ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ಬಿಗ್‌ಬಿ, ಪ್ರಭಾಸ್‌ಗೆ ಲೀಗಲ್ ನೋಟಿಸ್
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898AD' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಕೆಲವರಿಗೆ ಸಿನಿಮಾ ಇಷ್ಟವಾಗಲಿಲ್ಲ. ಒಂದಷ್ಟು ಟೀಕೆಗಳು ಕೇಳಿಬಂದವು. ಎಲ್ಲವನ್ನೂ ಮೀರಿ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.
ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಘಟಾನುಘಟಿ ಕಲಾವಿದರು 'ಕಲ್ಕಿ 2898AD' ಚಿತ್ರದಲ್ಲಿ ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ದ್ವಾಪರಯುಗಕ್ಕೂ ಕಲ್ಕಿ ಪುರಾಣಕ್ಕೂ ಲಿಂಕ್ ಮಾಡಿ ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ನಾಗ್ ಅಶ್ವಿನ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಕಲ್ಕಿ 2898AD' ಸಿನಿಮಾ ಇಷ್ಟೆಲ್ಲಾ ಸದ್ದು ಮಾಡುತ್ತಿರುವಾಗಲೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಮಾಜಿ ಕಾಂಗ್ರೆಸ್ ನಾಯಕ, ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಲ್ಕಿ ಚಿತ್ರದ ನಿರ್ಮಾಪಕರು, ನಟರಾದ ಪ್ರಭಾಸ್, ಬಿಗ್‌ಬಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ದೇವರನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಹಿಂದೂ ಪುರಾಣಗಳಿಗಿಂತ ವಿಭಿನ್ನವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಪುರಾಣದಲ್ಲಿ ವಿವರಿಸಿದಂತೆ ಈ ಚಿತ್ರ ಇಲ್ಲ. ಕಲ್ಕಿಯ ಕಥೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ಇದು ಪವಿತ್ರ ಗ್ರಂಥಗಳಿಗೆ ಅಪಮಾನ ಮಾಡಿದಂತಾಗುತ್ತದೆ. ಈ ಗ್ರಂಥಗಳು ಕೋಟ್ಯಂತರ ಜನರ ನಂಬಿಕೆಗಳ ಬುನಾದಿಯಾಗಿದೆ ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಚಿತ್ರದಲ್ಲಿ ಕಲ್ಕಿಯನ್ನು ತೋರಿಸಿರುವ ಬಗ್ಗೆ ಹಿಂದೂಗಳಲ್ಲಿ ಗೊಂದಲ ಉಂಟು ಮಾಡಿದೆ. ಕಲ್ಕಿ ದೇವರ ಪ್ರಸ್ತುತತೆ ಮತ್ತು ಅವನ ಸುತ್ತಲಿನ ಆಧ್ಯಾತ್ಮಿಕತೆಗೆ ಧಕ್ಕೆ ತಂದಿದೆ ಎಂದಿದ್ದಾರೆ.
ಕಲ್ಕಿ ಬಗ್ಗೆ ತಪ್ಪಾಗಿ ಅರ್ಥೈಸಿದರೆ, ಅದು ಹಿಂದೂ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಎಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಒಟ್ಟಾರೆ ಹಿಂದೂ ಸಮುದಾಯದ ನಂಬಿಕೆಗಳ ಮೇಲೆ ಒತ್ತಡ ಹೇರುವ ಅಪಾಯವಿದೆ ಎಂದು ಆತಂ ವ್ಯಕ್ತಪಡಿಸಿದ್ದಾರೆ.

ಆಚಾರ್ಯ ಪ್ರಮೋದ್ ಪ್ರತಿಕ್ರಿಯಿಸಿ "ವಿಷ್ಣುವಿನ ಅವತಾರಗಳಲ್ಲಿ ಕಲ್ಕಿ ಕೊನೆ ಅವತಾರ. ಅನೇಕ ಪುರಾಣಗಳು ಅವರಿಗೆ ಅಂಕಿತವಾಗಿದೆ. ಪ್ರಧಾನಿ ಮೋದಿ ಫೆಬ್ರವರಿ 19 ರಂದು ಯುಪಿಯ ಸಂಭಾಲ್‌ನಲ್ಲಿ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ಮಾಡಿದರು, ಅಲ್ಲಿ ಕಲ್ಕಿ ಜನಿಸುತ್ತಾರೆ ಎಂದು ಹೇಳಲಾಗುತ್ತದೆ. ಇಡೀ ಜಗತ್ತು ಅವನಿಗಾಗಿ ಕಾಯುತ್ತಿದೆ. ಆದರೆ, ಈ ಚಿತ್ರ ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಆರೋಪಿಸಿದ್ದಾರೆ.
'ಕಲ್ಕಿ 2898AD' ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಸದ್ಯಕ್ಕೆ 'ಕಲ್ಕಿ' ಪಾತ್ರ ಇನ್ನು ಕಥೆಯಲ್ಲಿ ಎಂಟ್ರಿ ಆಗಿಲ್ಲ. ಅದರ ಸುತ್ತಾ ಒಂದಷ್ಟು ಪಾತ್ರಗಳನ್ನು ಪರಿಚಯಿಸುವ ಕೆಲಸ ಮಾಡಲಾಗಿದೆ. ಮುಖ್ಯವಾಗಿ ಅಶ್ವತ್ಥಾಮ ಹಾಗೂ ಕರ್ಣನ ಪುನರ್ಜನ್ಮ ಎನ್ನುವಂತೆ ಭೈರವ ಪಾತ್ರವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕುರುಕ್ಷೇತ್ರ ಯುದ್ಧದ ಒಂದಷ್ಟು ಸನ್ನಿವೇಶಗಳನ್ನು ತೋರಿಸಿ ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ.
ಸೀಕ್ವೆಲ್‌ನಲ್ಲಿ ಕುರುಕ್ಷೇತ್ರದ ಮತ್ತಷ್ಟು ವಿಚಾರಗಳು, ಕರ್ಣನ ಪಾತ್ರದ ಬಗ್ಗೆ ಮತ್ತಷ್ಟು ಸಂಗತಿಗಳನ್ನು ತೋರಿಸುವ ಸಾಧ್ಯತೆಯಿದೆ. ಸ್ಪೆಷಲ್ ವೀಡಿಯೋ ಮೂಲಕ ಪ್ರಭಾಸ್ ಇತ್ತೀಚೆಗೆ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು. ಅಮಿತಾಬ್ ಬಚ್ಚನ್‌ಗೂ ಕೂಡ ಅಶ್ವತ್ಥಾಮ ಪಾತ್ರ ಭಾರೀ ಮನ್ನಣೆ ತಂದು ಕೊಟ್ಟಿದೆ. ಬಿಗ್‌ಬಿಗೆ ಕೂಡ ಬಹಳ ದಿನಗಳ ಬಳಿಕ ಭಾರೀ ಸಕ್ಸಸ್ ಸಿಕ್ಕಂತಾಗಿದೆ.


Click it and Unblock the Notifications











