ತೆಲುಗಿನ ಖ್ಯಾತ ನಟ ಹಾಗೂ ಪುತ್ರನ ಮಧ್ಯೆ ಕಿರಿಕ್; ಪರಸ್ಪರ ಹಲ್ಲೆ? ದೂರು ದಾಖಲು
ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು ಮನೆ ಆಸ್ತಿ ವಿವಾದ ಹಾಗೂ ಕೌಟುಂಬಿಕ ಕಲಹ ಮತ್ತೊಮ್ಮೆ ಬೀದಿಗೆ ಬಂದಿದೆ. ತಂದೆ- ಮಗನ ನಡುವೆ ಇದೇ ವಿಚಾರಕ್ಕೆ ಜಗಳ ನಡೆದು, ಒಬ್ಬರ ಮೇಲೊಬ್ಬರು ದಾಳಿ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ ಈ ಸಂಬಂಧ ಇಬ್ಬರೂ ಕೂಡ ದೂರು ದಾಖಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆಸ್ತಿ ವಿಚಾರದಲ್ಲಿ ಜಗಳ ನಡೆದಿದೆ ಎನ್ನವ ಮಾತುಗಳು ಕೇಳಿಬರ್ತಿದೆ. ಟಾಲಿವುಡ್ ಕಲೆಕ್ಷನ್ ಕಿಂಗ್ ಅಂತ್ಲೇ ಮೋಹನ್ ಬಾಬು ಹೆಸರು ಮಾಡಿದವರು. ಒಂದ್ಕಾಲದಲ್ಲಿ ಖಳನಟನಾಗಿ ಬಳಿಕ ಹೀರೊ ಆಗಿ ಸಕ್ಸಸ್ ಕಂಡವರು. ದುಡಿದ ಹಣವನ್ನು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿ ಭಾರೀ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ಈಗ ಮಕ್ಕಳ ನಡುವೆ ಸಂಘರ್ಷ ಏರ್ಪಟ್ಟಿದೆ.

ಈ ಹಿಂದೆ ಸಹೋದರ ವಿಷ್ಣು ಜೊತೆಗೂ ಮನೋಜ್ ಕಿರಿಕ್ ಮಾಡಿಕೊಂಡಿದ್ದರು. ನಟ ಮೋಹನ್ ಬಾಬುಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಇದ್ದಾಳೆ. ತಂದೆಯ ಹಾದಿಯಲ್ಲಿ ಮೂವರು ಚಿತ್ರರಂಗಕ್ಕೆ ಬಂದರು. ಆದರೆ ದೊಡ್ಡದಾಗಿ ಯಶಸ್ಸು ಸಿಗಲಿಲ್ಲ. ಮೋಹನ್ ಬಾಬು ಸಹ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರಾಗಿದ್ದಾರೆ.
ಇದೀಗ ಆಸ್ತಿಗಾಗಿ ವಿಚಾರಕ್ಕೆ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಮೋಹನ್ ಬಾಬು- ಮನೋಜ್ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು ಎನ್ನಲಾಗ್ತಿದೆ. ಕಿರಿಕ್ ಬಳಿಕ ಮನೋಜ್ ಪೊಲೀಸ್ ಠಾಣೆ ಮೆಟ್ಟಿಲೇರಿ ತಂದೆ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಮನೋಜ್ ನನ್ನ ಮೇಲೆ ದಾಳಿ ಮಾಡಿದ ಎಂದು ಮೋಹನ್ ಬಾಬು ಸಹ ದೂರು ನೀಡಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಇನ್ನು ಮಂಚು ಫ್ಯಾಮಿಲಿ ಪಿಆರ್ ಪ್ರತಿಕ್ರಿಯಿಸಿ ಇದೆಲ್ಲಾ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ವಾಸ್ತವಾಂಶ ಇಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ತಂದೆ- ಮಗನ ನಡುವೆ ಜಗಳ ನಡೆದಿದೆ ಎನ್ನುವುದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ತನ್ನ ಸಹಚರರ ಮೂಲಕ ನಮ್ಮ ತಂದೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮನೋಜ್ ಹೇಳಿರುವುದಾಗಿಯೂ ಸುದ್ದಿ ಹರಿದಾಡುತ್ತಿದೆ.
ಇಬ್ಬರು ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿಲ್ಲ, ಬದಲಿಗೆ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಮೋಹನ್ ಬಾಬು ಸಹಚರ ವಿನಯ್ ಹಾಗೂ ಮತ್ತೆ ಕೆಲವರು ಮನೋಜ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ. ಮನೋಜ್ ಈ ಸಂಬಂಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರಂತೆ. ತಮ್ಮ ತಂದೆಯ ಆಣತಿಯಂತೆ ವಿನಯ್ ಹಲ್ಲೆ ಮಾಡಿದ್ದಾನೆ ಎಂದು ಮನೋಜ್ ಆರೋಪಿದ್ದಾರೆ ಎನ್ನಲಾಗ್ತಿದೆ.
ಮನೋಜ್ ಕಳೆದ ವರ್ಷ ಎರಡನೇ ಮದುವೆ ಆಗಿದ್ದರು. ತಮ್ಮ ಪತ್ನಿ ಮೇಲೆ ಕೂಡ ಹಲ್ಲೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಹಿಂದೆ ಸಹೋದರ ವಿಷ್ಣು ಜೊತೆಗೂ ಮನೋಜ್ ಜಗಳ ಮಾಡಿಕೊಂಡಿದ್ದರು. ಮನೆಯಲ್ಲಿ ಇಬ್ಬರೂ ಜೋರಾಗಿ ಕೂಗಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಮನೋಜ್ ಎರಡನೇ ಮದುವೆ ಮನೆಯವರಿಗೆ ಇಷ್ಟವಿರಲಿಲ್ಲ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅಂದು ವಿಷ್ಣು ಜೊತೆ ಕಿರಿಕ್ ನಡೆದಿದ್ದು ಎನ್ನುವ ಊಹಾಪೋಹ ಕೇಳಿಬಂದಿತ್ತು. ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಾರಥಿ ಎಂಬಾತನ ಮನೆಗೆ ನುಗ್ಗಿ ವಿಷ್ಣು ಗಲಾಟೆಗೆ ಯತ್ನಿಸಿದ್ದು ಆ ವೀಡಿಯೋದಲ್ಲಿ ನೋಡಬಹುದು. ಈ ವೀಡಿಯೋವನ್ನು ಸ್ವತಃ ಮನೋಜ್ ಹಂಚಿಕೊಂಡಿದ್ದರು.


Click it and Unblock the Notifications











