ಪುಷ್ಪ 2 ದುರಂತ,ಒಂದು ವರ್ಷದ ನಂತರ ಚಾರ್ಜ್‌ಶೀಟ್ ಸಲ್ಲಿಕೆ; ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಎಷ್ಟನೇ ಆರೋಪಿ?
ಹಣೆ ಬರಹಕ್ಕೆ ಹೊಣೆ ಯಾರು ? ಬಂದದ್ದನ್ನು ಸ್ವೀಕರಿಸಲೇಬೇಕು. ಅನುಭವಿಸಲೇಬೇಕು. ಎಲ್ಲ ವಿಧಿಲಿಖಿತ ನಾವೇನು ಮಾಡೋಕಾಗುತ್ತೆ ? ಇಂತಹ ಮಾತುಗಳನ್ನು ಸಾಮಾನ್ಯವಾಗಿ ಎಲ್ಲರು ಕೇಳಿರುತ್ತಾರೆ. ಆದರೆ ಪಕ್ಕದ ಮನೆಯ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇದೆಲ್ಲವನ್ನು ಅನುಭವಿಸುತ್ತಿದ್ದಾರೆ. ಹೌದು, ನಿಮಗೆ ನೆನಪಿದ್ದರೆ.. ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಅಲ್ಲು ಅರ್ಜುನ್ ಅಭಿನಯದ ''ಪುಷ್ಪಾ 2'' ಬಿಡುಗಡೆಯಾಗಿತ್ತು.
ಬೆಳ್ಳಿತೆರೆಯಲ್ಲಿ ಅಕ್ಷರಶಃ ಧಗಧಗಿಸುತ್ತಿತ್ತು. ಆದರೆ, ಇದೇ ಸಮಯದಲ್ಲಿ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಹೋಗಿದ್ದರು. ಇದೇ ಸಮಯದಲ್ಲಿ ನಡೆಯಬಾರದ್ದು ನಡೆದು ಹೋಗಿತ್ತು. ಕಾಲ್ತುಳಿತದಿಂದಾಗಿ 35 ವರ್ಷದ ರೇವತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇಷ್ಟೇ ಅಲ್ಲ ಈ ದುರಂತದಲ್ಲಿ ಅವರ ಮಗ ಶ್ರೀತೇಜ್‌ಗೆ ಕೂಡ ಗಂಭೀರವಾದ ಗಾಯವಾಗಿತ್ತು.

ಆ ನಂತರ ಇದೇ ವಿಚಾರ ರಾಜಕೀಯದ ಸ್ವರೂಪ ಪಡೆಯಿತು. ಜೈಲಿನ ಕತ್ತಲ ಕೋಣೆಯಲ್ಲಿ ಅಲ್ಲು ಅರ್ಜುನ್ ಒಂದು ರಾತ್ರಿ ಕಳೆಯಬೇಕಾಯ್ತು. ಇದೀಗ ಇದೆಲ್ಲವೂ ಆಗಿ ಒಂದು ವರ್ಷದ ನಂತರ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ನ್ಯಾಯಾಲಯದಲ್ಲಿ ಚಿಕ್ಕಡಪಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಅದರನ್ವಯ ಸಂಧ್ಯಾ ಚಿತ್ರಮಂದಿರದ ಮಾಲೀಕರಿಗೆ ಮತ್ತು ವ್ಯವಸ್ಥಾಪಕರಿಗೆ ಅಲ್ಲು ಅರ್ಜುನ್ ಬರುತ್ತಿರುವ ವಿಚಾರ ಗೊತ್ತಿದ್ದರು ಕೂಡ ಜನಸಂದಣಿಯನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಹೇಳಿರುವ ಪೊಲೀಸರು ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿಯನ್ನು ಎ1 ಸ್ಥಾನದಲ್ಲಿ ನಿಲ್ಲಿಸಿದ್ದಾರೆ.
ವಿಐಪಿ ಜನರಿಗೆ ಪ್ರತೈಕ ಪ್ರವೇಶ ಮತ್ತು ನಿರ್ಗಮನದ ಮಾರ್ಗಗಳನ್ನು ಒದಗಿಸುವಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಹೇಳಿರುವ ತನಿಖಾಧಿಕಾರಿಗಳು, ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದರೂ ಕೂಡ ಈ ಅನಾಹುತಕ್ಕೆ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿ ಅನುವು ಮಾಡಿ ಕೊಡ್ತು ಎಂದು ಆರೋಪ ಮಾಡಿದ್ದಾರೆ. ಥಿಯೇಟರ್ ಮಾಲೀಕರ ವಿರುದ್ದ 304-ಎ ಮತ್ತು ಭಾರತೀಯ ನ್ಯಾಯ ಸಂಹಿತೆಯ ಬೇರೆ ಬೇರೆ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಜನಸಂದಣಿ ಹೆಚ್ಚಿದ್ದರೂ.. ಅಪಾಯದ ಅರಿವು ಇದ್ದರೂ.. ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದ ಹಿನ್ನೆಲೆ ಅಲ್ಲು ಅರ್ಜುನ್ ಮತ್ತು ಅವರ ಮ್ಯಾನೇಜರ್ ವಿರುದ್ಧ ಕೂಡ ದೋಷಾರೋಪ ಪಟ್ಟಿಯನ್ನು ಕೂಡ ಸಲ್ಲಿಸಲಾಗಿದೆ.

