೇಳಿದೆ. 'ಪುಷ್ಪ'-3 ಸಿನಿಮಾ 2028ರಲ್ಲಿ ತೆರೆಗೆ ಬರುತ್ತದೆ ಎಂದು ನಿರ್ಮಾಪಕರು ಇತ್ತೀಚೆಗೆ ಹೇಳಿದ್ದಾರೆ.

'ಪುಷ್ಪ' ಕಥೆ ಮೊದಲ ಭಾಗದಲ್ಲೇ ಮುಕ್ತಾಯವಾಗಿತ್ತು. ಆದರೂ ಸೀಕ್ವೆಲ್ ಮಾಡಿ ಕಥೆ ಎಳೆದಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಂದು ಚಿತ್ರಕ್ಕೆ ಯಾಕೆ ಕಥೆ ಜೀಗುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ. ಇನ್ನು 3ನೇ ಭಾಗದಲ್ಲಿ ವಿಜಯ್ ದೇವರಕೊಂಡ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ. ಹಾಗಾಗಿ ಅಲ್ಲು ಅರ್ಜುನ್ ಪೂರ್ಣಪ್ರಮಾಣದ ಹೀರೋ ಆಗಿ ನಟಿಸ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾ ಬಜೆಟ್ ಅವರಿಬ್ಬರ ಸಂಭಾವನೆ ವಿಚಾರ ಈಗ ಭಾರೀ ಚರ್ಚೆ ಹುಟ್ಟುಹಾಕಿದೆ. 'ಪುಷ್ಪ'-2 ಚಿತ್ರಕ್ಕೆ ಸ್ಟೈಲಿಶ್ ಸ್ಟಾರ್ 200 ಕೋಟಿ ರೂ. ಚಾರ್ಜ್ ಮಾಡಿದ್ದರು ಎಂದು ಗುಲ್ಲಾಗಿತ್ತು. ಇನ್ನು ಅಟ್ಲಿ 'ಜವಾನ್' ರೀತಿಯ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ನೂರಾರು ಕೋಟಿ ನೀರಿನಂತೆ ಚೆಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದೆ. ಹಾಗಾಗಿ ಇಬ್ಬರಿಗೂ ದಾಖಲೆ ಮಟ್ಟದ ಸಂಭಾವನೆ ಸಿಗುವ ಲೆಕ್ಕಾಚಾರ ಶುರುವಾಗಿದೆ. ಚಿತ್ರದಲ್ಲಿ ಬನ್ನಿ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಯಾವಾಗ ಸಿನಿಮಾ ಶುರುವಾಗುತ್ತದೆ? ಯಾವಾಗ ತೆರೆಗೆ ಬರುತ್ತದೆ? ಎಂದು ಫ್ಯಾನ್ಸ್ ಕಾದು ಕೂರುವಂತಾಗಿದೆ.

More from Filmibeat

English summary
Telugu Actor Allu Arjun teams up with Star Director for his next, film announcement on April 8th;
Read more about: allu arjun tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X