ಜನಪ್ರಿಯ ನಿರ್ದೇಶಕನ ಪುತ್ರನನ್ನು ಬಂಧಿಸಿದ ಹೈದರಾಬಾದ್ ಪೊಲೀಸ್
ಜನಪ್ರಿಯ ಸಿನಿಮಾ ನಿರ್ದೇಶಕ ದಾಸರಿ ನಾರಾಯಣರಾವ್ ಪುತ್ರ ದಾಸರಿ ಅರುಣ್ ಅನ್ನು ಹೈದರಬಾದ್‌ನ ಬಂಜಾರಾ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ.
ದಾಸರಿ ಅರುಣ್ ನಿನ್ನೆ ಬೆಳಗ್ಗೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಬಂಜಾರಾ ಹಿಲ್ಸ್ ಬಳಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಬಂಜಾರ ಹಿಲ್ಸ್ ಬಳಿಯೇ ಪೊಲೀಸರು ದಾಸರಿ ಅರುಣ್ ಕಾರನ್ನು ಚೇಸ್ ಮಾಡಲು ಯತ್ನಿಸಿದ್ದರಾದರೂ ಸಾಧ್ಯವಾಗಿರಲಿಲ್ಲ. ಬಳಿಕ ಸಿಸಿಟಿವಿ ಕ್ಯಾಮೆರಾಗಳ ನೆರವಿನಿಂದ ಕಾರಿನ ಮಾಲೀಕರನ್ನು ಪತ್ತೆ ಹಚ್ಚಿ ಅರುಣ್ ನಿವಾಸಕ್ಕೆ ತೆರಳಿ ಅವರನ್ನು ಬಂಧಿಸಲಾಗಿದೆ.

ಅರುಣ್ ಕುಡಿತದಿಂದಾಗಿ ಸಮಸ್ಯೆ ಅನುಭವಿಸುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸಮಸ್ಯೆಗೆ ಸಿಲುಕಿದ್ದರು. ಕುಡಿದ ಮತ್ತಿನಲ್ಲಿ ಒಮ್ಮೆ ವ್ಯಕ್ತಿಯೊಬ್ಬನಿಗೆ ಕೊಲೆ ಬೆದರಿಕೆ ಹಾಕಿದ್ದು ಸಹ ಸುದ್ದಿಯಾಗಿತ್ತು.
ತೆಲುಗಿನಲ್ಲಿ ನಿರ್ದೇಶಕ ರತ್ನ ಎಂಬ ಸಂಪಾದಿಸಿರುವ ದಾಸರಿ ನಾರಾಯಣರಾವ್ ಕನ್ನಡ, ಹಿಂದಿ, ತಮಿಳು ಭಾಷೆಗಳ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಪುತ್ರ ಅರುಣ್ ಅನ್ನು 'ಗ್ರೀಕು ವೀರುಡು' ಸಿನಿಮಾ ಮೂಲಕ ನಾಯಕ ನಟನನ್ನಾಗಿ ದಾಸರಿ ಮಾಡಿದರು. ಆದರೆ ಅರುಣ್ ನಾಯಕ ನಟನಾಗಿ ಹಿಟ್ ಆಗಲಿಲ್ಲ.
'ಗ್ರೀಕು ವೀರುಡು' ಸಿನಿಮಾದ ಬಳಿಕ 'ಚಿನ್ನಾ', 'ಒರೇ ತಮ್ಮುಡು' ಹಾಗೂ 'ಆದಿವಿಷ್ಣು' ಸಿನಿಮಾಗಳಲ್ಲಿ ನಟಿಸಿದರು. 'ಗ್ರೀಕು ವೀರುಡು' ಸಿನಿಮಾ ಹೊರತುಪಡಿಸಿದರೆ ಇನ್ನಾವ ಸಿನಿಮಾಗಳೂ ಅರುಣ್ ದಾಸರಿ ಕೈ ಹಿಡಿಯಲಿಲ್ಲ. ಆ ಮೂಲಕ ಅವರೂ ಸಹ ಸಿನಿಮಾಗಳಿಂದ ದೂರ ಉಳಿಸಿದರು.
ನಿರ್ದೇಶಕ ದಾಸರಿ ನಾರಾಯಣರಾವ್ 2017ರಲ್ಲಿ ನಿಧನ ಹೊಂದಿದರು. ಅವರ ನಿಧನದ ಬಳಿಕ ಅರುಣ್ ದಾಸರಿಯ ಕುಡಿತದ ಚಟ ಇನ್ನಷ್ಟು ಹೆಚ್ಚಾಯಿತು. ಅಪ್ಪ ತೀರಿಕೊಂಡ ಬಳಿಕ ಅರುಣ್ ದಾಸರಿ ಹಾಗೂ ಸಹೋದರ ಹರಿ ಹರ ಪ್ರಭು ಆಸ್ತಿಗಾಗಿ ಕಿತ್ತಾಡಲು ಆರಂಭಿಸಿದರು. ಇವರಿಬ್ಬರ ಜಗಳ ಬೀದಿ ಜಗಳವಾಗಿ ಬದಲಾಯ್ತು. ಆಗ ತೆಲುಗು ಚಿತ್ರರಂಗದ ಪ್ರಮುಖರಾದ ಮೋಹನ್ ಬಾಬು ಮಧ್ಯೆ ಪ್ರವೇಶಿಸಿ ತಾವು ಆಸ್ತಿ ವಿವಾದವನ್ನು ಸರಿ ಮಾಡುವುದಾಗಿ ಭರವಸೆ ನೀಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಚಿರಂಜೀವಿ ಇವರ ಆಸ್ತಿ ವಿವಾದದ ಮಧ್ಯಸ್ಥಿಕೆ ವಹಿಸುತ್ತಾರೆ ಎನ್ನಲಾಯ್ತು ಆದರೆ ಅದು ಸಹ ಆಗಲಿಲ್ಲ.
ದಾಸರಿ ನಾರಾಯಣ ರಾವ್ ಕನ್ನಡದಲ್ಲಿ 1981 ರಲ್ಲಿ ಬಿಡುಗಡೆ ಆದ 'ಸ್ವಪ್ನ' ಸಿನಿಮಾ ನಿರ್ದೇಶಮನ ಮಾಡಿದ್ದಾರೆ. ಬಳಿಕ 'ಮಗ ಮೊಮ್ಮಗ' ಹಾಗೂ ದ್ವಾರಕೀಶ್ ನಟಿಸಿರುವ 'ಪೊಲೀಸ್ ಪಾಪಣ್ಣ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ.


Click it and Unblock the Notifications