ಇಷ್ಟೇ ಅಲ್ಲದೇ ಅಲ್ಲು ಅರ್ಜುನ್ ಸಿಬ್ಬಂದಿ ವರ್ಗ ಮತ್ತು 8 ಜನ ಬೌನ್ಸರ್‌ಗಳಿಂದ ಈ ಅವವ್ಯಸ್ಥೆ ಹೆಚ್ಚಾಯ್ತು ಎಂದು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿರುವ ಪೊಲೀಸರು ಒಟ್ಟು 24 ವ್ಯಕ್ತಿಗಳನ್ನು ಈ ಅವಘಡಕ್ಕೆ ಹೊಣೆಯಾಗಿಸಿದ್ದಾರೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಹನ್ನೊಂದನೇ (ಎ 11) ಆರೋಪಿಯನ್ನಾಗಿ ಮಾಡಿದ್ದಾರೆ.
ಸದ್ಯ ಕಾಲ್ತುಳಿತ ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಪೊಲೀಸರ ಬಳಿ ಈಗ ಸಂಪೂರ್ಣವಾದ ಸಾಕ್ಷಿಗಳು ಸಿಕ್ಕಂತಾಗಿದ್ದು, ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ವಿಚಾರಣಾ ಹಂತಕ್ಕೆ ಈ ಪ್ರಕರಣವನ್ನು ಈ ಮೂಲಕ ಕೊಂಡೊಯ್ದಿದ್ದಾರೆ.
ಇನ್ನುಳಿದಂತೆ ಕಾಲ್ತುಳಿತವಾದ ನಂತರ ಅಲ್ಲು ಅರ್ಜುನ್ ವೈಯಕ್ತಿಕವಾಗಿ ರೇವತಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಚಿತ್ರದ ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಹಾಗೂ 'ಪುಷ್ಪ'-2 ಚಿತ್ರ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 50 ಲಕ್ಷ ರೂ. ನೀಡಲು ಮುಂದಾಗಿತ್ತು. ಈ ವಿಚಾರವನ್ನು ಸ್ವತಃ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಖಚಿತಪಡಿಸಿದ್ದರು.
ಇನ್ನು ಮಹಿಳೆ ಸಾವನ್ನಪ್ಪಿದ ಹಿನ್ನೆಲೆ ಅಲ್ಲು ಅರ್ಜುನ್ ಮತ್ತು ತೆಲಂಗಾಣ ಸರ್ಕಾರದ ನಡುವೆ ವಾಕ್ಸಮರ ಶುರುವಾಗಿತ್ತು. ಪ್ರಕರಣ ಸಂಪೂರ್ಣವಾಗಿ ರಾಜಕೀಯ ಸ್ವರೂಪವನ್ನು ಪಡೆದಿತ್ತು. ಅಲ್ಲು ಅರ್ಜುನ್ ಅವರ ಜೂಬಿಲಿ ಹಿಲ್ಸ್ ನಲ್ಲಿರುವ ಮನೆ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು.


Click it and Unblock the Notifications











